Trump 2.0: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕಾರ

Trump 2.0: ಟ್ರಂಪ್‌ ಭಾಷಣಕ್ಕೂ ಮುನ್ನ ಜೆ.ಡಿ. ವೇನ್ಸ್‌ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್‌ ಅವರು ಪ್ರಮಾಣವಚನ ಬೋಧಿಸಿದರು.;

Update: 2025-01-21 03:45 GMT
ಡೊನಾಲ್ಡ್‌ ಟ್ರಂಪ್‌.

ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು. ಅವರು ಎರಡನೇ ಬಾರಿಗೆ (Trump 2.0) ಅಮೆರಿಕದ ಅಧ್ಯಕ್ಷರ ಕುರ್ಚಿ ಏರುವ ಮೂಲಕ ಇತಿಹಾಸ ನಿರ್ಮಿಸಿದರು.

ಚುನಾವಣೆಯಲ್ಲಿ ಭಾರೀ ಬಹುಮತ ಪಡೆದಿದ್ದ ಅವರು ಅಧಿಕಾರ ವಹಿಸಿಕೊಂಡ ಬಳಿಕದ ಭಾಷಣದಲ್ಲಿ ಹಲವು ಘೋಷಣೆಗಳನ್ನು ಪ್ರಕಟಿಸಿದರು. "ಇಂದಿನಿಂದ ನಮ್ಮ ದೇಶ ಬಲಿಷ್ಠವಾಗಲಿದೆ. ಪ್ರತಿ ರಾಷ್ಟ್ರವೂ ಅಸೂಯೆಪಡುವ ರೀತಿಯಲ್ಲಿ ನಾವು ಬೆಳವಣಿಗೆ ಸಾಧಿಸಲಿದ್ದೇವೆ’ ಎಂದು ಹೇಳಿದರು.

‘ಅಮೆರಿಕವು ಯಾರಿಗೂ ಹೆದರದು. ಅಮೆರಿಕವು ಇಂದಿನಿಂದ ಸಾರ್ವಭೌಮ ಮತ್ತು ಸ್ವತಂತ್ರ ರಾಷ್ಟ್ರವಾಗಲಿದೆ. ಭವಿಷ್ಯವು ನಮ್ಮದಾಗಲಿದೆ’ ಎಂದು ಘೋಷಿಸಿದರು.

ದಕ್ಷಿಣದ ಗಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ, ಸಾಮೂಹಿಕ ಗಡಿಪಾರು, ಮಹಿಳಾ ಕ್ರೀಡಾ ವಿಭಾಗದಲ್ಲಿ ತೃತೀಯ ಲಿಂಗಿಗಳ ಭಾಗವಹಿಸುವಿಕೆಗೆ ತಡೆ, ಇಂಧನ ಶೋಧಕ್ಕೆ ಹೇರಲಾಗಿರುವ ನಿರ್ಬಂಧ ಕೈಬಿಡುವ ಸೂಚನೆಯನ್ನು ಅವರು ತಮ್ಮ ಭಾಷಣದಲ್ಲಿ ನೀಡಿದರು.

‘ಮೊದಲು ನಮ್ಮ ದಕ್ಷಿಣದ ಗಡಿಯಲ್ಲಿ ನಾನು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುತ್ತೇನೆ. ಅಮೆರಿಕಕ್ಕೆ ಎಲ್ಲ ರೀತಿಯ ಅಕ್ರಮ ಪ್ರವೇಶವನ್ನು ನಿಲ್ಲಿಸುವೆ. ಅಮೆರಿಕದಲ್ಲಿ ಅಕ್ರಮವಾಗಿ ತಂಗಿರುವ ಕ್ರಿಮಿನಲ್‌’ ವಿದೇಶಿಯರನ್ನು ವಾಪಸ್‌ ಕಳುಹಿಸುವ ಪ್ರಕ್ರಿಯೆ ಪ್ರಾರಂಭಿಸುತ್ತೇವೆ’ ಎಂದು ಹೇಳಿದರು.

ಜೆ.ಡಿ ವೇನ್ಸ್‌ ಉಪಾಧ್ಯಕ್ಷರಾಗಿ ಪ್ರಮಾಣವಚನ

ಟ್ರಂಪ್‌ ಭಾಷಣಕ್ಕೂ ಮುನ್ನ ಜೆ.ಡಿ. ವೇನ್ಸ್‌ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್‌ ಅವರು ಪ್ರಮಾಣವಚನ ಬೋಧಿಸಿದರು.

ಸಂಪ್ರದಾಯದ ಪ್ರಕಾರ ಅಮೆರಿಕದ ಅಧ್ಯಕ್ಷರ ಪ್ರಮಾಣವಚನ ಸಮಾರಂಭವು ‘ಕ್ಯಾಪಿಟಲ್‌’ನ ಮುಂಭಾಗದಲ್ಲಿ ನಡೆಯುತ್ತದೆ. ಆದರೆ ತೀವ್ರ ಚಳಿಯ ಕಾರಣ ಟ್ರಂಪ್‌ ಅವರ ಪ್ರಮಾಣವಚನ ಸಮಾರಂಭ ಒಳಾಂಗಣದಲ್ಲಿ ನೆರವೇರಿತು.

ಕಳೆದ ನವೆಂಬರ್‌ 5ರಂದು ನಡೆದ ನಡೆದ ಚುನಾವಣೆಯಲ್ಲಿ 78 ವರ್ಷದ ಟ್ರಂಪ್‌ ಅವರು ಡೆಮಾಕ್ರಟಿಕ್ ಪಕ್ಷದ ಎದುರಾಳಿ ಕಮಲಾ ಹ್ಯಾರಿಸ್ ವಿರುದ್ಧ ಅದ್ಭುತ ವಿಜಯ ಸಾಧಿಸಿದ್ದರು.

ವಿದೇಶಿ ಗಣ್ಯರು ಭಾಗಿ

ವಿಶ್ವದ ಅನೇಕ ಗಣ್ಯರು ಪ್ರಮಾಣವಚನ ಸಮಾರಂಭದಲ್ಲಿ ಹಾಜರಿದ್ದರು. ಭಾರತದಿಂದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಪಾಲ್ಗೊಂಡರು . ಟ್ರಂಪ್‌ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ,, ಉದ್ಯಮಿಗಳಾದ ಎಲಾನ್‌ ಮಸ್ಕ್‌, ಜೆಫ್‌ ಬೆಜೋಸ್‌ ಮತ್ತು ಟಿಮ್‌ ಕುಕ್ ಇದ್ದರು.

ಟ್ರಂಪ್‌ ಭಾಷಣದ ಪ್ರಮುಖ ಅಂಶಗಳು

* ಅಮೆರಿಕದ ಸಂಪೂರ್ಣ ಪುನಃಸ್ಥಾಪನೆ ಪ್ರಕ್ರಿಯೆ ಶುರುವಾಗಲಿದೆ.

* ಒಬ್ಬ ಕಮಾಂಡರ್ ಇನ್ ಚೀಫ್ ಆಗಿದ್ದುಕೊಂಡು ನಮ್ಮ ದೇಶವನ್ನು ಬೆದರಿಕೆಗಳು ಮತ್ತು ಆಕ್ರಮಣಗಳಿಂದ ರಕ್ಷಿಸುವೆ.

* ಉತ್ಪಾದನಾ ವಲಯದಲ್ಲಿ ಅಮೆರಿಕವು ಮತ್ತೆ ಮುಂಚೂಣಿಯ ರಾಷ್ಟ್ರವಾಗಲಿದೆ.

* ಲಿಂಗ ಆಧಾರಿತ ನೀತಿಯನ್ನು ಕೊನೆಗೊಳಿಸಿ, ಆರ್ಹತೆ ಆಧಾರಿತ ಸಮಾಜವನ್ನು ನಿರ್ಮಿಸುತ್ತೇವೆ. 

Tags:    

Similar News