ʻಶತ್ರುʼ ಹಸೀನಾಗೆ ಸಹಾಯ ಮಾಡಿದರೆ ಭಾರತದೊಂದಿಗೆ ಸಹಕಾರ ಕಠಿಣ: ಬಿಎನ್‌ಪಿ
ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ದೇಶದಿಂದ ಪರಾರಿಯಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತ ಸರ್ಕಾರ ಆಶ್ರಯ ನೀಡಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದು,ʻನಮ್ಮ ಶತ್ರುʼವಿಗೆ ಸಹಾಯ ಮಾಡಿದರೆ ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರ ಕಷ್ಟ ಎಂದು ಹೇಳಿದೆ.
ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಖಲೀದಾ ಜಿಯಾ ನೇತೃತ್ವದ ಬಿಎನ್‌ಪಿ ಪ್ರಮುಖ ಪ್ರತಿಸ್ಪರ್ಧಿಯಾಗಿದೆ.
ಉದ್ಯೋಗಗಳಲ್ಲಿ ಮೀಸಲಿಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಹಸೀನಾ ಅವರು ರಾಜೀನಾಮೆ ನೀಡಿ, ಸೋಮವಾರ (ಆಗಸ್ಟ್ 5)ರಂದು ಮಿಲಿಟರಿ ವಿಮಾನದಲ್ಲಿ ದೆಹಲಿ ಬಳಿಯ ಹಿಂಡನ್ ವಾಯುನೆಲೆಗೆ ಆಗಮಿಸಿದರು.
ʻಎರಡೂ ದೇಶಗಳು ಪರಸ್ಪರ ಸಹಕಾರ ಹೊಂದಿರಬೇಕು. ಭಾರತ ʻಅರ್ಥಮಾಡಿಕೊಂಡು ವರ್ತಿಸಬೇಕುʼʼ ಎಂದು ಬಿಎನ್‌ಪಿ ಸ್ಥಾಯಿ ಸಮಿತಿ ಸದಸ್ಯ ಗಯೇಶ್ವರ್ ರಾಯ್ ತಿಳಿಸಿದರು. ʻಭಾರತ ಸರ್ಕಾರ ನಮ್ಮ ಶತ್ರುಗಳಿಗೆ ಸಹಾಯ ಮಾಡಿದರೆ, ಪರಸ್ಪರ ಸಹಕಾರವನ್ನು ಗೌರವಿಸುವುದು ಕಷ್ಟವಾಗುತ್ತದೆ. ಈಹಿಂದೆ ನಮ್ಮ ಮಾಜಿ ವಿದೇಶಾಂಗ ಸಚಿವರು ಶೇಖ್ ಹಸೀನಾ ಅವರು ಮತ್ತೆ ಅಧಿಕಾರಕ್ಕೆ ಮರಳಲು ಭಾರತ ಸಹಾಯ ಮಾಡುತ್ತದೆ ಎಂದಿದ್ದರು. ಭಾರತ ಮತ್ತು ಬಾಂಗ್ಲಾದೇಶದ ಜನರ ನಡುವೆ ಸಮಸ್ಯೆಗಳಿಲ್ಲ.ಆದರೆ, ಭಾರತ ಒಂದು ಪಕ್ಷವನ್ನು ಉತ್ತೇಜಿಸುವ ಬದಲು ದೇಶವನ್ನು ಉತ್ತೇಜಿಸಬೇಕಲ್ಲವೇ?ʼ ಎಂದು 1991ರಲ್ಲಿ ಸಚಿವರಾಗಿದ್ದ ರಾಯ್ ಹೇಳಿದರು.
ಐಎಸ್‌ಐ ದೂರಿದ ಹಸೀನಾ ಪುತ್ರ: ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ ತಕ್ಷಣ ತಾಯಿ ಬಾಂಗ್ಲಾದೇಶಕ್ಕೆ ಮರಳಲಿದ್ದಾರೆ ಎಂದು ಹಸೀನಾ ಅವರ ಪುತ್ರ ಸಜೀಬ್ ವಾಝೆದ್ ಜಾಯ್ ಹೇಳಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಅಶಾಂತಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಅನ್ನು ಅವರು ದೂಷಿಸಿದ್ದಾರೆ.
ʻಹಸೀನಾ ಅವರು ಬಾಂಗ್ಲಾದೇಶಕ್ಕೆ ಮರಳುತ್ತಾರೆ. ಆದರೆ, ಅವರು ನಿವೃತ್ತ ಅಥವಾ ಸಕ್ರಿಯ ರಾಜಕಾರಣಿಯಾಗಿರುತ್ತಾರೆಯೇ ಎಂದು ಇನ್ನೂ ನಿರ್ಧರಿಸಿಲ್ಲ.ಅವರು ಬಾಂಗ್ಲಾದೇಶಕ್ಕೆ ಹಿಂತಿರುಗುವುದಿಲ್ಲ ಎಂದು ಮೊದಲು ಹೇಳಿದ್ದೆ.ಆದರೆ, ದೇಶದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಈಗ ನಾವು ನಮ್ಮ ಜನರನ್ನು ಸುರಕ್ಷಿತವಾಗಿ ಇರಿಸಬೇಕಿದೆ,ʼ ಎಂದು ತಿಳಿಸಿದರು.
ʻಅವಾಮಿ ಲೀಗ್ ಬಾಂಗ್ಲಾದ ಅತಿ ದೊಡ್ಡ ಮತ್ತು ಹಳೆಯ ರಾಜಕೀಯ ಪಕ್ಷ. ಆದ್ದರಿಂದ ನಾವು ನಮ್ಮ ಜನರಿಂದ ದೂರ ಹೋಗಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ ನಂತರ ಹಸೀನಾ ಅವರು ಖಂಡಿತವಾಗಿಯೂ ಬಾಂಗ್ಲಾದೇಶಕ್ಕೆ ಹಿಂತಿರುಗುತ್ತಾರೆ,ʼ ಎಂದು ಹೇಳಿದರು.
ʻಅವಾಮಿ ಲೀಗ್ ಭಾರತದ ಎಲ್ಲಾ ಕಾಲಮಾನದ ಮಿತ್ರ. ಭಾರತ ಅಂತಾರಾಷ್ಟ್ರೀಯ ಒತ್ತಡದ ಮೂಲಕ ಅವಾಮಿ ಲೀಗ್ ನಾಯಕರ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು,ʼ ಎಂದು ಹೇಳಿದರು.