ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ 101 ಪರಿಶಿಷ್ಟ ಜಾತಿಗಳಿಗೆ ಸಿಗಲಿದೆ ಎಸ್ಸಿ ಪ್ರಮಾಣಪತ್ರ
ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರಿಗೆ ಎಸ್ಸಿ ಪ್ರಮಾಣಪತ್ರ ನೀಡುವುದು ಮತ್ತು ಅವರ ಪ್ರಮಾಣಪತ್ರದಲ್ಲಿ ಧರ್ಮದ ಕಾಲಂನಲ್ಲಿ 'ಬೌದ್ಧ' ಎಂದು ನಮೂದಿಸಲು 1990ರಲ್ಲೇ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿತ್ತು.
ಸಾಂದರ್ಭಿಕ ಚಿತ್ರ
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 101 ಉಪಜಾತಿಗಳ ಜನರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರೂ, ಅವರಿಗೆ ಪರಿಶಿಷ್ಟ ಜಾತಿ (SC) ಪ್ರಮಾಣಪತ್ರ ನೀಡುವುದನ್ನು ಮುಂದುವರಿಸಲು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟ ಆದೇಶ ಹೊರಡಿಸಿದೆ. ಈ ಮೂಲಕ, ಮತಾಂತರದ ನಂತರವೂ ಮೀಸಲಾತಿ ಸೌಲಭ್ಯಗಳು ಮುಂದುವರಿಯಲಿವೆ.
ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರಿಗೆ ಎಸ್ಸಿ ಪ್ರಮಾಣಪತ್ರ ನೀಡುವುದು ಮತ್ತು ಅವರ ಪ್ರಮಾಣಪತ್ರದಲ್ಲಿ ಧರ್ಮದ ಕಾಲಂನಲ್ಲಿ 'ಬೌದ್ಧ' ಎಂದು ನಮೂದಿಸಲು 1990ರಲ್ಲೇ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿತ್ತು. ಆದಾಗ್ಯೂ, ಈ ನಿಯಮದ ಅನುಷ್ಠಾನದಲ್ಲಿ ಗೊಂದಲಗಳು ಮುಂದುವರಿದಿದ್ದವು.
ಹಲವಾರು ಸಂಘ-ಸಂಸ್ಥೆಗಳು ಈ ಗೊಂದಲವನ್ನು ನಿವಾರಿಸಿ, ಸ್ಪಷ್ಟವಾದ ಆದೇಶವನ್ನು ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಮನವಿಗಳನ್ನು ಪರಿಗಣಿಸಿದ ಸಮಾಜ ಕಲ್ಯಾಣ ಇಲಾಖೆಯು ಇದೀಗ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. ಈ ಆದೇಶದ ಪ್ರಕಾರ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಉಪಜಾತಿಗಳಿಗೆ ಸೇರಿದ ವ್ಯಕ್ತಿಗಳು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರೂ ಸಹ, ಅವರು ಪರಿಶಿಷ್ಟ ಜಾತಿಗೆ ನೀಡಲಾಗುವ ಎಲ್ಲಾ ಸಾಂವಿಧಾನಿಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಮೂಲಕ ದಶಕಗಳಿಂದ ಇದ್ದ ಗೊಂದಲಕ್ಕೆ ತೆರೆ ಎಳೆಯಲಾಗಿದೆ.