ಪಾಕಿಸ್ತಾನದ ರೈಲು ಅಪಹರಣ ಅಂತ್ಯ, 21 ಪ್ರಯಾಣಿಕರು, 4 ಯೋಧರ ಸಾವು, 33 ಉಗ್ರರ ಹತ್ಯೆ

ಮಂಗಳವಾರ ಕ್ವೆಟ್ಟಾದಿಂದ ಪೇಶಾವರ್‌ಗೆ 440 ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಉಗ್ರರು, ಗುಡಾಲಾರ್ ಮತ್ತು ಪಿರು ಕುನ್‌ರಿ ಬಳಿ ಹಳಿ ಸ್ಫೋಟ ಮಾಡಿದ ಬಳಿಕ ಒತ್ತೆಯಲ್ಲಿಟ್ಟುಕೊಂಡಿದ್ದರು.;

Update: 2025-03-13 06:35 GMT

ಉಗ್ರರ ನಡುವಿನ ಜಟಾಪಟಿ ವೇಳೆ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುತ್ತಿರುವುದು. 

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಉಗ್ರರ ಹಿಡಿತದಲ್ಲಿದ್ದ ರೈಲನ್ನು ಅಲ್ಲಿನ ಸೇನಾ ಪಡೆ ಕಾರ್ಯಾಚರಣೆ ನಡೆಸಿ ಬಿಡುಗಡೆಗೊಳಿಸಿದೆ. ಘಟನೆಯಲ್ಲಿ 21 ಪ್ರಯಾಣಿಕರು ಹಾಗೂ ನಾಲ್ವರು ಅರೆಸೈನಿಕ ಯೋಧರು ಮೃತಪಟ್ಟಿದ್ದಾರೆ, ಪಾಕಿಸ್ತಾನ ಸೇನೆ 33 ಉಗ್ರರರನ್ನು ಹೊಡೆದುರುಳಿಸಿದೆ. ಉಳಿದ ಒತ್ತೆಯಾಳುಗಳನ್ನು ರಕ್ಷಣಾ ಪಡೆಗಳು ರಕ್ಷಿಸಿವೆ.

ಮಂಗಳವಾರ ಕ್ವೆಟ್ಟಾದಿಂದ ಪೇಶಾವರ್‌ಗೆ 440 ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಉಗ್ರರು, ಗುಡಾಲಾರ್ ಮತ್ತು ಪಿರು ಕುನ್‌ರಿ ಬಳಿ ಹಳಿ ಸ್ಫೋಟ ಮಾಡಿದ ಬಳಿಕ ಒತ್ತೆಯಲ್ಲಿಟ್ಟುಕೊಂಡಿದ್ದರು. ಬಲೂಚ್ ಲಿಬರೇಶನ್ ಆರ್ಮಿ (BLA) ದುಷ್ಕೃತ್ಯದ ಜವಾಬ್ದಾರಿ ವಹಿಸಿಕೊಂಡಿತು. ದಾಳಿಕೋರರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅಪಹರಣಗೊಂಡವರನ್ನು ಮಾನವ ಕೋಟೆಗಳಾಗಿ ಬಳಸಿದುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆ ಉಂಟಾಗಿತ್ತು.

ಸೇನೆ, ವಾಯುಪಡೆ, ಫ್ರಂಟಿಯರ್ ಕಾರ್ಪ್ಸ್ (FC) ಮತ್ತು ಸ್ಪೆಷಲ್ ಸರ್ವೀಸ್ ಗ್ರೂಪ್ (SSG) ಕಮಾಂಡೋಗಳು ಹಂತಹಂತವಾಗಿ ತೆರವು ಕಾರ್ಯಾಚರಣೆ ನಡೆಸಿದವು. ಮೊದಲು ಸ್ಪೋಟಕ ಹೊಂದಿದ್ದ ಜಾಕೆಟ್​ ಧರಿಸಿದ್ದ ಉಗ್ರರನ್ನು ಶಾರ್ಪ್‌ಶೂಟರ್‌ಗಳು ಹೊಡೆದುರುಳಿಸಿದರು, ನಂತರ ಎಲ್ಲಾ ಬೋಗಿಗಳನ್ನು ಒಂದೊಂದಾಗಿ ಪರಿಶೀಲಿಸಿದರು. ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತಾರರ್ ಈ ಬಗ್ಗೆ ಮಾಹಿತಿ ನೀಡಿದ್ದು 33 ಉಗ್ರರು ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಸ್ಯಾಟ್​ಲೈಟ್ ಫೋನ್ ಮೂಲಕ ಸಂಪರ್ಕ

ಉಗ್ರರು ಆಫ್ಘಾನಿಸ್ತಾನದ ತನ್ನ ನೆಲೆಯೊಂದಿಗೆ ಸ್ಯಾಟ್​ಲೈಟ್​ ಫೋನ್ ಮೂಲಕ ಸಂಪರ್ಕದಲ್ಲಿದ್ದರು. ಹೀಗಾಗಿ ಕೃತ್ಯದಲ್ಲಿ ವಿದೇಶಿ ಉಗ್ರರ ಕೈವಾಡವಿದೆ ಎಂದು ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಹೇಳಿದ್ದಾರೆ.

ಅಧಿಕಾರಿಗಳು 30 ಮಂದಿ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ದಾಳಿಯಿಂದ ಪಾರಾದವರು ಭಯಾನಕ ದೃಶ್ಯಗಳನ್ನು ವಿವರಿಸಿದ್ದು, ಪ್ರಬಲ ಸ್ಫೋಟ, ಗುಂಡಿನ ದಾಳಿಯಿಂದ ತತ್ತರಿಸಿದೆವು ಎಂದು ಹೇಳಿದ್ದಾರೆ.

ದಾಳಿಗೆ ಖಂಡನೆ

ಪಾಕಿಸ್ತಾನದ ಸರ್ಕಾರ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಗೃಹ ಸಚಿವ ಮೊಹ್ಸಿನ್ ನಕ್ವಿ ಇದನ್ನು “ಅಮಾನವೀಯ” ಎಂದು ಹೇಳಿದ್ದಾರೆ. ಪ್ರಧಾನಿ ಶಹಬಾಜ್ ಶರೀಫ್ ಬಲೂಚಿಸ್ತಾನ್ ಭೇಟಿಗೆ ಸಿದ್ಧತೆ ನಡೆಸುತ್ತಿದ್ದಾರೆ.

ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಈ ದಾಳಿಯನ್ನು ಖಂಡಿಸಿದ್ದು, ಪಾಕಿಸ್ತಾನಕ್ಕೆ ನೈತಿಕ ಬೆಂಬಲಲ ವ್ಯಕ್ತಪಡಿಸಿದೆ. ಬಲೂಚಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಳವಾಗುತ್ತಿದ್ದು, ರಕ್ಷಣಾ ಪಡೆಗಳು ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಮಾರ್ಗ (CPEC) ಯೋಜನೆಗೆ ತೊಡಕು ಉಂಟುಮಾಡಲು ಯತ್ನಿಸುತ್ತಿದ್ದಾರೆ.

ಬಲೂಚಿಸ್ತಾನದಲ್ಲಿ ಉಗ್ರರು ಇದೇ ಮೊದಲ ಬಾರಿಗೆ ರೈಲನ್ನು ಅಪಹರಿಸಿದ್ದಾರೆ. ಹೀಗಾಗಿ ದುಷ್ಕೃತ್ಯಗಳಿಗೆ ಅನ್ಯ ಮಾರ್ಗ ಕಂಡುಕೊಂಡಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.

Tags:    

Similar News