ಅಮೆರಿಕ ನ್ಯಾಯಾಂಗ ಇಲಾಖೆಯ ಪ್ರಮುಖ ಹುದ್ದೆಗೆ ಭಾರತೀಯ ಮೂಲದ ಹರ್ಮೀತ್ ಧಿಲ್ಲಾನ್ ಆಯ್ಕೆ ಮಾಡಿದ ಟ್ರಂಪ್

ಈ ವರ್ಷದ ಜುಲೈನಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಅರ್ದಾಸ್ ಪಠಿಸಿದ ಧಿಲ್ಲಾನ್ ಜನಾಂಗೀಯ ದಾಳಿಗೆ ಒಳಗಾಗಿದ್ದರು. ಕಳೆದ ವರ್ಷ ಅವರು ರಿಪಬ್ಲಿಕನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ವಿಫಲರಾಗಿದ್ದರು.;

Update: 2024-12-10 06:31 GMT
Trump picks Indian-American Harmeet Dhillon for key Department of Justice position

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮೂಲದ ಅಮೆರಿಕನ್ ಹರ್ಮೀತ್ ಕೆ ಧಿಲ್ಲಾನ್ ಅವರನ್ನು ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿದ್ದಾರೆ.

"ಹರ್ಮೀತ್ ಕೆ ಧಿಲ್ಲಾನ್ ಅವರನ್ನು ಯುಎಸ್ ನ್ಯಾಯಾಂಗ ಇಲಾಖೆಯಲ್ಲಿ ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿ ನಾಮನಿರ್ದೇಶನ ಮಾಡಲು ನನಗೆ ಸಂತೋಷವಾಗುತ್ತಿದೆ " ಎಂದು ಟ್ರಂಪ್ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್​ನಲ್ಲಿ ಘೋಷಿಸಿದರು.

"ಹರ್ಮೀತ್ ತನ್ನ ವೃತ್ತಿಜೀವನದುದ್ದಕ್ಕೂ ನಾಗರಿಕ ಹಕ್ಕುಗಳ ಪರ ಹೋರಾಟ ನಡೆಸಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಹೋರಾಟ ನಡೆಸಿದ್ದರು. ಕೋವಿಡ್ ಸಮಯದಲ್ಲಿ ಜತೆಯಾಗಿ ಪ್ರಾರ್ಥಿಸುವುದನ್ನು ತಡೆದ ವ್ಯವಸ್ಥೆ ವಿರುದ್ಧ ಹೋರಾಟ ಮಾಡಲು ಸಮುದಾಯದ ಜತೆ ನಿಂತಿದ್ದರು. ಕಾರ್ಮಿಕರ ವಿರುದ್ಧ ನಿಂತಿದ್ದ ಕಾರ್ಪೊರೇಟ್​ ವ್ಯವಸ್ಥೆಯ ವಿರುದ್ಧ ಹೋರಾಡಿದ್ದರು" ಎಂದು ಟ್ರಂಪ್ ಬರೆದಿದ್ದಾರೆ.

"ಹರ್ಮೀತ್ ದೇಶದ ಉನ್ನತ ಚುನಾವಣಾ ವಕೀಲರಲ್ಲಿ ಒಬ್ಬರು. ಕಾನೂನುಬದ್ಧ ಮತಗಳನ್ನು ಮಾತ್ರ ಎಣಿಕೆ ಮಾಡುವ ಬಗ್ಗೆ ಕಾನೂನು ಸಮರ ನಡೆಸುತ್ತಿದ್ದಾರೆ. ಹರ್ಮೀತ್​ ಡಾರ್ಟ್​ಮೌತ್​ ಕಾಲೇಜು ಮತ್ತು ವರ್ಜೀನಿಯಾ ವಿಶ್ವವಿದ್ಯಾಲಯದ ಕಾನೂನು ಶಾಲೆಯ ಪದವಿ ಪಡೆದಿದ್ದಾರೆ. ಯುಎಸ್ ಫೋರ್ತ್ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ " ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ.

"ಹರ್ಮೀತ್ ಸಿಖ್ ಧಾರ್ಮಿಕ ಸಮುದಾಯದ ಗೌರವಾನ್ವಿತ ಸದಸ್ಯ.. ಡಿಒಜೆಯಲ್ಲಿ ತನ್ನ ಹೊಸ ಪಾತ್ರದಲ್ಲಿ ಹರ್ಮೀತ್ ನಮ್ಮ ಸಾಂವಿಧಾನಿಕ ಹಕ್ಕುಗಳ ರಕ್ಷಕರಾಗಿದ್ದಾರೆ. ನಮ್ಮ ನಾಗರಿಕ ಹಕ್ಕುಗಳು ಮತ್ತು ಚುನಾವಣಾ ಕಾನೂನುಗಳನ್ನು ನ್ಯಾಯಯುತವಾಗಿ ಮತ್ತು ದೃಢವಾಗಿ ಜಾರಿಗೊಳಿಸುತ್ತಾರೆ" ಎಂದು ನಿಯೋಜಿತ ರಾಷ್ಟ್ರಪತಿ ಹೇಳಿದರು.

ಈ ವರ್ಷದ ಜುಲೈನಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಅರ್ದಾಸ್ ಪಠಿಸಿದ ಧಿಲ್ಲಾನ್ ಜನಾಂಗೀಯ ದಾಳಿಗೆ ಒಳಗಾಗಿದ್ದರು. ಕಳೆದ ವರ್ಷ ಅವರು ರಿಪಬ್ಲಿಕನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ವಿಫಲರಾಗಿದ್ದರು.

ಚಂಡೀಗಢ ಮೂಲದ 54 ವರ್ಷದ ಧಿಲ್ಲಾನ್ ಬಾಲ್ಯದಲ್ಲಿ ತನ್ನ ಹೆತ್ತವರೊಂದಿಗೆ ಅಮೆರಿಕಕ್ಕೆ ತೆರಳಿದ್ದರು. 2016 ರಲ್ಲಿ, ಕ್ಲೀವ್​ಲ್ಯಾಂಡ್​ನಲ್ಲಿ ನಡೆದ ಜಿಒಪಿ ಸಮಾವೇಶದ ವೇದಿಕೆಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ-ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

Tags:    

Similar News