ಶೂಟೌಟ್‌ ಪ್ರಕರಣ: ಶಾಂತಿ, ಏಕತೆಗೆ ಮನವಿ ಮಾಡಿದ ಬಿಡೆನ್, ಟ್ರಂಪ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌, ರಾಜಕೀಯ ಮಾತುಗಳನ್ನು ತಣ್ಣಗಾಗಲು ಬಿಡಬೇಕೆಂದು ಒತ್ತಾಯಿಸಿದ್ದಾರೆ; ಒಗ್ಗಟ್ಟಾಗಿ ನಿಲ್ಲಬೇಕು ಮತ್ತು 'ಕೆಟ್ಟದನ್ನು ಗೆಲ್ಲಲು ಬಿಡಬಾರದು' ಎಂದು ಅನುಯಾಯಿಗಳನ್ನು ಕೋರಿದ್ದಾರೆ.;

Update: 2024-07-15 07:16 GMT
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನವನ್ನು ಖಂಡಿಸಿ, ಮುಂಬೈನಲ್ಲಿ ವಿದ್ಯಾರ್ಥಿಗಳು ಚಿತ್ರಗಳನ್ನು ರಚಿಸಿದರು.

ಹತ್ಯೆ ಪ್ರಯತ್ನದಿಂದ ತಪ್ಪಿಸಿಕೊಂಡ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಯುಎಸ್ ಅಧ್ಯಕ್ಷ ಜೋ ಬಿಡೆನ್, ಶಾಂತಿ ಮತ್ತು ಏಕತೆ ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದರು.

ರಾಷ್ಟ್ರವನ್ನು ಉದ್ದೇಶಿಸಿ ಅಧ್ಯಕ್ಷೀಯ ಕಚೇರಿಯಿಂದ ಮಾಡಿದ ಭಾಷಣದಲ್ಲಿ‌ ಬಿಕ್ಕಟ್ಟಿನ ಸಮಯದಲ್ಲಿ ಒಂದಾಗುವಂತೆ ಅಮೆರಿಕನ್ನರನ್ನು ಒತ್ತಾಯಿಸಿದರು ಮತ್ತು ರಾಜಕೀಯ ಮಾತುಗಳನ್ನು ತಣ್ಣಗಾಗಿಸಲು ಇದು ಸಮಯ ಎಂದು‌ ಬಿಡೆನ್ ಹೇಳಿದರು. 

ನಾವೆಲ್ಲರೂ ಅಮೆರಿಕನ್ನರು: ʻನಾನು ಇಂದು ರಾತ್ರಿ ನಿಮ್ಮೊಂದಿಗೆ ರಾಜಕೀಯದಲ್ಲಿ ಉದ್ವೇಗವನ್ನು ಕಡಿಮೆ ಮಾಡುವ ಅಗತ್ಯದ ಬಗ್ಗೆ ಮಾತನಾಡಲು ಬಯಸುತ್ತೇನೆ. ಭಿನ್ನಾಭಿಪ್ರಾಯಗಳಿದ್ದರೂ ನಾವು ಶತ್ರುಗಳಲ್ಲ; ನಾವು ನೆರೆಹೊರೆಯವರು, ಸ್ನೇಹಿತರು, ಸಹೋದ್ಯೋಗಿಗಳು, ನಾಗರಿಕರು ಮತ್ತು ಮುಖ್ಯವಾಗಿ, ನಾವೆಲ್ಲರೂ ಅಮೆರಿಕನ್ನರು. ನಾವು ಒಟ್ಟಿಗೆ ನಿಲ್ಲಬೇಕಿದೆ. ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಅವರ ಸಭೆಯಲ್ಲಿ ನಿನ್ನೆ ನಡೆದ ಗುಂಡಿನ ದಾಳಿಯು ಒಂದು ಹೆಜ್ಜೆ ಹಿಂದೆ ಇಡಲು ನಮಗೆ ಕರೆ ನೀಡುತ್ತಿದೆ. ನಾವು ಎಲ್ಲಿದ್ದೇವೆ ಮತ್ತು ಇಲ್ಲಿಂದ ನಾವು ಹೇಗೆ ಮುಂದೆ ಹೋಗುತ್ತೇವೆ ಎಂಬುದನ್ನು ನೋಡಿಕೊಳ್ಳಬೇಕಿದೆ,ʼ ಎಂದು ಬಿಡೆನ್‌ ಹೇಳಿದರು.

ಪೆನ್ಸಿಲ್ವೇನಿಯಾದಲ್ಲಿ ಗುಂಡಿನ ದಾಳಿ ನಡೆದ ಬಳಿಕ 24 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಇದು ಬಿಡೆನ್‌ ಅವರ ಮೂರನೇ ಭಾಷಣವಾಗಿದೆ. 

ರಾಜಕೀಯ ಕೊಲೆಯ ಕ್ಷೇತ್ರವಾಗಬಾರದು: ಬಿಡೆನ್-  ಶೂಟರ್‌ನ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಬಿಡೆನ್ ಹೇಳಿದ್ದಾರೆ. ʻನಮಗೆ ಆತನ ಅಭಿಪ್ರಾಯ ಅಥವಾ ಸಂಬಂಧಗಳ ಬಗ್ಗೆ ತಿಳಿದಿಲ್ಲ.ಕೃತ್ಯಕ್ಕೆ ಬೇರೆಯವರ ಸಹಾಯ ಪಡೆದಿದ್ದರೇ ಅಥವಾ ಅವರು ಬೇರೆಯವರೊಂದಿಗೆ ಸಂವಹನ ನಡೆಸಿದ್ದರೇ ಎಂದು ತಿಳಿದಿಲ್ಲ. ಪೊಲೀಸರು ಆ ಸಂಬಂಧ ತನಿಖೆ ಮಾಡುತ್ತಿದ್ದಾರೆ. ಮಾಜಿ ಅಧ್ಯಕ್ಷರ ಮೇಲೆ ಗುಂಡು ಹಾರಿಸಲಾಗಿದೆ ಮತ್ತು ಒಬ್ಬ ಅಮೆರಿಕನ್ ನಾಗರಿಕ ಮೃತಪಟ್ಟಿದ್ದಾನೆ. ಹಿಂಸಾಚಾರ ಎಂದಿಗೂ ಉತ್ತರವಲ್ಲ,ʼ ಎಂದು ಹೇಳಿದರು. 

ʻಅಮೆರಿಕದಲ್ಲಿ ಇಂಥ ಹಿಂಸಾಚಾರಕ್ಕೆ ಸ್ಥಳವಿಲ್ಲ. ಯಾವುದೇ ವಿನಾಯಿತಿಗಳಿಲ್ಲ. ಈ ಹಿಂಸಾಚಾರವನ್ನು ಸಾಮಾನ್ಯೀಕರಿಸಲು ಅನುಮತಿಸುವುದಿಲ್ಲ. ಅಮೆರಿಕದ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಅನಿವಾರ್ಯವಾಗಿದೆ. ಈಗ ರಾಜಕೀಯ ಮಾತುಗಳು ಬಹಳ ಬಿಸಿಯಾಗಿದ್ದು, ತಣ್ಣಗಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ' ಎಂದರು. 

ʻರಾಜಕೀಯ ಯುದ್ಧಭೂಮಿಯಾಗಬಾರದು, ಕೊಲೆಯ ಕ್ಷೇತ್ರವಾಗಿರಬಾರದು. ಶಾಂತಿಯುತ ಚರ್ಚೆ, ನ್ಯಾಯದ ಅನುಸರಣೆ ಮತ್ತು ಸಂವಿಧಾನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ಅಖಾಡವಾಗಿರಬೇಕು ಎಂದು ನಾನು ನಂಬುತ್ತೇನೆ, ʼಎಂದು ಹೇಳಿದರು. 

ʻಅಮೆರಿಕ ನಿಂತಿರುವುದು ಉಗ್ರವಾದದಿಂದಲ್ಲ; ಬದಲಾಗಿ, ಸಭ್ಯತೆ ಮತ್ತು ಘನತೆಯಿಂದ. ಚುನಾವಣೆ ಸಮೀಪಿಸುತ್ತಿದ್ದಂತೆ ನಾವೆಲ್ಲರೂ ಪರೀ ಕ್ಷೆಯೊಂದನ್ನು ಎದುರಿಸುತ್ತಿದ್ದೇವೆ. ನಮ್ಮ ನಂಬಿಕೆ ಎಷ್ಟೇ ಪ್ರಬಲವಾಗಿದ್ದರೂ, ಎಂದಿಗೂ ಹಿಂಸಾಚಾರಕ್ಕೆ ಇಳಿಯುವುದಿಲ್ಲ,ʼ ಎಂದು ಹೇಳಿದರು.

ಏಕತೆಗೆ ಕರೆಕೊಟ್ಟ ಟ್ರಂಪ್:‌ ಭಾನುವಾರದಂದು ಏಕತೆ ಮತ್ತು ಪುನಶ್ಚೇತನಕ್ಕೆ ಕರೆ ನೀಡಿದ ಟ್ರಂಪ್‌, ಗನ್‌ಮ್ಯಾನ್ ಮೇಲ್ಛಾವಣಿಯಿಂದ ಗುಂಡು ಹಾರಿಸಲು ಹೇಗೆ ಸಾಧ್ಯವಾಯಿತು ಎಂಬ ತೀಕ್ಷ್ಣ ಪ್ರಶ್ನೆಗಳನ್ನು ಎತ್ತಿದರು. 

ಬಂದೂಕುಧಾರಿಯ ಉದ್ದೇಶ ನಿಗೂಢವಾಗಿಯೇ ಉಳಿದಿದೆ. ಆತ ಏಕಾಕಿಯಾಗಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ದಾಳಿಯನ್ನು ದೇಶಿ ಭಯೋತ್ಪಾದನೆಯ ಸಂಭಾವ್ಯ ಕೃತ್ಯ ಎಂದು ತನಿಖೆ ನಡೆಸುತ್ತಿದೆ. 

ಉತ್ತಮ ಉತ್ಸಾಹದಲ್ಲಿ ಟ್ರಂಪ್: ತಂಡ- ಡೊನಾಲ್ಡ್‌ ಟ್ರಂಪ್ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರ ತಂಡ ಹೇಳಿದೆ. ಸೋಮವಾರ ಪ್ರಾರಂಭವಾಗುವ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶಕ್ಕಾಗಿ ಅವರು ಭಾನುವಾರ ಸಂಜೆ ಮಿಲ್ವಾಕೀಗೆ ಆಗಮಿಸಿದ್ದಾರೆ. 

ಪೆನ್ಸಿಲ್ವೇನಿಯಾ ಗವರ್ನರ್ ಜೋಶ್ ಶಪಿರೊ ಪ್ರಕಾರ, ಕೊಲ್ಲಲ್ಪಟ್ಟ ಸಭಿಕ ಕೋರಿ ಕಾಂಪರೇಟೋರ್, ಮಾಜಿ ಅಗ್ನಿಶಾಮಕ ಮುಖ್ಯಸ್ಥ. ಅವರು ವೀರನಂತೆ ನಿಧನರಾದರು. ಗಾಯಗೊಂಡ ಇಬ್ಬರು ಪ್ರೇಕ್ಷಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

Tags:    

Similar News