ಕೇರಳದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಬ್ರಿಟನ್‌ನ ಎಫ್-35ಬಿ ಫೈಟರ್ ಜೆಟ್, ದುರಸ್ತಿ ಬಳಿಕ ಆಸ್ಟ್ರೇಲಿಯಾಗೆ ನಿರ್ಗಮನ

110 ಮಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ಈ ಯುದ್ಧ ವಿಮಾನವು, ಬ್ರಿಟನ್‌ನ ವಿಮಾನವಾಹಕ ನೌಕೆ 'ಎಚ್‌ಎಂಎಸ್ ಪ್ರಿನ್ಸ್ ಆಫ್ ವೇಲ್ಸ್' ನಿಂದ ಕಾರ್ಯಾಚರಣೆ ನಡೆಸುತ್ತಿತ್ತು.;

Update: 2025-07-22 08:32 GMT

ತಾಂತ್ರಿಕ ದೋಷದಿಂದಾಗಿ ಕಳೆದ ತಿಂಗಳು ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಬ್ರಿಟನ್‌ನ ಅತ್ಯಾಧುನಿಕ ಎಫ್-35ಬಿ ಸ್ಟೆಲ್ತ್ ಫೈಟರ್ ಜೆಟ್, ಒಂದು ತಿಂಗಳಿಗೂ ಹೆಚ್ಚು ಕಾಲದ ನಂತರ ಮಂಗಳವಾರ (ಜುಲೈ 22) ತನ್ನ ಪ್ರಯಾಣವನ್ನು ಪುನರಾರಂಭಿಸಿದೆ.

ದುರಸ್ತಿ ಕಾರ್ಯಗಳು ಪೂರ್ಣಗೊಂಡ ನಂತರ, ಜೆಟ್ ಇಂದು ಬೆಳಿಗ್ಗೆ 10.50ಕ್ಕೆ ಆಸ್ಟ್ರೇಲಿಯಾದತ್ತ ಹಾರಾಟ ನಡೆಸಿತು. ಈ ಕುರಿತು ಮಾಹಿತಿ ನೀಡಿರುವ ಬ್ರಿಟಿಷ್ ಹೈಕಮಿಷನ್, "ಜುಲೈ 6 ರಂದು ಬಂದಿದ್ದ ನಮ್ಮ ಇಂಜಿನಿಯರಿಂಗ್ ತಂಡವು ವಿಮಾನದ ದುರಸ್ತಿ ಮತ್ತು ಸುರಕ್ಷತಾ ತಪಾಸಣೆಗಳನ್ನು ಪೂರ್ಣಗೊಳಿಸಿದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸಹಕಾರ ನೀಡಿದ ಭಾರತೀಯ ಅಧಿಕಾರಿಗಳು ಮತ್ತು ವಿಮಾನ ನಿಲ್ದಾಣದ ತಂಡಗಳಿಗೆ ನಾವು ಆಭಾರಿಯಾಗಿದ್ದೇವೆ," ಎಂದು ತಿಳಿಸಿದೆ.

110 ಮಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ಈ ಯುದ್ಧ ವಿಮಾನವು, ಬ್ರಿಟನ್‌ನ ವಿಮಾನವಾಹಕ ನೌಕೆ 'ಎಚ್‌ಎಂಎಸ್ ಪ್ರಿನ್ಸ್ ಆಫ್ ವೇಲ್ಸ್' ನಿಂದ ಕಾರ್ಯಾಚರಣೆ ನಡೆಸುತ್ತಿತ್ತು. ಜೂನ್ 14 ರಂದು ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ, ವಿಮಾನವಾಹಕ ನೌಕೆಯಲ್ಲಿ ಇಳಿಯಲು ಸಾಧ್ಯವಾಗದೆ ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

ಈ ಜೆಟ್ ಕೇರಳದಲ್ಲಿ ಇಷ್ಟು ದಿನಗಳ ಕಾಲ ಉಳಿದುಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಮೀಮ್‌ಗಳಿಗೆ ಕಾರಣವಾಗಿತ್ತು. ಕೇರಳದ ನೈಸರ್ಗಿಕ ಸೌಂದರ್ಯಕ್ಕೆ ಮರುಳಾಗಿ, ರಾಜ್ಯವನ್ನು ಬಿಟ್ಟು ಹೋಗಲು ಇಷ್ಟಪಡದ 'ಪ್ರವಾಸಿಗ'ನಿಗೆ ಈ ಫೈಟರ್ ಜೆಟ್ ಅನ್ನು ಹೋಲಿಸಿ ಕೇರಳ ಪ್ರವಾಸೋದ್ಯಮ ಇಲಾಖೆ ಹಂಚಿಕೊಂಡಿದ್ದ ಮೀಮ್ ವೈರಲ್ ಆಗಿತ್ತು.

ಮಾಧ್ಯಮ ವರದಿಗಳ ಪ್ರಕಾರ, ಬ್ರಿಟನ್ ಅಧಿಕಾರಿಗಳು ಈ ಅತ್ಯಾಧುನಿಕ ಯುದ್ಧ ವಿಮಾನದ ದುರಸ್ತಿ ಮತ್ತು ತಾಂತ್ರಿಕ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲು ನಿರಾಕರಿಸಿದ್ದರು. 

Tags:    

Similar News