ವಾಯುನೆಲೆ ಮೇಲಿನ ದಾಳಿಗೆ ಪ್ರತೀಕಾರ | ಕುರ್ದೀಶ್‌ ನೆಲೆ ಮೇಲೆ ಟರ್ಕಿ ವೈಮಾನಿಕ ದಾಳಿ

ಭಯೋತ್ಪಾದಕರ ದಾಳಿಯಲ್ಲಿ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ(ಪಿಕೆಕೆ) ಕೈವಾಡ ಸಂಶಯದ ಮೇಲೆ ಪ್ರತಿಕಾರವಾಗಿ ಕುರ್ದೀಶ್‌ ಉಗ್ರರ ಶಿಬಿರಗಳ ಮೇಲೆ ಟರ್ಕಿ ವೈಮಾನಿಕ ದಾಳಿ ನಡೆಸಿದೆ.

Update: 2024-10-24 07:40 GMT

ಟರ್ಕಿಯ ವಾಯುನೆಲೆಯ ಕೈಗಾರಿಕಾ ಪ್ರದೇಶದ (TUSAS) ಮೇಲಿನ ದಾಳಿಗೆ ಪ್ರತೀಕಾರವಾಗಿ ಟರ್ಕಿಯ ವಾಯುಪಡೆಯು ಉತ್ತರ ಇರಾಕ್ ಮತ್ತು ಸಿರಿಯಾದಲ್ಲಿರುವ ಕುರ್ದಿಶ್ ಉಗ್ರರ ಅಡಗುತಾಣಗಳ ಮೇಲೆ ಪ್ರತಿದಾಳಿ ನಡೆಸಿ, 32ಕ್ಕೂ ಹೆಚ್ಚು ನೆಲೆಗಳನ್ನು ಧ್ವಂಸಗೊಳಿಸಿದೆ. ಪ್ರತಿದಾಳಿಯಲ್ಲಿ ಐವರು ಉಗ್ರರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ಬುಧವಾರ ಅಂಕಾರದ ವಾಯುನೆಲೆ ಕೈಗಾರಿಕಾ ಪ್ರದೇಶದ ಮೇಲೆ ಇಬ್ಬರು ಬಂದೂಕುಧಾರಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದರು. ಇಬ್ಬರು ದಾಳಿಕೋರರನ್ನು ಟರ್ಕಿಯ ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದರು.

ಭಯೋತ್ಪಾದಕರ ದಾಳಿಯಲ್ಲಿ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ(ಪಿಕೆಕೆ) ಕೈವಾಡವಿದೆ ಎಂದು ಟರ್ಕಿ ಆರೋಪಿಸಿತ್ತು. ಇದಕ್ಕೆ ಪ್ರತಿಕಾರವಾಗಿ ಬುಧವಾರ ರಾತ್ರಿ ಕುರ್ದೀಶ್‌ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ. ತನ್ನ ನೆಲದಲ್ಲಿ ಭಯೋತ್ಪಾದಕ ಕೃತ್ಯ ಎಸಗಿದ ಉಗ್ರರನ್ನು ಸೆದೆ ಬಡಿಯುವವರೆಗೂ ವಿರಮಿಸುವುದಿಲ್ಲ ಎಂದು ಟರ್ಕಿಯ ರಕ್ಷಣಾ ಸಚಿವ ಯಾಸರ್ ಗುಲರ್ ಹೇಳಿದ್ದಾರೆ.

ಕಳೆದ ಒಂದು ದಶಕದಿಂದ ಕುರ್ದೀಶ್‌ ಉಗ್ರರ ಪಿಕೆಕೆ ಪಕ್ಷವನ್ನು ಟರ್ಕಿ ಹಾಗೂ ಪಾಶ್ಚಾತ್ಯ ರಾಷ್ಟ್ರಗಳು ಉಗ್ರರ ಪಟ್ಟಿಗೆ ಸೇರಿಸಿವೆ. ಇರಾಕ್‌ ಹಾಗೂ ಸಿರಿಯಾದಲ್ಲಿ ಪಿಕೆಕೆ ತನ್ನ ನೆಲೆಗಳನ್ನು ಸ್ಥಾಪಿಸಿಕೊಂಡಿತ್ತು.

ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡ್ಗನ್, ಅವರು ಭಯೋತ್ಪಾದಕ ದಾಳಿಯನ್ನು ʼಹೇಯʼ ಕೃತ್ಯ ಎಂದು ಟೀಕಿಸಿದ್ದಾರೆ.

ಟರ್ಕಿಯ ರಕ್ಷಣಾ ಉದ್ಯಮದ ಲೊಕೊಮೊಟಿವ್ ಸಂಸ್ಥೆಗಳಲ್ಲಿ ಒಂದಾಗಿರುವ TAI (TUSAS ನ ಇನ್ನೊಂದು ಹೆಸರು) ವಿರುದ್ಧದ ಭಯೋತ್ಪಾದಕ ದಾಳಿಯು ನಮ್ಮನ್ನು ಗುರಿಯಾಗಿಸಿ ನಡೆದ ಕೆಟ್ಟ ದಾಳಿಯಾಗಿದೆ ಎಂದು ಹೇಳಿದ್ದಾರೆ. ಆದರೆ, ಈವರೆಗೂ ದಾಳಿಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ.

Tags:    

Similar News