ಹೊಗಳುಭಟರ ಮತ್ತು ಕೊಲೆಗಡುಕರ ʼಸಿದ್ದರಾಮಯ್ಯ ಸರ್ಕಾರʼ: ವಿಜಯೇಂದ್ರ ಟೀಕೆ
ಕಳೆದೊಂದು ವರ್ಷದ ಈ ರಾಜ್ಯ ಸರಕಾರದ ಸಾಧನೆ ಶೂನ್ಯ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೊಗಳುಭಟರು, ಜಾಹೀರಾತಿನ ಮೂಲಕ ತಮ್ಮನ್ನು ತಾವು ಹೊಗಳಿಸಿಕೊಳ್ಳುವುದು ಮತ್ತು ಅಭಿವೃದ್ಧಿ ಆಗಿದೆ ಎಂದು ಬಿಂಬಿಸುವ ಕೆಲಸವನ್ನಷ್ಟೇ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಯೇ ಅಭಿವೃದ್ಧಿಯೇ ಎಂದು ಬಿಂಬಿಸಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಗ್ಯಾರಂಟಿಗೆ ಪ್ರಚಾರ ಕೊಟ್ಟು, ಅದರ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಗಿದೆ ಎಂದು ಬಿಂಬಿಸುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ ಬರಗಾಲದ ವಿಚಾರದಲ್ಲಿ ಸರಕಾರದ ನಡವಳಿಕೆ ಅಕ್ಷಮ್ಯ ಅಪರಾಧ. ಕೇಂದ್ರ ಸರಕಾರದಿಂದ ಅನುದಾನ ಬಂದಿಲ್ಲ ಎಂದು ಹೋರಾಟ ಮಾಡಿದರು. ಆದರೆ, ಚುನಾಯಿತ ಸರಕಾರದ ಜವಾಬ್ದಾರಿ, ಮುಖ್ಯಮಂತ್ರಿಗಳ ಹೊಣೆಯನ್ನು ನಿಭಾಯಿಸುತ್ತಿದ್ದಾರೆ ಎಂದು ರೈತರಿಗೆ ಯಾವತ್ತೂ ಅನಿಸಿಲ್ಲ ಎಂದು ಬಿ.ವೈ.ವಿಜಯೇಂದ್ರ ಖಂಡಿಸಿದರು.
ರಾಜ್ಯದಲ್ಲಿ 692ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ರಾಜ್ಯ ಸರಕಾರವು ಕೃಷಿ ಸಾಲ, ಬೆಳೆ ನಷ್ಟಕ್ಕೆ ಪರಿಹಾರ ಕೊಡುವ ನಿಟ್ಟಿನಲ್ಲಿ ಗಂಭೀರವಾದ ಅಥವಾ ಜವಾಬ್ದಾರಿಯುತ ಸರಕಾರವಾಗಿ ನಡೆದುಕೊಳ್ಳದೆ ಇರುವುದು ದುರದೃಷ್ಟಕರ. ರೈತರ ಬಗೆಗಿನ ಸರಕಾರದ ಅಸಡ್ಡೆಯ ಧೋರಣೆ ಗೋಚರಿಸಿದೆ. ಸರಕಾರವು ಜವಾಬ್ದಾರಿಯುತವಾಗಿ ನಡೆದುಕೊಂಡಿದೆಯೇ? ತನ್ನ ಹೊಣೆ ನಿಭಾಯಿಸಿದೆಯೇ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಕೇಂದ್ರ ಸರಕಾರದ ಜೊತೆ ಸಂಘರ್ಷ
ಕೇಂದ್ರ ಸರಕಾರದ ಜೊತೆ ಸಂಘರ್ಷದ ಹಾದಿಯನ್ನು ತೆಗೆದುಕೊಂಡಿರುವುದೇ ಈ ಸರಕಾರದ ಸಾಧನೆ ಎಂದು ವಿಜಯೇಂದ್ರ ಅವರು ಟೀಕಿಸಿದರು. ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ರಾಜ್ಯ ಸರಕಾರವು ಕೇಂದ್ರ ಸರಕಾರದ ವಿರುದ್ಧ ಟೀಕೆ ಮಾಡುವುದು, ಗೂಬೆ ಕೂರಿಸುವುದನ್ನು, ಎಲ್ಲ ವಿಚಾರದಲ್ಲೂ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ಕೇಂದ್ರ ಸರಕಾರದತ್ತ ಬೆಟ್ಟು ಮಾಡುವುದನ್ನು ಯಶಸ್ವಿಯಾಗಿ ಮಾಡುತ್ತ ಬಂದಿದೆ ಎಂದು ಆಕ್ಷೇಪಿಸಿದರು.
ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಹೇಳಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ತಮಿಳುನಾಡಿಗೆ ಯಥೇಚ್ಛವಾಗಿ ನೀರು ಬಿಟ್ಟಿದ್ದಾರೆ. ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ತಮಿಳುನಾಡಿಗೆ ನೀರು ಬಿಟ್ಟು ಬೆಳೆದು ನಿಂತ ಬೆಳೆಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಹೋರಾಟ ಮಾಡಿದ ರೈತರನ್ನು ಜೈಲಿಗೆ ಅಟ್ಟುವ ಕೆಲಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ರೈತರ ಬಗ್ಗೆ ಮೊಸಳೆಕಣ್ಣೀರು ಹಾಕುವ ರೈತ ವಿರೋಧಿ ಸರಕಾರ ಎಂದು ಟೀಕಿಸಿದರು.
ಕೊಲೆಗಡುಕರ ಸರ್ಕಾರ
ಕರ್ನಾಟಕ ಎಂದರೆ ಕೊಲೆಗಡುಕರ ಸರಕಾರ ಎಂದು ದೇಶದೆಲ್ಲೆಡೆ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮಾತು ಕೇಳುತ್ತಿದೆ. ಕೊಲೆ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯ ಸರಕಾರ ನಿಷ್ಕ್ರಿಯವಾಗಿದೆ. ಲವ್ ಜಿಹಾದ್ ಪ್ರಕರಣದಲ್ಲಿ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದೆ. ಕೊಲೆಗಡುಕರಿಗೆ ಶಕ್ತಿ ಕೊಡುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆಯೇ ಎಂಬ ಪ್ರಶ್ನೆಯನ್ನು ಕೇಳುವಂತಾಗಿದೆ. ಮಹಿಳಾ ಸುರಕ್ಷತೆ ಬಗ್ಗೆ ಯಕ್ಷಪ್ರಶ್ನೆ ಮೂಡಿದೆ. ಅಭಿವೃದ್ಧಿ ಇಲ್ಲ. ರೈತರ ವಿಚಾರದಲ್ಲಿ ಕಾಳಜಿ ಇಲ್ಲದಂತಾಗಿದೆ. ಲವ್ ಜಿಹಾದ್ ಹೆಚ್ಚಳ, ಹಿಂದೂ ಕಾರ್ಯಕರ್ತರ ಹತ್ಯೆಯೂ ದಿನೇದಿನೇ ಹೆಚ್ಚಾಗುತ್ತಿದ್ದರೂ ಸರಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ಹುಬ್ಬಳ್ಳಿ ಕಾಲೇಜು ಕ್ಯಾಂಪಸ್ಸಿನ ನೇಹಾ ಹತ್ಯೆ ಪ್ರಕರಣ, ಮನೆಗೆ ನುಗ್ಗಿ ಅಂಜಲಿ ಹತ್ಯೆ, ಕೊಡಗಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ರುಂಡ ಕತ್ತರಿಸಿ ಹತ್ಯೆ, ಕೊಡಗಿನಲ್ಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಗುಲ್ಬರ್ಗದಲ್ಲಿ ಈ ಸರಕಾರ ಬಂದ ಬಳಿಕ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗಿದೆ. 3-4 ತಿಂಗಳಿನಿಂದ 450ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ನಡೆದಿವೆ. ಇದರಿಂದ ರಾಜ್ಯವೇ ದೇಶದ ಮುಂದೆ ತಲೆ ತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನುಡಿದರು.
ಪರಿಶಿಷ್ಟರಿಗೆ ಅನ್ಯಾಯ
ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿಟ್ಟ 25 ಸಾವಿರ ಕೋಟಿ ಮೊತ್ತವನ್ನು ಬೇರೆಡೆಗೆ ವರ್ಗಾವಣೆ ಮಾಡಿ ಅನ್ಯಾಯ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಬಿಜೆಪಿ ರಾಜ್ಯ ಸರಕಾರ ಹೆಚ್ಚುವರಿಯಾಗಿ ಕೊಡುತ್ತಿದ್ದ 4 ಸಾವಿರವನ್ನು ತಡೆ ಹಿಡಿದಿದ್ದಾರೆ ಎಂದರಲ್ಲದೆ, ಪ್ರಕೃತಿ ವಿಕೋಪ ನಿಧಿಯಡಿ ಎಷ್ಟು ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಬರಗಾಲದ ಸಂದರ್ಭದಲ್ಲೂ 7 ತಾಸು ವಿದ್ಯುತ್ ಕೊಡದ ನಿಷ್ಕ್ರಿಯ ಸರಕಾರ ಇಲ್ಲಿದೆ ಎಂದು ದೂರಿದರು.