Syria: ಸಿರಿಯಾದಲ್ಲಿ ಹಿಂಸಾಚಾರ: 2 ದಿನಗಳಲ್ಲಿ 1,000 ಮಂದಿಯ ಹತ್ಯೆ

ಸಿರಿಯಾದ ಸಂಸ್ಥೆಯೊಂದು ಈ ಮಾಹಿತಿ ನೀಡಿದೆ. 14 ವರ್ಷಗಳ ಹಿಂದೆ ಸಿರಿಯಾದಲ್ಲಿ ಸಂಘರ್ಷ ಪ್ರಾರಂಭವಾದ ನಂತರದ ಅತ್ಯಂತ ಭೀಕರ ಹಿಂಸಾಚಾರ ಕೃತ್ಯಗಳಲ್ಲಿ ಇದೂ ಒಂದು.;

Update: 2025-03-09 11:25 GMT

ಡಮಾಸ್ಕಸ್: ಸಿರಿಯಾದ(Syria) ಭದ್ರತಾ ಪಡೆಗಳು ಮತ್ತು ಪದಚ್ಯುತ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಬೆಂಬಲಿಗರ ನಡುವೆ 2 ದಿನಗಳ ಹಿಂದೆ ನಡೆದ ಘರ್ಷಣೆ ಮತ್ತು ನಂತರದ ಪ್ರತೀಕಾರದ ಕೃತ್ಯಗಳಿಂದ ಸಂಖ್ಯೆ 1,000 ಮೀರಿದೆ.

ಸಿರಿಯಾದ ಸಂಸ್ಥೆಯೊಂದು ಈ ಮಾಹಿತಿ ನೀಡಿದೆ. 14 ವರ್ಷಗಳ ಹಿಂದೆ ಸಿರಿಯಾದಲ್ಲಿ ಸಂಘರ್ಷ ಪ್ರಾರಂಭವಾದ ನಂತರದ ಅತ್ಯಂತ ಭೀಕರ ಹಿಂಸಾಚಾರ ಕೃತ್ಯಗಳಲ್ಲಿ ಇದೂ ಒಂದು.

ಬ್ರಿಟನ್ ಮೂಲದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಪ್ರಕಾರ, 2 ದಿನಗಳ ಸಂಘರ್ಷದಲ್ಲಿ 745 ನಾಗರಿಕರು ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನವರು ಅತ್ಯಂತ ಹತ್ತಿರದಿಂದ ನಡೆಸಲಾದ ಗುಂಡಿನ ದಾಳಿಗೆ ಬಲಿಯಾದವರು. ಇವರಲ್ಲದೇ 125 ಸರ್ಕಾರಿ ಭದ್ರತಾ ಪಡೆ ಸದಸ್ಯರು, ಅಸ್ಸಾದ್‌ಗೆ ನಿಷ್ಠರಾಗಿರುವ ಸಶಸ್ತ್ರ ಪಡೆಗಳ 148 ಭಯೋತ್ಪಾದಕರೂ ಮೃತಪಟ್ಟಿದ್ದಾರೆ. ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಲಟಾಕಿಯಾ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿನ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ ಎಂದೂ ಸಂಸ್ಥೆ ಹೇಳಿದೆ.

ಅಸ್ಸಾದ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಡಮಾಸ್ಕಸ್ ನಲ್ಲಿ ಅಧಿಕಾರಕ್ಕೇರಿದ ಹೊಸ ಸರ್ಕಾರಕ್ಕೆ ಕೇವಲ ಮೂರೇ ತಿಂಗಳಲ್ಲಿ ಎದುರಾಗಿರುವ ಈ ಘರ್ಷಣೆಗಳು ಹೊಸ ಸವಾಲನ್ನು ತಂದೊಡ್ಡಿದೆ.

ಸುನ್ನಿಗಳು ಮತ್ತು ಅಲಾವೈಟ್‌ಗಳ ನಡುವೆ ಪ್ರತೀಕಾರದ ಹತ್ಯೆಗಳು

ಅಸ್ಸಾದ್ ಅವರ ಅಲ್ಪಸಂಖ್ಯಾತ ಅಲಾವೈಟ್ ಪಂಥದ ಸದಸ್ಯರ ವಿರುದ್ಧ ಸರ್ಕಾರಕ್ಕೆ ನಿಷ್ಠರಾಗಿರುವ ಸುನ್ನಿ ಮುಸ್ಲಿಂ ಬಂದೂಕುಧಾರಿಗಳು ಶುಕ್ರವಾರ ಈ ಪ್ರತೀಕಾರದ ಹತ್ಯೆಗಳನ್ನು ಪ್ರಾರಂಭಿಸಿದ್ದಾರೆ. ಮನೆ ಮನೆಗೆ ನುಗ್ಗಿ, ಹಾದಿ ಬೀದಿಗಳಲ್ಲಿ ಅಲಾವೈಟ್ ಪಂಥದ ಪುರುಷರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗುತ್ತಿದೆ. ಜೊತೆಗೆ ಈ ಜನಾಂಗದ ಅನೇಕ ಮನೆಗಳನ್ನು ಲೂಟಿ ಮಾಡಿ, ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಸಾವಿರಾರು ಮಂದಿ ಈ ದಾಳಿಗೆ ಹೆದರಿ ಅಕ್ಕಪಕ್ಕದ ಪರ್ವತ ಪ್ರದೇಶಗಳ ಕಡೆಗೆ ಓಡಿ ಹೋಗಿದ್ದಾರೆ ಎಂದೂ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಹೇಳಿದೆ.

Tags:    

Similar News