ಅಲೆಮಾರಿಗಳಿಗೆ ಶೇ1 ಮೀಸಲು; ಪರಿಶಿಷ್ಟರ ಒಟ್ಟು ಮೀಸಲಾತಿ ಶೇ 17 ರಿಂದ 18ಕ್ಕೆ ಏರಿಸಲು ಚಿಂತನೆ
ಪರಿಶಿಷ್ಟರ ಮೀಸಲಾತಿ ಹಂಚಿಕೆಯನ್ನು ಶೇ.17ರಿಂದ ಶೇ.18ಕ್ಕೆ ಹೆಚ್ಚಳ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಮೀಸಲಾತಿ ಹೆಚ್ಚಳದ ಮಸೂದೆಯನ್ನು ಡಿಸೆಂಬರ್ ನಲ್ಲಿ ನಡೆಯಲಿರುವ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪರಿಶಿಷ್ಟ ಜಾತಿಗಳಿಗೆ ಹಂಚಿಕೆ ಮಾಡಿರುವ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ 17 ರಿಂದ 18ಕ್ಕೆ ಏರಿಸಿ, ಅಲೆಮಾರಿ ಸಮುದಾಯಗಳಿಗೆ ಶೇ 1 ಮೀಸಲಾತಿ ಒದಗಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಬುಧವಾರ ನಡೆ ಒಳಮೀಸಲು ಕುರಿತ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ್ದು, ಮೀಸಲಾತಿ ಹಂಚಿಕೆಯನ್ನು ಶೇ.17ರಿಂದ ಶೇ.18ಕ್ಕೆ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಮೀಸಲಾತಿ ಹೆಚ್ಚಳದ ಮಸೂದೆಯನ್ನು ಡಿಸೆಂಬರ್ ನಲ್ಲಿ ನಡೆಯಲಿರುವ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಧಿವೇಶನಕ್ಕೂ ಮುನ್ನ ಸುಗ್ರೀವಾಜ್ಞೆ ಮೂಲಕ ಒಳಮೀಸಲು ಜಾರಿಗೆ ತರಬೇಕೆಂಬ ಪ್ರಸ್ತಾವದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಒಳ ಮೀಸಲಾತಿ ಹಂಚಿಕೆ ನಿರ್ಣಯಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಭಾಗವಹಿಸಿದ್ದ ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ಎಚ್. ಕೆ.ಪಾಟೀಲ್, ಶಿವರಾಜ ತಂಗಡಗಿ, ಪ್ರಿಯಾಂಕ ಖರ್ಗೆ, ಬಿ. ಆರ್.ತಿಮ್ಮಾಪುರ್ ಅವರು ಕೂಡ ಒಟ್ಟು ಮೀಸಲಾತಿ ಶೇ 18ಕ್ಕೆ ಏರಿಸಿ, ಅಲೆಮಾರಿಗೆ ಶೇ 1 ಮೀಸಲಾತಿ ಕಲ್ಪಿಸುವ ಪ್ರಸ್ತಾಪಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ಎಚ್.ಎನ್.ನಾಗಮೋಹನ್‌ದಾಸ್ ಆಯೋಗದ ಮೂಲ ವರದಿ ಪ್ರಕಾರವೇ ಅಲೆಮಾರಿಗಳಿಗೆ ಶೇ 1 ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಅಲೆಮಾರಿ ಸಮುದಾಯಗಳು ಆಗ್ರಹಿಸಿದ್ದವು. ಅಲ್ಲದೇ ಸಚಿವ ಸಂಪುಟ ಸಭೆಯ ನಿರ್ಣಯವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು.
ರಾಜ್ಯ ಸರ್ಕಾರವು ನಾಗಮೋಹನ್ ದಾಸ್ ವರದಿಯಲ್ಲಿ ಶಿಫಾರಸು ಮಾಡಿದ್ದ ಐದು ಪ್ರವರ್ಗಗಳನ್ನು ಮೂರಕ್ಕೆ ಇಳಿಸಿ, ಮೀಸಲಾತಿ ಹಂಚಿಕೆ ಮಾಡಿತ್ತು. ಲಂಬಾಣಿ, ಭೋವಿ, ಕೊರಚ,ಕೊರಮ ಜಾತಿಗಳಿರುವ ಪ್ರವರ್ಗ ಸಿ ಗೆ ಅಲೆಮಾರಿಗಳನ್ನು ಸೇರಿಸಿತ್ತು. ಆ ಮೂಲಕ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಶೇ.6, ಎಡಗೈ ಶೇ.6 ಹಾಗೂ ಪ್ರವರ್ಗ ಸಿ ಗೆ ಶೇ.5ರಷ್ಟು ಒಳಮೀಸಲು ಹಂಚಿಕೆ ಮಾಡಲಾಗಿತ್ತು. ಮುಂದುವರಿದ ಜಾತಿಗಳೊಂದಿಗೆ ತಮ್ಮನ್ನು ಸೇರಿಸಿರುವ ಸರ್ಕಾರದ ಕ್ರಮ ವಿರೋಧಿಸಿ ಅಲೆಮಾರಿ ಸಮುದಾಯಗಳು ಪ್ರತಿಭಟನೆ ನಡೆಸಿದ್ದವು.
ಸಿಎಂ ನೀಡಿದ ಸೂಚನೆಗಳೇನು?
ಜಾತಿ ಪ್ರಮಾಣ ಪತ್ರ ಯಾವ ರೀತಿಯಲ್ಲಿ ನೀಡಬೇಕು ಎಂಬ ಕುರಿತು ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದೆ. ಅಭ್ಯರ್ಥಿಗಳ ವಯೋಮಿತಿಯನ್ನು ಒಂದು ಅವಧಿಗೆ ಹೆಚ್ಚಳ ಮಾಡಲಾಗಿದೆ. ಕೆಇಎಯಲ್ಲಿ ಈಗಾಗಲೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.
ಒಳ ಮೀಸಲಾತಿ ಜಾರಿ ಕುರಿತಾಗಿ ಸುಪ್ರೀಂಕೋರ್ಟ್ ನಿರ್ದೇಶನಗಳ ಪ್ರಕಾರ ಕಾಯ್ದೆ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ನಡೆದ ಸಭೆಯಲ್ಲಿ ಹೇಳಿದ್ದರು.