ಪಾಕ್ ಅತಂತ್ರ ಫಲಿತಾಂಶ: ಇಮ್ರಾನ್ ಖಾನ್ ಬೆಂಬಲಿಗರಿಗೆ ಮುನ್ನಡೆ
ಪಾಕಿಸ್ತಾನದ ಚುನಾವಣಾ ಆಯೋಗವು ಫಲಿತಾಂಶಗಳನ್ನು ಪ್ರಕಟಿಸಿದ್ದು, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಮುಂಚೂಣಿ ಸಾಧಿಸಿದ್ದಾರೆ.;
ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಅಡಿಯಲ್ಲಿ ತತ್ತರಿಸುತ್ತಿರುವ ಪಾಕಿಸ್ತಾನಕ್ಕೆ ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳು ಇನ್ನಷ್ಟು ಸಂಕಟಗಳನ್ನು ಹೆಚ್ಚಿಸಿವೆ, ಸರ್ಕಾರ ರಚನೆಗೆ ಬೇಕಾದ ಬಹುಮತ ಯಾರಿಗೂ ಸಿಗದಿರುವುದರಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಬೆಂಬಲದೊಂದಿಗೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಸಮ್ಮಿಶ್ರ ಸರ್ಕಾರ ರಚಿಸಲು ಪ್ರಸ್ತಾಪಿಸಿದ್ದಾರೆ.
ಪಾಕಿಸ್ತಾನದ ಚುನಾವಣಾ ಆಯೋಗವು (ECP) 266 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸ್ಪರ್ಧಿಸಿರುವ 265 ಸ್ಥಾನಗಳ ಪೈಕಿ 264 ಸ್ಥಾನಗಳಿಗೆ ಫಲಿತಾಂಶಗಳನ್ನು ಪ್ರಕಟಿಸಿದ್ದು, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಮುಂಚೂಣಿ ಸಾಧಿಸಿದ್ದಾರೆ.
ಪಿಟಿಐ ಬೆಂಬಲಿತ ಪಕ್ಷೇತರರಿಗೆ ಮುನ್ನಡೆ
ಸ್ವತಂತ್ರ ಅಭ್ಯರ್ಥಿಗಳು 101 ಸ್ಥಾನಗಳನ್ನು ಪಡೆದುಕೊಂಡಿದ್ದು, ಅವರಲ್ಲಿ 93 ಮಂದಿ ಪಿಟಿಐ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ. 75 ಸ್ಥಾನಗಳನ್ನು ಗೆದ್ದ ನವಾಜ್ ಷರೀಫ್ ಅವರ ಪಿಎಂಎಲ್‌ಎನ್ ನಂತರದ ಸ್ಥಾನ ಪಡೆದಿದೆ. ಹೀಗಾಗಿ ಯಾರು ಸರ್ಕಾರ ರಚಿಸುತ್ತಾರೆ ಎಂಬುದರ ಕುರಿತು ಅನಿಶ್ಚಿತತೆ ಮನೆ ಮಾಡಿದೆ.
ಸಮ್ಮಿಶ್ರ ಸರ್ಕಾರ ಮಾತುಕತೆ ಮುಂದುವರಿದಂತೆ, ಚುನಾವಣೆಯಲ್ಲಿ ಸೋತ ಸ್ವತಂತ್ರ ಅಭ್ಯರ್ಥಿಗಳು ಮತಗಟ್ಟೆಯ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದ್ದು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ.
ಇಮ್ರಾನ್ ಖಾನ್ ಅವರ ಪಿಟಿಐ ಮತ್ತು ಷರೀಫ್ ಅವರ ಪಿಎಂಎಲ್‌ಎನ್ ಎರಡೂ ಮುಂದಿನ ಸರ್ಕಾರ ರಚಿಸುವ ಬಯಕೆಯನ್ನು ವ್ಯಕ್ತಪಡಿಸಿವೆ.
ಚುನಾವಣಾ ಫಲಿತಾಂಶ ಅನಿರೀಕ್ಷಿತವಾಗಿದೆ. ಶರೀಫ್ ಅವರ ಪಕ್ಷವು ಮಿಲಿಟರಿಯ ಬೆಂಬಲವನ್ನು ಹೊಂದಿದ್ದು, ಜಯಶಾಲಿಯಾಗಿ ಹೊರಹೊಮ್ಮುತ್ತದೆ ಎಂದು ಅನೇಕ ರಾಜಕೀಯ ವೀಕ್ಷಕರು ಭವಿಷ್ಯ ನುಡಿದಿದ್ದಾರೆ.
ಸರ್ಕಾರ ರಚನೆಗೆ 169 ಸ್ಥಾನಗಳ ಸರಳ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ.
ಭುಟ್ಟೋ-ಷರೀಫ್ ನಂಟು?
ಮೂರನೇ ಅತಿ ಹೆಚ್ಚು ಮತಗಳನ್ನು ಗಳಿಸಿದ ಪಿಪಿಪಿಯ ಬಿಲಾವಲ್ ಭುಟ್ಟೊ ಅವರು ಇಮ್ರಾನ್ ಖಾನ್ ಅವರ ಪಿಟಿಐ ಅಥವಾ ನವಾಜ್ ಷರೀಫ್ ಅವರ ಪಿಎಂಎಲ್‌ಎನ್‌ನೊಂದಿಗೆ ಔಪಚಾರಿಕ ಚರ್ಚೆಯಲ್ಲಿ ತೊಡಗಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಭುಟ್ಟೋ ಅವರ ತಂದೆ ಲಾಹೋರ್‌ನಲ್ಲಿ ಷರೀಫ್ ಅವರ ಸಹೋದರನನ್ನು ಅನೌಪಚಾರಿಕವಾಗಿ ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.
ಅವರ ಸಂಯೋಜಿತ ಬಲದ ಹೊರತಾಗಿಯೂ, ಬಹುಮತಕ್ಕೆ ಅವರಿಗೆ ಇನ್ನೂ 6 ಸ್ಥಾನಗಳ ಕೊರತೆಯಿದೆ.
ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಅವರ ಸಹೋದರ ಶೆಹಬಾಜ್ ಷರೀಫ್ ಅವರು ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಜೊತೆಗೆ ಕೇಂದ್ರ ಮತ್ತು ಎರಡೂ ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರವನ್ನು ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಜಿಯೋ ಟಿವಿ ಶನಿವಾರ ವರದಿ ಮಾಡಿದೆ. ಪಂಜಾಬ್
ಏತನ್ಮಧ್ಯೆ, ಜೈಲಿನಲ್ಲಿರುವ ಪಾಕಿಸ್ತಾನಿ ವಿರೋಧ ಪಕ್ಷದ ನಾಯಕ ಇಮ್ರಾನ್ ಖಾನ್ ಅವರ ಪಕ್ಷದಿಂದ ಬೆಂಬಲಿತ ಅಭ್ಯರ್ಥಿಗಳು ಸರ್ಕಾರವನ್ನು ಸ್ಥಾಪಿಸಲು ಉದ್ದೇಶಿಸಿದ್ದಾರೆ ಎಂದು ಇಮ್ರಾನ್ ಖಾನ್ ಅವರ ಹಿರಿಯ ಸಹಾಯಕರು ಶನಿವಾರ ಹೇಳಿದ್ದಾರೆ.
MQM ಪುನರಾಗಮನ
MQM ಪಕ್ಷವು ಚುನಾವಣೆಯಲ್ಲಿ ಪುನರಾಗಮನವನ್ನು ಮಾಡಿದ್ದು, 17 ಸ್ಥಾನಗಳನ್ನು ಪಡೆದುಕೊಂಡಿದೆ. ಆ ಮೂಲಕ ಯಾವುದೇ ಒಕ್ಕೂಟದಲ್ಲಿ ಸಂಭಾವ್ಯ ಪಾತ್ರವನ್ನು ವಹಿಸುವ ಮುನ್ಸೂಚನೆ ನೀಡಿದೆ.
ರಾಷ್ಟ್ರೀಯ ಅಸೆಂಬ್ಲಿಯ 366 ಸ್ಥಾನಗಳಲ್ಲಿ, 266 ಸ್ಥಾನಗಳನ್ನು ನೇರ ಮತದಾನದ ಮೂಲಕ ನಿರ್ಧರಿಸಲಾಗುತ್ತದೆ. 70 ಕ್ಷೇತ್ರಗಳಲ್ಲಿ 60 ಮಹಿಳೆಯರಿಗೆ ಮತ್ತು 10 ಮುಸ್ಲಿಮೇತರರಿಗೆ ಮೀಸಲಿಡಲಾಗಿದೆ. ವಿಧಾನಸಭೆಯಲ್ಲಿ ಪ್ರತಿ ಪಕ್ಷದ ಬಲದ ಆಧಾರದ ಮೇಲೆ ಈ ಸ್ಥಾನಗಳನ್ನು ಹಂಚಲಾಗುತ್ತದೆ.