‌ಕುಮಾರಸ್ವಾಮಿ ಕೆಲಸ ಮಾಡಿಲ್ಲ ಎನ್ನುವುದಕ್ಕೆ 10 ಸಾವಿರ ಅರ್ಜಿಗಳೇ ಸಾಕ್ಷಿ: ಡಿ.ಕೆ. ಶಿವಕುಮಾರ್

Update: 2024-07-08 06:37 GMT

ʻಚನ್ನಪಟ್ಟಣದ ಜನರು ತಮ್ಮ ಕುಂದುಕೊರತೆಗಳ ಬಗ್ಗೆ 10 ಸಾವಿರ ಅರ್ಜಿಗಳನ್ನು ಕೊಟ್ಟಿದ್ದಾರೆ. ಅಂದರೆ ಈ ಹಿಂದೆ ಶಾಸಕರಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಜನರ ಪರ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?ʼʼ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ರಾಜ್ಯ ಸರ್ಕಾರ ಏನು ಕೆಲಸ ಮಾಡುತ್ತಿಲ್ಲ ಮತ್ತು ಅದಕ್ಕಾಗಿ ನನಗೆ 3 ಸಾವಿರ ಅಹವಾಲು ಅರ್ಜಿಗಳು ಬಂದಿದೆ ಎಂದು ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದರು.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ʻʻಅವರು ಹೇಳೋದು ಸರಿ ಇದೆ. ನನಗೆ ಚನ್ನಪಟ್ಟಣ ಒಂದೇ ಕ್ಷೇತ್ರದಲ್ಲಿ ಜನತೆ 10,000 ಅರ್ಜಿ ಕೊಟ್ಟಿದ್ದಾರೆ. ಅರ್ಜಿ ಕೊಟ್ಟವರ ಫೋನ್​ ಸಂಖ್ಯೆ ಮತ್ತು ಅರ್ಜಿ ಇದೆ. ಆ ಅರ್ಜಿಗಳನ್ನೆಲ್ಲಾ ಕೌಂಟರ್​ನಲ್ಲಿ ಸ್ವೀಕಾರ ಮಾಡಿದ್ದೇವೆ. ಎಚ್​ಡಿಕೆ ಏನೂ ಕೆಲಸ ಮಾಡಿಲ್ಲ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ?ʼʼ ಎಂದು ಮರು ಪ್ರಶ್ನಿಸಿದರು.

ʻʻಅವರು ಮಾತ್ರ ರಾಜಕಾರಣ ಮಾಡುತ್ತಾರಾ?, ನಮಗೆ ರಾಜಕಾರಣ ಮಾಡಲು ಬರುತ್ತೆ. ಆದರೆ, ನಮಗೆ ರಾಜಕಾರಣ ಮುಖ್ಯ ಅಲ್ಲ.‌ ಜನರ ಸೇವೆ ಮಾಡಬೇಕು ಎಂಬುದು ನಮಗೆ ಮುಖ್ಯ'' ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.‌

ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ತಯಾರಿಯಾಗಿ ಈಗ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಡಿ ಕೆ ಶಿವಕುಮಾರ್‌ ಸಹೋದರರ ನಡುವೆ ಇದೀಗ ಭಾರೀ ಪೈಪೋಟಿ ಆರಂಭವಾಗಿದ್ದು, ಚನ್ನಪಟ್ಟಣದ ಮೇಲೆ ಹಿಡಿತ ಸಾಧಿಸಲು ಜಿದ್ದಿಗೆ ಬಿದ್ದಿದ್ದಾರೆ.

Tags:    

Similar News