Sri Lanka Presidential Poll | ಶ್ರೀಲಂಕಾದಲ್ಲಿ ಮತದಾನ ಆರಂಭ
ಸುಮಾರು 13,400 ಮತಗಟ್ಟೆಗಳಲ್ಲಿ ಸುಮಾರು 17 ದಶಲಕ್ಷ ಜನ ಮತ ಚಲಾಯಿಸಲಿದ್ದಾರೆ. ಮತದಾನ ಸಂಜೆ 5 ಗಂಟೆವರೆಗೆ ನಡೆಯಲಿದೆ. ಭಾನುವಾರದ ವೇಳೆಗೆ ಫಲಿತಾಂಶ ನಿರೀಕ್ಷಿಸಲಾಗಿದೆ.;
ಕೊಲಂಬೊ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯ ಮತದಾನ ಇಂದು(ಶನಿವಾರ) ಆರಂಭವಾಯಿತು.
ಸುಮಾರು 13,400 ಮತಗಟ್ಟೆಗಳಲ್ಲಿ ಸುಮಾರು 17 ದಶಲಕ್ಷ ಜನ ಮತ ಚಲಾಯಿಸಲಿದ್ದಾರೆ. ಚುನಾವಣೆ ನಡೆಸಲು 200,000 ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ 63,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5ರವರೆಗೆ ನಡೆಯಲಿದೆ. ಭಾನುವಾರದ ವೇಳೆಗೆ ಫಲಿತಾಂಶ ನಿರೀಕ್ಷಿಸಲಾಗಿದೆ.
38 ಅಧ್ಯಕ್ಷೀಯ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ(75) ಐದು ವರ್ಷಗಳ ಅವಧಿಗೆ ಮರುಚುನಾವಣೆ ಬಯಸುತ್ತಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಹೊರತಂದ ಪ್ರಯತ್ನಗಳನ್ನು ಆಧರಿಸಿ, ಮತ ಕೇಳಿದ್ದಾರೆ. ಇದು ಜಗತ್ತಿನ ಅತ್ಯಂತ ತ್ವರಿತ ಆರ್ಥಿಕ ಚೇತರಿಕೆಗಳಲ್ಲಿ ಒಂದು ಎಂದು ಅನೇಕ ತಜ್ಞರು ಪ್ರಶಂಸಿಸಿದ್ದಾರೆ.
ತ್ರಿಕೋನ ಕದನದಲ್ಲಿ ವಿಕ್ರಮಸಿಂಘೆ ಅವರು ರಾಷ್ಟ್ರೀಯ ಜನತಾ ಶಕ್ತಿ(ಎನ್‌ಪಿಪಿ)ಯ ಅನುರ ಕುಮಾರ ಡಿಸ್ಸನಾಯಕ (56) ಮತ್ತು ಪ್ರಮುಖ ಪ್ರತಿಪಕ್ಷವಾದ ಸಮಗಿ ಜನ ಬಲವೇಗಯ (ಎಸ್‌ಜೆಬಿ)ದ ನಾಯಕ ಸಜಿತ್ ಪ್ರೇಮದಾಸ (57) ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ.
2022 ರಲ್ಲಿ ಶ್ರೀಲಂಕಾ ತೀವ್ರ ಆರ್ಥಿಕ ಕುಸಿತಕ್ಕೆ ಸಿಲುಕಿದ್ದರಿಂದ ಜನ ದಂಗೆಗೆದ್ದು, ಆಗಿನ ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಅವರು ದೇಶದಿಂದ ಪಲಾಯನ ಮಾಡಿದ್ದರು.
ವಿಕ್ರಮಸಿಂಘೆ ಅವರ ಆರ್ಥಿಕ ಸುಧಾರಣೆ ಯೋಜನೆಗಳು ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ಆದರೆ, ಶ್ರೀಲಂಕಾ ನಕಾರಾತ್ಮಕ ಬೆಳವಣಿಗೆಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದೆ. ಶ್ರೀಲಂಕಾದ ಬಿಕ್ಕಟ್ಟು ಡಿಸ್ಸನಾಯಕ(55) ಅವರಿಗೆ ಅವಕಾಶ ಕಲ್ಪಿಸಿದ್ದು, ಅವರು ದ್ವೀಪದ ಭ್ರಷ್ಟ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸುವ ಪ್ರತಿಜ್ಞೆ ಮಾಡಿದ್ದಾರೆ.
ಅಲ್ಪಸಂಖ್ಯಾತ ತಮಿಳು ಸಮಸ್ಯೆ ಈ ಚುನಾವಣೆಯಲ್ಲಿ ಮುಖ್ಯ ವಿಷಯವಾಗಿಲ್ಲ. ಬದಲಾಗಿ, ರಾಷ್ಟ್ರದ ಜರ್ಜರಿತ ಆರ್ಥಿಕತೆ ಮತ್ತು ಅದರ ಚೇತರಿಕೆಯನ್ನು ಮೂವರು ಅಭ್ಯರ್ಥಿಗಳು ಪ್ರಮುಖವಾಗಿಸಿಕೊಂಡಿದ್ದಾರೆ.