ಮೋದಿ- ಟ್ರಂಪ್ ಗೆಳೆತನದ ರೂವಾರಿ ಗುಜರಾತ್‌ನ ಕಾಶ್ ಪಟೇಲ್ ಅಮೆರಿಕಾ ತನಿಖಾ ಸಂಸ್ಥೆ ಎಫ್‌ಬಿಐ ಮುಖ್ಯಸ್ಥ
ಸೆಪ್ಟೆಂಬರ್ 2019 ಮತ್ತು ಫೆಬ್ರವರಿ 2020 ರಲ್ಲಿ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹ್ಯೂಸ್ಟನ್ ಮತ್ತು ಅಹಮದಾಬಾದ್ ರ್ಯಾಲಿಗಳಲ್ಲಿ ಭಾಗವಹಿಸಿದ್ದ ಪಟೇಲ್ ಎರಡೂ ದೇಶಗಳ ಸಂಬಂಧ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಲ್ಲಿನ ಕೇಂದ್ರ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನ (ಎಫ್‌ಬಿಐ) ನಿರ್ದೇಶಕ ಹುದ್ದೆಗೆ ತಮ್ಮ ಆಪ್ತ, ಗುಜರಾತ್ ಮೂಲದ ಕಾಶ್ ಪಟೇಲ್ (ಕಶ್ಯಪ್ ಪಟೇಲ್) ಅವರನ್ನು ನೇಮಕ ಮಾಡಿದ್ದಾರೆ.
ಕಶ್ಯಪ್ ಪಟೇಲ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಷ್ಟಿಗೇಷನ್ ಮುಂದಿನ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಕಾಶ್ ಒಬ್ಬ ಅದ್ಭುತ ವಕೀಲ. ಅತ್ಯುತ್ತಮ ತನಿಖಾಧಿಕಾರಿಯಾಗಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ, ನ್ಯಾಯ ಕಾಪಾಡಲು ಮತ್ತು ಅಮೆರಿಕದ ಜನರನ್ನು ರಕ್ಷಿಸಲು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ" ಎಂದು ಟ್ರಂಪ್ ತಮ್ಮ ಮಾಲೀಕತ್ವದ ಸಾಮಾಜಿಕ ಮಾಧ್ಯಮ ವೇದಿಕೆಯಾದ ʼಟ್ರುಥ್ ಸೋಷಿಯಲ್ʼನಲ್ಲಿ ಬರೆದುಕೊಂಡಿದ್ದಾರೆ.
44 ವರ್ಷದ ಪಟೇಲ್ ಅವರು 2017ರಲ್ಲಿ ಟ್ರಂಪ್ ಆಡಳಿತದ ಕೊನೆಯ ಕೆಲವು ವಾರಗಳಲ್ಲಿ ಅಮೆರಿಕದ ಹಂಗಾಮಿ ರಕ್ಷಣಾ ಇಲಾಖೆಯ ಸಿಬ್ಬಂದಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. "ನನ್ನ ಮೊದಲ ಅವಧಿಯಲ್ಲಿ ಕಾಶ್ ಪಟೇಲ್ ಅಪಾರ ಕೆಲಸ ಮಾಡಿದ್ದಾರೆ. ಅಲ್ಲಿ ಅವರು ರಕ್ಷಣಾ ಇಲಾಖೆಯಲ್ಲಿ ಸಿಬ್ಬಂದಿ ಮುಖ್ಯಸ್ಥರಾಗಿ, ರಾಷ್ಟ್ರೀಯ ಗುಪ್ತಚರ ಉಪ ನಿರ್ದೇಶಕರಾಗಿ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಭಯೋತ್ಪಾದನಾ ನಿಗ್ರಹದ ಹಿರಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ" ಎಂದು ಅವರು ಹೇಳಿದರು.
ಅಕ್ರಮಗಳಿಗೆ ಕೊನೆ
"ಎಫ್‌ಬಿಐ ಇನ್ನು ಮುಂದೆ ಅಮೆರಿಕದಲ್ಲಿ ಹೆಚ್ಚುತ್ತಿರುವ ಅಪರಾಧಿ ಕೃತ್ಯಗಳನ್ನು ಕೊನೆಗೊಳಿಸಲಿದೆ. ವಲಸೆ ಕ್ರಿಮಿನಲ್ ಗ್ಯಾಂಗ್‌ಗಳನ್ನು ನಿರ್ಮೂಲನೆ ಮಾಡಲಿದೆ. ಗಡಿಯುದ್ದಕ್ಕೂ ಮಾನವ ಮತ್ತು ಮಾದಕವಸ್ತು ಕಳ್ಳಸಾಗಣೆಯ ದುಷ್ಟ ಪಿಡುಗನ್ನು ನಿರ್ಮೂಲನೆ ಮಾಡಲಿದೆ. ಎಫ್‌ಬಿಐ ಸಮಗ್ರತೆಯನ್ನು ತರಲು ಕಾಶ್ ಪಟೇಲ್ ನಮ್ಮ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರ ಜತೆ ಕೆಲಸ ಮಾಡಲಿದ್ದಾರೆ" ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ʼಗುಜರಾತಿʼ ಪಟೇಲರ ಪೂರ್ವಜರು ಆಫ್ರಿಕಾದವರು
ನ್ಯೂಯಾರ್ಕ್ ಮೂಲದ ಪಟೇಲ್ ಅವರ ಮೂಲ ಗುಜರಾತ್ ನಲ್ಲಿವೆ. ಆದಾಗ್ಯೂ, ಅವರ ಪೋಷಕರು ಪೂರ್ವ ಆಫ್ರಿಕಾದವರು. ತಾಯಿ ತಾಂಜೇನಿಯಾ ಮತ್ತು ತಂದೆ ಉಗಾಂಡಾದವರು. ಅವರು 1970 ರಲ್ಲಿ ಕೆನಡಾದಿಂದ ಯುಎಸ್‌ಗೆ ಬಂದಿದ್ದರು "ನಾವು ಗುಜರಾತಿಗಳು" ಎಂದು ಅವರು ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು.
ಕಶ್ಯಪ್ ಕುಟುಂಬವು 70 ರ ದಶಕದಲ್ಲಿ ನ್ಯೂಯಾರ್ಕ್‌ನ ಕ್ವೀನ್ಸ್‌ಗೆ ಸ್ಥಳಾಂತರಗೊಂಡಿತ್ತು ಈ ಪ್ರದೇಶವನ್ನು ʼಲಿಟಲ್ ಇಂಡಿಯಾʼ ಎಂದು ಕರೆಯಲಾಗುತ್ತದೆ. ಇಲ್ಲಿಯೇ ಪಟೇಲ್ ಹುಟ್ಟಿ ಬೆಳೆದಿದ್ದರು. ಪಟೇಲ್ ಅವರ ಪೋಷಕರು ಈಗ ನಿವೃತ್ತರಾಗಿದ್ದಾರೆ. ನ್ಯೂಯಾರ್ಕ್‌ನಲ್ಲಿ ಶಾಲಾ ಶಿಕ್ಷಣ ಮತ್ತು ವರ್ಜೀನಿಯಾದ ರಿಚ್ಮಂಡ್‌ನಲ್ಲಿ ಕಾಲೇಜು ಮತ್ತು ನ್ಯೂಯಾರ್ಕ್‌ನಲ್ಲಿ ಕಾನೂನು ಶಿಕ್ಷಣ ಪಡೆದ ಪಟೇಲ್ ಬಳಿಕ ಫ್ಲೋರಿಡಾಕ್ಕೆ ಹೋಗಿದ್ದರು. ಅಲ್ಲಿ ಅವರು ನಾಲ್ಕು ವರ್ಷಗಳ ಕಾಲ ಸ್ಟೇಟ್ ಪಬ್ಲಿಕ್ ಡಿಫೆಂಡರ್ (ಸರ್ಕಾರಿ ವಕೀಲ) ಆಗಿದ್ದರು. ನಂತರ ನಾಲ್ಕು ವರ್ಷಗಳ ಕಾಲ ಫೆಡರಲ್ ಪಬ್ಲಿಕ್ ಡಿಫೆಂಡರ್ (ಸರ್ಕಾರಿ ವಕೀಲ) ಆಗಿ ಕಾರ್ಯ ನಿರ್ವಹಿಸಿದ್ದರು.
ಫ್ಲೋರಿಡಾದಿಂದ ಅವರು ನ್ಯಾಯಾಂಗ ಇಲಾಖೆಯಲ್ಲಿ ಭಯೋತ್ಪಾದನೆ ಪ್ರಾಸಿಕ್ಯೂಟರ್ ಆಗಿ ವಾಷಿಂಗ್ಟನ್ ಡಿಸಿಗೆ ತೆರಳಿದ್ದರು. ಇಲ್ಲಿ ಅವರು ಸುಮಾರು ಮೂರೂವರೆ ವರ್ಷಗಳ ಕಾಲ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಾಸಿಕ್ಯೂಟರ್ ಆಗಿ ಕೆಲಸ ಮಾಡಿದ್ದರು. ಅವಧಿಯಲ್ಲಿ, ಅವರು ಪ್ರಪಂಚದಾದ್ಯಂತ, ಪೂರ್ವ ಆಫ್ರಿಕಾದ ಅಮೇರಿಕಾ ಮತ್ತು ಉಗಾಂಡಾ ಮತ್ತು ಕೀನ್ಯಾದಲ್ಲಿ ಪ್ರಕರಣಗಳ ಬಗ್ಗೆ ಕೆಲಸ ಮಾಡಿದ್ದರು.
ನ್ಯಾಯಾಂಗ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾಗ ಅವರು ರಕ್ಷಣಾ ಇಲಾಖೆಯಲ್ಲಿ ವಿಶೇಷ ಕಾರ್ಯಾಚರಣೆ ಕಮಾಂಡ್ ಆಗಿ ಸೇರಿದ್ದರು. ಪೆಂಟಗ್‌ನಲ್ಲಿ ಅವರು ವಿಶೇಷ ಪಡೆಗಳೊಂದಿಗೆ ನ್ಯಾಯಾಂಗ ಇಲಾಖೆಯ ವಕೀಲರಾಗಿ ಸೇವೆ ಮಾಡಿದ್ದರು.
ಭಾರತ- ಅಮೆರಿಕ ಸಂಬಂಧ ಸೇತು
ಪಟೇಲ್ ಐಸ್ ಹಾಕಿ ಅಭಿಮಾನಿಯಾಗಿದ್ದು, ಆರು ವರ್ಷದವರಾಗಿದ್ದಾಗಿನಿಂದ ಈ ಕ್ರೀಡೆಯನ್ನು ಆಡುತ್ತಿದ್ದಾರೆ. ಸೆಪ್ಟೆಂಬರ್ 2019 ಮತ್ತು ಫೆಬ್ರವರಿ 2020 ರಲ್ಲಿ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹ್ಯೂಸ್ಟನ್ ಮತ್ತು ಅಹಮದಾಬಾದ್ ರ್ಯಾಲಿಗಳಲ್ಲಿ ಭಾಗವಹಿಸಿದ್ದ ಪಟೇಲ್ ಎರಡೂ ದೇಶಗಳ ಸಂಬಂಧ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೈಡನ್ ಆಡಳಿತದಲ್ಲಿ ದ್ವಿಪಕ್ಷೀಯ ಸಂಬಂಧವು ಹದಗೆಟ್ಟಿದೆ ಎಂದು ಪಟೇಲ್ ಹಿಂದೆ ಆರೋಪಿಸಿದ್ದರು.
ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಉತ್ತಮ ಸಂಬಂಧ ಹೊಂದಿದ್ದರು. ಅವರು ಭಾರತದ ಗಡಿಯಲ್ಲಿ ಮಾತ್ರವಲ್ಲದೆ ಜಾಗತಿಕ ವೇದಿಕೆಯಲ್ಲಿ ಚೀನಾದ ಆಕ್ರಮಣದಂತಹ ವಿಷಯಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಭಯೋತ್ಪಾದನೆ ನಿಗ್ರಹ ವಿಷಯಗಳು ಬಂದಾಗ ಪಾಕಿಸ್ತಾನದಲ್ಲಿನ ವಿಷಯಗಳನ್ನು ಎದುರಿಸಲು ಅವರು ಒಟ್ಟಾಗಿ ಕೆಲಸ ಮಾಡುತ್ತಿದ್ದರು" ಎಂದು ಪಟೇಲ್ ಹೇಳಿದ್ದರು .
ಸಂಬಂಧ ಮಾತ್ರವಲ್ಲ, ಭಾರತ ಮತ್ತು ಅಮೆರಿಕದಲ್ಲಿ ಆರ್ಥಿಕತೆ ಬಲಗೊಳಿಸಬೇಕು ಎಂಬುದು ಉಭಯ ನಾಯಕರಿಗೆ ತಿಳಿದಿತ್ತು ಎಂದು ಪಟೇಲ್ ಹೇಳಿದ್ದಾರೆ.