ಅಮೆರಿಕದಲ್ಲಿ ವಲಸೆ ಕಾರ್ಮಿಕರಿಗೆ ಶಾಕ್: ಉದ್ಯೋಗ ಪರವಾನಗಿ ಸ್ವಯಂಚಾಲಿತ ವಿಸ್ತರಣೆ ರದ್ದು
ಉದ್ಯೋಗ ಅನುಮತಿಯಲ್ಲಿ ಯಾವುದೇ ಅಡಚಣೆಯಾಗದಂತೆ ತಡೆಯಲು, ತಮ್ಮ EAD ಅವಧಿ ಮುಗಿಯುವ 180 ದಿನಗಳ ಮೊದಲೇ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವಂತೆ USCIS ನೌಕರರಿಗೆ ಸಲಹೆ ನೀಡಿದೆ.
ಅಮೆರಿಕದಲ್ಲಿ ವಲಸೆ ಕಾರ್ಮಿಕರಿಗೆ ನೀಡಲಾಗುತ್ತಿದ್ದ ಉದ್ಯೋಗ ದೃಢೀಕರಣ ದಾಖಲೆಗಳ (EAD) ಸ್ವಯಂಚಾಲಿತ ವಿಸ್ತರಣೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ನಿಲ್ಲಿಸಿದೆ. ಈ ನಿರ್ಧಾರವು ಅಮೆರಿಕದಲ್ಲಿರುವ ಸಾವಿರಾರು ವಿದೇಶಿ ನೌಕರರ ಮೇಲೆ, ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯರ ಮೇಲೆ, ಗಂಭೀರ ಪರಿಣಾಮ ಬೀರುವ ನಿರೀಕ್ಷೆಯಿದೆ.
ಅಮೆರಿಕದ ಗೃಹ ಇಲಾಖೆ (DHS) ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಅಕ್ಟೋಬರ್ 30ರಿಂದ ಅಥವಾ ಆ ದಿನದ ನಂತರ EAD ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಸ್ವಯಂಚಾಲಿತ ವಿಸ್ತರಣೆಯ ಸೌಲಭ್ಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿಯಮದ ಮೂಲಕ, ವಿದೇಶಿಯರ ಉದ್ಯೋಗ ಅನುಮತಿಯನ್ನು ವಿಸ್ತರಿಸುವ ಮೊದಲು ಅವರ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ತಪಾಸಣೆ ನಡೆಸಲು ಸರ್ಕಾರ ಆದ್ಯತೆ ನೀಡಲಿದೆ. ಆದಾಗ್ಯೂ, ಕಾನೂನಿನ ಪ್ರಕಾರ ಅಥವಾ ಫೆಡರಲ್ ರಿಜಿಸ್ಟರ್ ಸೂಚನೆಗಳ ಮೂಲಕ ನೀಡಲಾಗುವ TPS (ತಾತ್ಕಾಲಿಕ ಸಂರಕ್ಷಿತ ಸ್ಥಿತಿ) ಸಂಬಂಧಿತ ಉದ್ಯೋಗ ದಾಖಲೆಗಳಂತಹ ಕೆಲವು ಸೀಮಿತ ಪ್ರಕರಣಗಳಿಗೆ ವಿನಾಯಿತಿ ನೀಡಲಾಗಿದೆ.
ಟ್ರಂಪ್ ಆಡಳಿತದ ಸಮರ್ಥನೆ
ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ (USCIS) ನಿರ್ದೇಶಕ ಜೋಸೆಫ್ ಎಡ್ಲೊ, "ಹಿಂದಿನ ಆಡಳಿತವು ಅಮೆರಿಕನ್ನರ ಸುರಕ್ಷತೆಗಿಂತ ವಿದೇಶಿಯರ ಅನುಕೂಲಕ್ಕೆ ಆದ್ಯತೆ ನೀಡಿತ್ತು. ನಾವು ಆ ನೀತಿಗಳನ್ನು ತೆಗೆದುಹಾಕುತ್ತಿದ್ದೇವೆ. ವಿದೇಶಿಯರ ಹಿನ್ನೆಲೆಯನ್ನು ಆಗಾಗ್ಗೆ ಪರಿಶೀಲಿಸುವುದರಿಂದ ವಂಚನೆಯನ್ನು ತಡೆಯಲು ಮತ್ತು ದೇಶಕ್ಕೆ ಅಪಾಯಕಾರಿಯಾಗಬಲ್ಲ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರನ್ನು ದೇಶದಿಂದ ಹೊರಹಾಕಲು ಸಾಧ್ಯವಾಗುತ್ತದೆ," ಎಂದು ಹೇಳಿದ್ದಾರೆ. "ಅಮೆರಿಕದಲ್ಲಿ ಕೆಲಸ ಮಾಡುವುದು ಒಂದು ಹಕ್ಕಲ್ಲ, ಅದೊಂದು ಸೌಲಭ್ಯ ಎಂಬುದನ್ನು ಎಲ್ಲಾ ವಿದೇಶಿಯರು ನೆನಪಿನಲ್ಲಿಡಬೇಕು," ಎಂದು ಅವರು ತಿಳಿಸಿದ್ದಾರೆ.
ನೌಕರರಿಗೆ USCIS ಸಲಹೆ
ಉದ್ಯೋಗ ಅನುಮತಿಯಲ್ಲಿ ಯಾವುದೇ ಅಡಚಣೆಯಾಗದಂತೆ ತಡೆಯಲು, ತಮ್ಮ EAD ಅವಧಿ ಮುಗಿಯುವ 180 ದಿನಗಳ ಮೊದಲೇ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವಂತೆ USCIS ನೌಕರರಿಗೆ ಸಲಹೆ ನೀಡಿದೆ. ನವೀಕರಣಕ್ಕೆ ವಿಳಂಬವಾದರೆ ಉದ್ಯೋಗ ಅನುಮತಿಯಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಕ್ಟೋಬರ್ 30, 2025ಕ್ಕಿಂತ ಮೊದಲು ಸ್ವಯಂಚಾಲಿತವಾಗಿ ವಿಸ್ತರಣೆಗೊಂಡ EADಗಳ ಮೇಲೆ ಈ ಹೊಸ ನಿಯಮವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.