ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಮುನ್ನ ದಿನ ಅವಳಿ ಸ್ಫೋಟ: ಕನಿಷ್ಠ 30 ಸಾವು

ಮತದಾನ ಕೇಂದ್ರಗಳಿಗೆ ಜನರು ಹೋಗುವುದನ್ನು ತಡೆಯಲು ಭಯೋತ್ಪಾದಕರು ನಡೆಸಿದ ಕೃತ್ಯ ಎಂದು ಹೇಳಲಾಗಿದೆ

Update: 2024-02-08 06:25 GMT
ಪ್ರಾತಿನಿಧಿಕ ಚಿತ್ರ

ಕರಾಚಿ: ಪಾಕಿಸ್ಥಾನದ ಸಾರ್ವತ್ರಿಕ ಚುನಾವಣೆಗೆ ಒಂದು ದಿನ ಮುನ್ನ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಚುನಾವಣಾ ಕಚೇರಿಗಳನ್ನು ಗುರಿಯಾಗಿಸಿಕೊಂಡು ಬುಧವಾರ ಅವಳಿ ಸ್ಫೋಟಗಳು ಸಂಭವಿಸಿವೆ. ಈ ಸ್ಪೋಟದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮೊದಲ ಘಟನೆ ಪಿಶಿನ್ ಜಿಲ್ಲೆಯ ಪಕ್ಷೇತರ ಅಭ್ಯರ್ಥಿ ಅಸ್ಫಂಡ್ಯಾರ್ ಖಾನ್ ಕಾಕರ್ ಅವರ ಕಚೇರಿಯ ಹೊರಗೆ ಪ್ರಬಲವಾದ ಸ್ಫೋಟ ಸಂಭವಿಸಿ, 20 ಜನರು ಸಾವನ್ನಪ್ಪಿದರು ಮತ್ತು 30 ಮಂದಿ ಗಾಯಗೊಂಡರು.

ಈ ಘಟನೆ ನಡೆದ ಒಂದು ಗಂಟೆಯ ಬಳಿಕ ಖಿಲ್ಲಾ ಅಬ್ದುಲ್ಲಾ ಪ್ರದೇಶದಲ್ಲಿ ಜಮಿಯತ್-ಉಲೇಮಾ ಇಸ್ಲಾಂ-ಪಾಕಿಸ್ತಾನದ ಚುನಾವಣಾ ಕಚೇರಿಯ ಹೊರಗೆ ಮತ್ತೊಂದು ಸ್ಫೋಟ ಸಂಭವಿಸಿದ್ದು, 10 ಜನರು ಸಾವನ್ನಪ್ಪಿದ್ದಾರೆ ಮತ್ತು 22 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಗುಂಪು ಅಥವಾ ವ್ಯಕ್ತಿ ಅವಳಿ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.‌

ಅಭ್ಯರ್ಥಿ ಅಸ್ಫಂಡ್ ಯಾರ್ ಖಾನ್ ಕಾಕರ್ ಅವರ ಚುನಾವಣಾ ಕಚೇರಿಯ ಹೊರಗೆ ಬ್ಯಾಗ್‌ನಲ್ಲಿ ಬಾಂಬ್‌ ಇಡಲಾಗಿತ್ತು ಮತ್ತು ನಂತರ ರಿಮೋಟ್‌ ಟೈಮರ್‌ ಮೂಲಕ ಸ್ಫೋಟಿಸಲಾಗಿದೆ ಎಂದು ಬಲೂಚಿಸ್ತಾನ್ ಪಂಜ್‌ಗುರ್‌ನ ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ಲಾ ಜೆಹ್ರಿ ಹೇಳಿದ್ದಾರೆ.

ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಕ್ವೆಟ್ಟಾಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು.

"ಜನರು ಮತದಾನ ಕೇಂದ್ರಗಳಿಗೆ ಹೋಗುವುದನ್ನು ತಡೆಯಲು ಭಯೋತ್ಪಾದಕರು ಚುನಾವಣಾ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಆದರೆ ನಿಗದಿತ ಸಮಯಕ್ಕೆ ಚುನಾವಣೆಗಳು ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಸಿಬ್ಬಂದಿಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ" ಎಂದು ಜೆಹ್ರಿ ಹೇಳಿದರು.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಕಿಲ್ಲಾ ಅಬ್ದುಲ್ಲಾ ಪ್ರದೇಶದಲ್ಲಿ ಜೆಯುಐ ಅಭ್ಯರ್ಥಿಯ ಚುನಾವಣಾ ಕಚೇರಿಯಯಲ್ಲಿ ಪ್ರಬಲ ಸ್ಫೋಟ ಸಂಭವಿಸಿ, ಹೆಚ್ಚಿನ ಹಾನಿಯನ್ನುಂಟು ಮಾಡಿದೆ. ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಎರಡು ಸ್ಫೋಟಗಳನ್ನು ದೃಢಪಡಿಸಿದೆ ಮತ್ತು ಗುರುವಾರದ ಚುನಾವಣೆಗಾಗಿ ಪ್ರಾಂತ್ಯದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಹೇಳಿದೆ.

ಸ್ಫೋಟದಲ್ಲಿ ಗಾಯಗೊಂಡ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ವಿಮಾನದಲ್ಲಿ ಕ್ವೆಟ್ಟಾಕ್ಕೆ ರವಾನಿಸಲಾಗಿದೆ ಎಂದು ಪಿಶಿನ್ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಜುಮ್ಮಾ ದಾದ್ ಮಾಂಡೋಖೈಲ್ ತಿಳಿಸಿದ್ದಾರೆ.

"ನಾವು 18 ಮೃತ ದೇಹಗಳನ್ನು ಆಸ್ಪತ್ರೆಗೆ ಕಳುಹಿಸಿದ್ದೇವೆ ಮತ್ತು 32 ಗಾಯಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ" ಎಂದು ಅವರು ಹೇಳಿದರು. ಆದರೆ ಶವಾಗಾರದಲ್ಲಿ 20 ಮೃತದೇಹಗಳಿವೆ ಎಂದು ಪಿಶಿನ್ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಸ್ವತಂತ್ರ ಅಭ್ಯರ್ಥಿ ಅಸ್ಫಂಡ್ಯಾರ್ ಖಾನ್ ಕಾಕರ್ ಅವರ ಮೋಟಾರು ಬೈಕ್‌ಗೆ ಬಾಂಬ್ ಅಳವಡಿಸಲಾಗಿತ್ತು. ಚುನಾವಣಾ ಕಚೇರಿ ಬಳಿ ಅದನ್ನು ರಿಮೋಟ್ ಮೂಲಕ ಸ್ಫೋಟಿಸಲಾಗಿದೆ ಎಂದು ಮಾಂಡೋಖೈಲ್ ಹೇಳಿದರು.

ಕಾಕರ್ ಅವರು ಪಿಶಿನ್ ವಿಧಾನಸಭಾ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಮತ್ತು ಸ್ಫೋಟ ಸಂಭವಿಸಿದಾಗ ಅವರು ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

Tags:    

Similar News