ಯುಕೆ ಚುನಾವಣೆ: ಕೀರ್ ಸ್ಟಾರ್ಮರ್‌ ನೇತೃತ್ವದ ಲೇಬರ್ ಪಕ್ಷಕ್ಕೆ ಭಾರಿ ಗೆಲುವು; ಸೋಲೊಪ್ಪಿಕೊಂಡ ರಿಷಿ ಸುನಕ್

ರಿಷಿ ಸುನಕ್ ಉತ್ತರ ಇಂಗ್ಲೆಂಡ್‌ನ ರಿಚ್‌ಮಂಡ್ ಮತ್ತು ನಾರ್ತಲರ್ಟನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ, ಕನ್ಸರ್ವೇಟಿವ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ವಿಫಲರಾಗಿದ್ದಾರೆ.

Update: 2024-07-05 07:46 GMT

ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಸೋಲು ಖಚಿತವಾಗಿರುವ ಹಿನ್ನೆಲೆಯಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಸೋಲು ಒಪ್ಪಿಕೊಂಡಿದ್ದಾರೆ. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ ಪ್ರಚಂಡ ವಿಜಯದತ್ತ ದಾಪುಗಾಲಿಟ್ಟಿದೆ.

ಲೇಬರ್‌ ಪಕ್ಷ ಇಂಗ್ಲೆಂಡಿನ ಸಂಸತ್ತಿನಲ್ಲಿ ಬಹುಮತಕ್ಕೆ ಅಗತ್ಯವಿರುವಷ್ಟು ಸ್ಥಾನಗಳನ್ನು ಗೆದ್ದಿದ್ದು, ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದು ಅಧಿಕೃತ ಫಲಿತಾಂಶಗಳು ತೋರಿಸಿವೆ. ಹೌಸ್ ಆಫ್ ಕಾಮನ್ಸ್‌ನಲ್ಲಿ ಲೇಬರ್ ಪಕ್ಷ ಸುಮಾರು 160 ಸ್ಥಾನಗಳ ಬಹುಮತ ಹೊಂದಿದೆ ಎಂದು ಅಂದಾಜಿಸಲಾಗಿದೆ. 

ಮತ ಎಣಿಕೆ ಮುಂದುವರಿದಿದ್ದು, ಲೇಬರ್‌ ಪಕ್ಷ 650 ಸ್ಥಾನಗಳ ಪೈಕಿ 326 ಸ್ಥಾನಗಳನ್ನು ಗೆದ್ದಿತ್ತು. 

ಸ್ಥಾನ ಉಳಿಸಿಕೊಂಡ ಸುನಕ್:‌ ಭಾರತೀಯ ಮೂಲದ ಪ್ರಧಾನ ಮಂತ್ರಿ ಸುನಕ್‌, ಉತ್ತರ ಇಂಗ್ಲೆಂಡ್‌ನಲ್ಲಿ 23,059 ಮತಗಳೊಂದಿಗೆ ತಮ್ಮ ರಿಚ್‌ಮಂಡ್ ಮತ್ತು ನಾರ್ತಲರ್ಟನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ, 14 ವರ್ಷ ಆಡಳಿತ ನಡೆಸಿದ ತಮ್ಮ ಸರ್ಕಾರವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. 

ಸಂಸದರಾಗಿ ಆಯ್ಕೆಯಾದ ಅವರು ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಆಗಮಿಸಿದರು. ಪಕ್ಷದ ಸೋಲನ್ನು ಒಪ್ಪಿಕೊಳ್ಳಲು ಅವರು ತಮ್ಮ ಸ್ವೀಕಾರ ಭಾಷಣವನ್ನು ಬಳಸಿಕೊಂಡರು. ʻಲೇಬರ್ ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ. ಸರ್ ಕೀರ್ ಸ್ಟಾರ್ಮರ್ ಅವರನ್ನು ಅಭಿನಂದಿಸುತ್ತೇನೆ,ʼ ಎಂದು ಸುನಕ್ ಹೇಳಿದರು.

ಕ್ಷಮೆ ಕೋರಿದ ಸುನಕ್: ʻಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಅಧಿಕಾರ ಕೈಗಳನ್ನು ಬದಲಾಯಿಸಿದೆ. ಇದು ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ವಿಶ್ವಾಸ ನೀಡುತ್ತದೆ. ಕಲಿಯಲು ಮತ್ತು ಆತ್ಮಾವಲೋಕನಕ್ಕೆ ಬಹಳಷ್ಟು ವಿಷಯ ಇದೆ,ʼ ಎಂದು ಹೇಳಿದರು. ಸೋಲಿನ ಜವಾಬ್ದಾರಿಯನ್ನು ಹೊತ್ತುಕೊಂಡ ಅವರು ʼನನ್ನನ್ನು ಕ್ಷಮಿಸಿ,ʼ ಎಂದು ಮತದಾರರಿಗೆ ಹೇಳಿದರು.

ಸಂಪುಟದ ಕೆಲವು ಪ್ರಮುಖ ಸಚಿವರು ಮತ್ತು ಸಂಸದರಾದ ಗ್ರಾಂಟ್ ಶಾಪ್ಸ್ ಮತ್ತು ಪೆನ್ನಿ ಮೊರ್ಡಾಂಟ್ ಚುನಾವಣೆಯಲ್ಲಿ ಸೋತಿರುವುದ ರಿಂದ, ಕನ್ಸರ್ವೇಟಿವ್‌ಗಳಿಗೆ ಫಲಿತಾಂಶವು ಸಾಮೂಹಿಕ ವಧೆಯಾಗಿದೆ ಎನ್ನಲಾಗುತ್ತಿದೆ.

ಬದಲಾವಣೆ ಪ್ರಾರಂಭ: ಸ್ಟಾರ್ಮರ್- ಲೇಬರ್‌ ಪಕ್ಷದ ಸ್ಟಾರ್ಮರ್ ಅವರು ಬ್ರಿಟನ್‌ನ ಹೊಸ ಪ್ರಧಾನ ಮಂತ್ರಿಯಾಗಿ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಅವರು ಲಂಡನ್‌ನ ಹೋಲ್ಬೋರ್ನ್ ಮತ್ತು ಸೇಂಟ್ ಪ್ಯಾನ್‌ಕ್ರಾಸ್‌ನಲ್ಲಿ ಸುಲಭ ಗೆಲುವು ಸಾಧಿಸಿದರು. 

ʻಬದಲಾವಣೆ ಇಲ್ಲಿಂದ ಪ್ರಾರಂಭವಾಗುತ್ತದೆ. ಏಕೆಂದರೆ, ಪ್ರಜಾಪ್ರಭುತ್ವ, ಸಮುದಾಯ ಮತ್ತು ನಿಮ್ಮ ಭವಿಷ್ಯಕ್ಕಾಗಿ ನೀವು ಮತ ಹಾಕಿದ್ದೀರಿ. ಇದು ನಾವು ನಿಮಗೆ ಪ್ರತಿಫಲ ಸಲ್ಲಿಸುವ ಸಮಯ,ʼ ಎಂದು ಸ್ಟಾರ್ಮರ್ ಸ್ವೀಕಾರ ಭಾಷಣದಲ್ಲಿ ಹೇಳಿದರು. 

ನಿರ್ಗಮನ ಸಮೀಕ್ಷೆಗಳು ವಿರೋಧ ಪಕ್ಷಕ್ಕೆ 410 ಸ್ಥಾನಗಳು ಲಭ್ಯವಾಗಲಿವೆ ಎಂದು ಹೇಳಿವೆ. ಆದರೆ, ಪರಿಸ್ಥಿತಿಯನ್ನು ನೋಡಿದರೆ ಲೇಬರ್‌ ಪಕ್ಷಕ್ಕೆ 405 ಸ್ಥಾನ ಸಿಗಬಹುದು: ಟೋರಿಗಳ ಸಂಖ್ಯೆ 154 ಕ್ಕೆ ಇಳಿಯಲಿದೆ. ಲಿಬರಲ್‌ ಡೆಮೊಕ್ರಾಟ್‌ ಗಳು ಸುಮಾರು 56 ಸ್ಥಾನ ಗೆಲ್ಲಲಿದ್ದಾರೆ. 

ಎಸ್‌ಎನ್‌ಪಿಗೆ ನಷ್ಟ: ಏತನ್ಮಧ್ಯೆ, ಸ್ಕಾಟ್ಲೆಂಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ಕಾಟಿಷ್ ನ್ಯಾಷನಲ್ ಪಾರ್ಟಿ (ಎಸ್‌ಎನ್‌ಪಿ), ತನ್ನ ಸ್ಥಾನ ಗಳನ್ನು ಲೇಬರ್‌ ಪಕ್ಷಕ್ಕೆ ಕಳೆದುಕೊಂಡಿದೆ. ಆದರೆ, ಪಕ್ಷದ ಪ್ರಮುಖ ನಿಗೆಲ್ ಫರೇಜ್ ಎಂಟನೇ ಪ್ರಯತ್ನದಲ್ಲಿ ಸಂಸದರಾಗಿ ಆಯ್ಕೆಯಾಗಲಿದ್ದಾರೆ. ಅವರ ವಲಸೆ ವಿರೋಧಿ ʻರಿಫಾರ್ಮ್ ಯುಕೆʼ ಮೂರು ಸ್ಥಾನ ಗಳಿಸಲಿದೆ.

Tags:    

Similar News