ಹಾವೇರಿ | ಮತದಾನದ ಮಾರನೇ ದಿನವೇ ಕಾಲುವೆಯಲ್ಲಿ ಪತ್ತೆಯಾದ ಬ್ಯಾಲೆಟ್ ಬಾಕ್ಸ್!
ಹಾವೇರಿ ಜಿಲ್ಲೆಯ ಯತ್ನಳ್ಳಿ ರಸ್ತೆ ಬದಿಯ ಕಾಲುವೆಯಲ್ಲಿ 10 ಬ್ಯಾಲೇಟ್ ಬಾಕ್ಸ್‌ಗಳು ಪತ್ತೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬುಧವಾರ ನಡೆದ ಮತದಾನದ ಮರು ದಿನವೇ ಹಾವೇರಿ ಜಿಲ್ಲೆಯ ಯತ್ನಳ್ಳಿ ರಸ್ತೆ ಬದಿಯ ಕಾಲುವೆಯಲ್ಲಿ 10 ಬ್ಯಾಲೆಟ್ ಬಾಕ್ಸ್‌ಗಳು ಪತ್ತೆಯಾಗಿವೆ.
ಹೊಲದ ಕಾಲುವೆಯಲ್ಲಿ ಈ ಬ್ಯಾಲೆಟ್ ಬಾಕ್ಸ್‌ಗಳು ಸಿಕ್ಕಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಈ ಬ್ಯಾಲೆಟ್ ಬಾಕ್ಸ್‌ಗಳು ಹಳೆಯದ್ದಾಗಿವೆ. ಶಿಗ್ಗಾವಿ ಚುನಾವಣೆಗೂ ಈ ಬಾಕ್ಸ್‌ಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ಗುರುವಾರ ವಾಯು ವಿಹಾರಕ್ಕೆಂದು ಹೋಗಿದ್ದ ಗ್ರಾಮಸ್ಥರೊಬ್ಬರಿಗೆ ಕಾಲುವೆಯಲ್ಲಿ ಕಬ್ಬಿಣದ ಬಾಕ್ಸ್‌ಗಳು ಕಂಡುಬಂದಿದ್ದವು. ಅವುಗಳು ಏನೆಂದು ನೋಡಲು ಹೋದಾಗ ಅವುಗಳು ಬ್ಯಾಲೆಟ್ ಬಾಕ್ಸ್‌ಗಳು ಎಂದು ತಿಳಿದುಬಂದಿತ್ತು. ವಿಷಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಜಿಲ್ಲಾಡಳಿತ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಕಾಲುವೆಯಲ್ಲಿ ಪತ್ತೆಯಾಗಿರುವ ಬ್ಯಾಲೆಟ್ ಬಾಕ್ಸ್‌ಗಳ ಕುರಿತ ವರದಿಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, 'ಕಾಲುವೆಯಲ್ಲಿ ಕಬ್ಬಿಣದ ಬಾಕ್ಸ್‌ಗಳು ಬಿದ್ದಿರುವ ಮಾಹಿತಿ ಸಿಕ್ಕಿದೆ. ಪರಿಶೀಲನೆ ನಡೆಸುವಂತೆ ತಹಶೀಲ್ದಾರ್ ಅವರಿಗೆ ಹೇಳಿದ್ದೇನೆ. ಈ ಬಾಕ್ಸ್‌ಗಳು ಹಳೆಯದ್ದು. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೂ ಆ ಬಾಕ್ಸ್‌ಗಳಿಗೂ ಯಾವುದೇ ಸಂಬಂಧವಿಲ್ಲ. ಆ ಬಗ್ಗೆ ಯಾವುದೇ ಅನುಮಾನಪಡುವ ಅಗತ್ಯವೂ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಉಪ ಚುನಾವಣೆಯ ಮಾರನೇ ದಿನವೇ ಈ ಬ್ಯಾಲೆಟ್ ಬಾಕ್ಸ್‌ಗಳು ದಿಢೀರನೇ ಹೊಲದ ಕಾಲುವೆಯಲ್ಲಿ ಪತ್ತೆಯಾಗಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.