Donald Trump: ಉಕ್ರೇನ್‌ಗೆ ಅಮೆರಿಕದಿಂದ ಎಲ್ಲ ರೀತಿಯ ಮಿಲಿಟರಿ ನೆರವು ಸ್ಥಗಿತ

ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ ಒಪ್ಪಿಕೊಳ್ಳಲು ಉಕ್ರೇನ್ ಮೇಲೆ ಒತ್ತಡ ಹಾಕುತ್ತಿರುವ ಟ್ರಂಪ್‌ ಅವರ ಈ ನಡೆಯನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿರೋಧಿಸಿದ್ದಾರೆ. ಇದೀಗ ಎಲ್ಲ ನೆರವನ್ನು ಸ್ಥಗಿತ ಮಾಡುವುದಾಗಿ ಟ್ರಂಪ್​ ಘೋಷಿಸಿದ್ದಾರೆ.;

Update: 2025-03-04 06:48 GMT

ಇತ್ತೀಚೆಗೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿ ತಿರುಗಿಬಿದ್ದಿದ್ದರು. ಘಟನೆ ನಡೆದು ಇದೀಗ ಕೆಲವೇ ದಿನಗಳಲ್ಲಿ ಉಕ್ರೇನ್‌ಗೆ ನೀಡಲಾಗುವ ಎಲ್ಲಾ ಮಿಲಿಟರಿ ನೆರವನ್ನು ಸ್ಥಗಿತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೋಮವಾರ ಆದೇಶಿಸಿದ್ದಾರೆ.

ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ ಒಪ್ಪಿಕೊಳ್ಳಲು ಉಕ್ರೇನ್ ಮೇಲೆ ಒತ್ತಡ ಹಾಕುತ್ತಿರುವ ಟ್ರಂಪ್‌ ಅವರ ಈ ನಡೆಯನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿರೋಧಿಸಿದ್ದಾರೆ. ಇದೀಗ ಎಲ್ಲ ನೆರವನ್ನು ಸ್ಥಗಿತ ಮಾಡುವುದಾಗಿ ಟ್ರಂಪ್​ ಘೋಷಿಸಿದ್ದಾರೆ.

ಉಕ್ರೇನ್ ಹಾಗೂ ರಷ್ಯಾ ನಡುವಿನ ಮೂರು ವರ್ಷಗಳ ಯುದ್ಧ ಕೊನೆಗಾಣಿಸುವ ನಿಟ್ಟಿನಲ್ಲಿ ಶಾಂತಿ ಒಪ್ಪಂದ ಕೈಗೊಳ್ಳುವುದು ಟ್ರಂಪ್ ಅವರ ಉದ್ದೇಶವಾಗಿತ್ತು. ಅದಕ್ಕೆ ಜೆಲೆನ್‌ಸ್ಕಿ ಬದ್ಧವಾಗಿರಬೇಕೆಂದೂ ಅವರು ಬಯಸಿದ್ದರು.

ಎಲ್ಲ ಶಸ್ತ್ರಾಸ್ತ್ರಗಳಿಗೆ ಅನ್ವಯ

ಟ್ರಂಪ್ ನಿರ್ಧಾರವು ಉಕ್ರೇನ್‌ಗೆ ನೀಡಲಾಗುತ್ತಿದ್ದ ಎಲ್ಲ ಸೇನಾ ಶಸ್ತ್ರಾಸ್ತ್ರಗಳು ಹಾಗೂ ಉಪಕರಣಗಳಿಗೆ ಅನ್ವಯವಾಗುತ್ತದೆ. ಇನ್ನು ಮುಂದೆ ಅಮೆರಿಕದಿಂದ ಉಕ್ರೇನ್‌ಗೆ ಟ್ಯಾಂಕ್ ನಿಗ್ರಹ ಶಸ್ತ್ರಾಸ್ತ್ರಗಳು, ಸಾವಿರಾರು ಫಿರಂಗಿ ರೌಂಡ್ ಗಳು, ರಾಕೆಟ್‌ಗಳಂತಹ ನಿರ್ಣಾಯಕ ಶಸ್ತ್ರಾಸ್ತ್ರಗಳ ಸರಬರಾಜು ನಿಲ್ಲಲಿದೆ.

ಅಮೆರಿಕದ ನಿರ್ಧಾರ ಕಳೆದ ವಾರ ಶ್ವೇತಭವನದಲ್ಲಿ ಜೆಲೆನ್‌ಸ್ಕಿ ಅವರ ದುರ್ವರ್ತನೆಗೆ ನೀಡಿರುವ ನೇರ ಪ್ರತಿಕ್ರಿಯೆ ಎಂದು ಶ್ವೇತಭವನದ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಸಂಧಾನಕ್ಕೆ ಜೆಲೆನ್‌ಸ್ಕಿ ಮುಂದಾದರೆ ಈ ನಿರ್ಧಾರ ವಾಪಸ್ ಪಡೆಯಲಾಗುವುದು ಎಂದೂ ತಿಳಿಸಿದ್ದಾರೆ.

ಕಳೆದ ವಾರ ಜೆಲೆನ್‌ಸ್ಕಿ ಅವರ ಅಮೆರಿಕ ಭೇಟಿಯ ಸಮಯದಲ್ಲಿ ಟ್ರಂಪ್ ಆಡಳಿತ ಮತ್ತು ಉಕ್ರೇನ್ ಅಧಿಕಾರಿಗಳು ಕೆಲವೊಂದು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿತ್ತು. ಅಮೆರಿಕವು ನೀಡಿದ ನೆರವಿಗೆ ಪ್ರತಿಯಾಗಿ ಉಕ್ರೇನ್‌ ತನ್ನ ಖನಿಜ ಸಂಪತ್ತಿನ ಕೆಲವು ಭಾಗವನ್ನು ಅಮೆರಿಕಕ್ಕೆ ನೀಡಲು ಮುಂದಾದಿತ್ತು. ಉಭಯ ನಾಯಕರ ಮಾತುಕತೆಯು ವಿಫಲಗೊಂಡು ಶ್ವೇತಭವನದ ಅಧಿಕಾರಿಗಳು ಜೆಲೆನ್‌ಸ್ಕಿ ಮತ್ತು ಉಕ್ರೇನ್ ನಿಯೋಗವನ್ನು ಹೊರಹೋಗುವಂತೆ ಸೂಚಿಸಿತ್ತು.

ನೆರವಿನ ಶಾಶ್ವತ ಅಂತ್ಯವಲ್ಲ:

ಉಕ್ರೇನ್‌ಗೆ ಅಮೆರಿಕದ ನೆರವು ಸ್ಥಗಿತ ತಾತ್ಕಾಲಿಕ ನಿರ್ಧಾರವಾಗಿದೆಯೇ ಹೊರತು ಶಾಶ್ವತವಲ್ಲ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೆಲೆನ್‌ಸ್ಕಿ ಅವರು ಶಾಂತಿ ಮಾತುಕತೆಗೆ ಒಪ್ಪಿ ಮುಂದೆ ಬರುವವರೆಗೂ ಇದು ಚಾಲ್ತಿಯಲ್ಲಿರಲಿರುತ್ತದೆ.

ರಷ್ಯಾದ ನಿರ್ಬಂಧ ಸಡಿಲಿಕೆ?

ಇದೇ ವೇಳೆ ರಷ್ಯಾದೊಂದಿಗೆ ಸಂಬಂಧ ಪುನಃಸ್ಥಾಪಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಶಾಂತಿ ಮಾತುಕತೆ ಮಾಡಿದರೆ ಮಾಸ್ಕೋ ಮೇಲೆ ಹೇರಿರುವ ನಿರ್ಬಂಧ ಸಡಿಲಿಸಲಾಗುವುದು ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಅಮೆರಿಕ ಮತ್ತು ರಷ್ಯಾ ನಡುವೆ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳನ್ನು ಸುಧಾರಿಸುವ ಬಗ್ಗೆ ಮಾತುಕತೆ ನಡೆಸಲು ಟ್ರಂಪ್ ನಿರ್ಧರಿಸಿದ್ದಾರೆ. ಮುಂಬರುವ ದಿನಗಳಲ್ಲಿ ರಷ್ಯಾದ ಪ್ರತಿನಿಧಿಗಳೊಂದಿಗೆ ಅಮೆರಿಕ ಚರ್ಚಿಸಲಿದ್ದು, ಅದಕ್ಕೂ ಮುನ್ನವೇ ಸಡಿಲಿಸಬಹುದಾದ ನಿರ್ಬಂಧಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಶ್ವೇತಭವನವು ವಿದೇಶಾಂಗ ಮತ್ತು ಖಜಾನೆ ಇಲಾಖೆಗಳಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ..

Tags:    

Similar News