ಡೊನಾಲ್ಡ್ ಟ್ರಂಪ್ ಅವರ ಸಹವರ್ತಿ ಜೆ.ಡಿ. ವಾನ್ಸ್ ಅವರ ಪತ್ನಿ ಆಂಧ್ರಪ್ರದೇಶದ ಉಷಾ ಚಿಲುಕುರಿ ಯಾರು?

ಉಷಾ ವಾನ್ಸ್ ನುರಿತ ನ್ಯಾಯವಾದಿ,‌ ಪತಿಯ ಸೆನೆಟ್ ಚುನಾವಣೆ ಪ್ರಚಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಾನ್ಸ್ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಅಮೆರಿಕ-ಭಾರತದ ಸಂಬಂಧವನ್ನು ಮತ್ತಷ್ಟು ಭದ್ರಪಡಿಸುವ ನಿರೀಕ್ಷೆ ಯಿದೆ.ಆಕೆಗೆ ಭಾರತೀಯ ಸಂಸ್ಕೃತಿ ಮತ್ತು ಭಾರತದ ಬಗ್ಗೆ ತಿಳಿದಿದೆ. ಯುಎಸ್ಎ ಮತ್ತು ಭಾರತದ ನಡುವೆ ಉತ್ತಮ ಸಂಬಂಧ ವರ್ಧಿಸಲು ಪತಿಗೆ ಸಹಾಯ ಮಾಡಬಹುದು;

Update: 2024-07-16 09:48 GMT

ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಗೆ ತಮ್ಮ ಸಹವರ್ತಿಯಾಗಿ ಒಹೈಯೋ ಸೆನೆಟರ್ ಜೆ.ಡಿ. ವಾನ್ಸ್ ಅವರನ್ನು ಸೋಮವಾರ (ಜುಲೈ 15)ರಂದು ಆಯ್ಕೆ ಮಾಡಿದ್ದಾರೆ.‌ ವಾನ್ಸ್ ಅವರ ಹೆಸರು ಘೋಷಣೆಯಾದ ಬಳಿಕ ಆಂಧ್ರಪ್ರದೇಶ ಮೂಲದ ಅವರ ಪತ್ನಿ ಉಷಾ ಚಿಲುಕುರಿ ವಾನ್ಸ್ ಹೆಸರು ಮುನ್ನೆಲೆಗೆ ಬಂದಿದೆ. 

ಉಷಾ ಚಿಲುಕುರಿ ಅವರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮೂಲದವರು! ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ಉಷಾ, ರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಯಾಲಿಫೋರ್ನಿಯದಲ್ಲಿ ಭಾರತೀಯ ವಲಸಿಗ ಪೋಷಕರಿಗೆ ಜನಿಸಿದ ಉಷಾ, ಸ್ಯಾನ್ ಡಿಯಾಗೋದ ಉಪನಗರಗಳಲ್ಲಿ ಬೆಳೆದರು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದೆ. 

ರಾಂಚೊ ಪೆನಾಸ್ಕ್ವಿಟೊಸ್‌ನ ಮೌಂಟ್ ಕಾರ್ಮೆಲ್ ಹೈಸ್ಕೂಲ್‌ ಶಿಕ್ಷಣ, ಯಾಲೆ ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಎಂಫಿಲ್ ಪದವಿ ಪಡೆದಿದ್ದಾರೆ. 

ವಾನ್ಸ್ ಜತೆ  ಭೇಟಿ

ಉಷಾ ಅವರು 2013 ರಲ್ಲಿ ಯಾಲೆ ಕಾನೂನು ಶಾಲೆಯಲ್ಲಿ ವಾನ್ಸ್‌ ಅವರನ್ನು ಭೇಟಿಯಾದರು. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ʻಸೋಷಿಯಲ್‌ ಡಿಕ್ಲೈನ್‌ ಇನ್‌ ವೈಟ್‌ ಅಮೆರಿಕʼ ಎಂಬ ವಿಷಯ ಕುರಿತು ಚರ್ಚಾಗುಂಪನ್ನು ಆಯೋಜಿಸಲು ಒಟ್ಟಾಗಿ ಕೆಲಸ ಆರಂ ಭಿಸಿ, ಕಾಲಕ್ರಮೇಣ ನಿಕಟವರ್ತಿಗಳಾದರು. ಯಾಲೆಯಿಂದ ಪದವಿ ಪಡೆದ ನಂತರ 2014 ರಲ್ಲಿ ವಿವಾಹವಾದರು. ದಂಪತಿಗೆ ಮೂವರು ಮಕ್ಕಳು- ಇವಾನ್ ಮತ್ತು ವಿವೇಕ್ ಹಾಗೂ ಮಗಳು ಮಿರಾಬೆಲ್. 

ಯಾಲೆಯಲ್ಲಿ ಯಾಲೆ ಜರ್ನಲ್ ಆಫ್ ಲಾ ಅಂಡ್ ಟೆಕ್ನಾಲಜಿಯ ವ್ಯವಸ್ಥಾಪಕ ಸಂಪಾದಕಿ ಮತ್ತು ದಿ ಯಾಲೆ ಲಾ ಜರ್ನಲ್‌ನ ಕಾರ್ಯಕಾರಿ ಸಂಪಾದಕಿಯಾಗಿ ಸೇವೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಕೇಂಬ್ರಿಡ್ಜ್‌ನಲ್ಲಿ ಬಿಲ್ ಗೇಟ್ಸ್ ಅವರ ಸಹವರ್ತಿಯಾಗಿದ್ದ‌ ಉಷಾ, ಎಡಪಂಥೀಯ ಮತ್ತು ಉದಾರವಾದಿ ಗುಂಪುಗಳಲ್ಲಿ ತೊಡಗಿಸಿಕೊಂಡಿ ದ್ದರು. 2014 ರಲ್ಲಿ ಡೆಮೋಕ್ರಾಟ್ ಆಗಿ ನೋಂದಾಯಿಸಿಕೊಂಡರು.

ಯುಎಸ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಾನ್ ರಾಬರ್ಟ್ಸ್ ಮತ್ತು ಬ್ರೆಟ್ ಕವನಾಗ್ ಅವರ ಗುಮಾಸ್ತರಾಗಿ ಕೆಲಸ ಮಾಡಿದ್ದರು. ಅದಕ್ಕೂ ಮುನ್ನ 2015 ರಿಂದ 2017 ರವರೆಗೆ ಸ್ಯಾನ್ ಫ್ರಾನ್ಸಿಸ್ಕೊ ಮತ್ತು ವಾಷಿಂಗ್ಟನ್ ಡಿಸಿ ಯ ಮುಂಗರ್, ಟೋಲ್ಲೆಸ್ ಮತ್ತು ಓಲ್ಸನ್ ಎಲ್‌ ಎಲ್‌ ಪಿಯಲ್ಲಿ ವಕೀಲರಾದ್ದರು. 2019ರಲ್ಲಿ ಮುಂಗರ್, ಟೋಲ್ಲೆಸ್ ಮತ್ತು ಓಲ್ಸನ್ ಗೆ ವಾಪಸಾದರು. ಸಿವಿಲ್ ವ್ಯಾಜ್ಯಗಳಲ್ಲಿ ಪರಿಣತಿ ಹೊಂದಿರುವ ಅವರು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಆಡಳಿತ ಮತ್ತಿತರ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. 

ಮಾರ್ಗದರ್ಶಿ ಚೈತನ್ಯ: ಪತಿಗೆ ಸಾರ್ವಜನಿಕ ವೇದಿಕೆಗಳಲ್ಲಿ ಬೆಂಬಲ ನೀಡುವುದಲ್ಲದೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ವಾನ್ಸ್‌ ವಿಜಯಶಾಲಿಯಾದ 2016 ಮತ್ತು 2022 ರ ಚುನಾವಣೆ ಪ್ರಚಾರದಲ್ಲಿ ಸಕ್ರಿಯರಾ ಗಿದ್ದರು.

ವಾನ್ಸ್ ಅವರ ಹೆಚ್ಚು ಮಾರಾಟವಾದ ಆತ್ಮಚರಿತ್ರೆ ʻಹಿಲ್‌ ಬಿಲ್ಲಿ ಎಲೆಜಿʼ ಬರಹದಲ್ಲಿ ಉಷಾ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಈ ಪುಸ್ತಕ ವನ್ನು ರಾನ್ ಹೊವಾರ್ಡ್ ಅವರು 2020ರಲ್ಲಿ ಚಲನಚಿತ್ರವಾಗಿ ಪರಿವರ್ತಿಸಿದರು. ಅವರು 2018 ರಲ್ಲಿ ಓಹಿಯೋದಲ್ಲಿ ರಿಪಬ್ಲಿಕನ್ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ವಾನ್ಸ್ ಅವರ ಉಮೇದುವಾರಿಕೆ ಮೇಲೆ ಪರಿಣಾಮ:

ವಾನ್ಸ್ ಉಪಾಧ್ಯಕ್ಷರಾಗಿ ಆಯ್ಕೆಯಾದರೆ ಉಷಾ ಅವರು ಯುಎಸ್-ಭಾರತ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ನೆರವಾಗಬಹುದು ಎಂದು ರಿಪಬ್ಲಿಕನ್ನರು ನಂಬುತ್ತಾರೆ.

ʻಉಷಾ ವಾನ್ಸ್ ನಿಪುಣ ವಕೀಲರು ಮತ್ತು ಭಾರತೀಯ ವಲಸಿಗರ ಮಗಳು. ಅವರ ಪತಿ ವಾನ್ಸ್‌, ಟ್ರಂಪ್ ಉಮೇದುವಾರಿಕೆಗೆ ಯುವಜನರು ಮತ್ತು ವೈವಿಧ್ಯವನ್ನು ತರುತ್ತಾರೆ,ʼ ಎಂದು ವಾಣಿಜ್ಯೋದ್ಯಮಿ ಮತ್ತು ಯುಎಸ್ ಮೂಲದ ಜಾಗತಿಕ ರಿಯಲ್ ಎಸ್ಟೇಟ್ ಹೂಡಿಕೆ ಸಲಹೆಗಾರ ಎ.ಐ. ಮೇಸನ್ ಹೇಳಿದ್ದಾರೆ.

ʻಆಕೆಗೆ ಭಾರತೀಯ ಸಂಸ್ಕೃತಿ ಮತ್ತು ಭಾರತದ ಬಗ್ಗೆ ತಿಳಿದಿದೆ. ಯುಎಸ್ಎ ಮತ್ತು ಭಾರತದ ನಡುವೆ ಉತ್ತಮ ಸಂಬಂಧ ವರ್ಧಿಸಲು ಪತಿಗೆ ಸಹಾಯ ಮಾಡಬಹುದು,ʼ ಎಂದು ಟ್ರಂಪ್ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೇಸನ್‌ ಹೇಳಿದ್ದಾರೆ.

Tags:    

Similar News