ಬಾಂಬ್ ಬೆದರಿಕೆ; ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ವಿಮಾನ ರೋಮ್‌ನಲ್ಲಿ ತುರ್ತು ಭೂಸ್ಪರ್ಶ
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಆಗಿರುವ ದೃಶ್ಯಗಳಲ್ಲಿ, ವಿಮಾನವು ರೋಮ್‌ಗೆ ತಲುಪುವ ಮೊದಲು ಇಟಲಿಯ ವಾಯುಪಡೆಯು ಅದಕ್ಕೆ ನೆರವು ನೀಡುತ್ತಿರುವುದು ಕಂಡು ಬಂದಿತ್ತು.;
ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನವನ್ನು ಭಾನುವಾರ ಸಂಜೆ ‘ಬಾಂಬ್ ಬೆದರಿಕೆ’ ಹಿನ್ನೆಲೆಯಲ್ಲಿ ರೋಮ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ತಪಾಸಣೆ ನಂತರ ವಿಮಾನದ ಪ್ರಯಾಣ ಮುಂದುವರಿಸಲು ಅವಕಾಶ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ. ವಿಮಾನದಲ್ಲಿ 199 ಪ್ರಯಾಣಿಕರು ಮತ್ತು 15 ಸಿಬ್ಬಂದಿಗಳು ಇದ್ದರು.
ಅಮೆರಿಕದ ಫೆಡರಲ್ ಏವಿಯೇಷನ್ ಆಡಳಿತ (ಎಫ್‌ಎಎ) ಸುದ್ದಿ ಸಂಸ್ಥೆಗೆ ನೀಡಿದ ಮಾಹಿತಿ ಪ್ರಕಾರ, 'ಸಂಭಾವ್ಯ ಬೆದರಿಕೆ ಹಿನ್ನೆಲೆಯಲ್ಲಿ ಅಮೆರಿಕನ್ ಏರ್‌ಲೈನ್ಸ್ ಎಎ 292 ವಿಮಾನವನ್ನು ರೋಮ್‌ಗೆ ತಿರುಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೋಯಿಂಗ್ 787-9 ವಿಮಾನವು ಸ್ಥಳೀಯ ಸಮಯ 5.30 ರ ಸುಮಾರಿಗೆ ಲಿಯೋನಾರ್ಡೊ ಡಾ ವಿನ್ಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಮಿಲಿಟರಿ ಪಡೆಯ ತಪಾಸಣೆ ಬಳಿಕ ಹಾರಾಟ ಮುಂದುವರಿಸಿತು ಎಂದು ಎಫ್‌ಎಎ ತಿಳಿಸಿದೆ.
ಇಟಾಲಿಯನ್ ಸುದ್ದಿ ಸಂಸ್ಥೆ ಎಎನ್ಎಸ್ಎ ಪ್ರಕಾರ, "ಬಾಂಬ್ ಬೆದರಿಕೆ"ಯ ಕಾರಣ ಭದ್ರತಾ ತಪಾಸಣೆ ನಡೆಸಲು ಅಮೆರಿಕನ್ ಏರ್‌ಲೈನ್ಸ್ ಸೂಚನೆ ನಂತರ ವಿಮಾನವನ್ನು ರೋಮ್‌ನಲ್ಲಿ ಇಳಿಸಲಾಗಿದೆ ಎಂದು ವರದಿ ಹೇಳಿದೆ. ಅಮೆರಿಕನ್ ಏರ್‌ಲೈನ್ಸ್ ಪಿಟಿಐಗೆ ನೀಡಿದ ಹೇಳಿಕೆಯ ಪ್ರಕಾರ, ವಿಮಾನಕ್ಕೆ ಸಂಭಾವ್ಯ ಭದ್ರತಾ ಸಮಸ್ಯೆ ಎದುರಾದ ಕಾರಣ ರೋಮ್‌ಗೆ ತಿರುಗಿಸಲಾಗಿದೆ.
ಪ್ರಯಾಣಿಕರಿಗೆ ಉಂಟಾದ ತೊಂದರೆಗಾಗಿ ವಿಮಾನಯಾನ ಸಂಸ್ಥೆ ಕ್ಷಮೆ ಯಾಚಿಸಿದೆ. "ನಮ್ಮ ಪ್ರಯಾಣಿಕರನ್ನು ಸುರಕ್ಷಿತವಾಗಿಡುವುದು ಹಾಗೂ ಭದ್ರತೆಯನ್ನು ಆದ್ಯತೆಯಾಗಿ ಪರಿಗಣಿಸುವುದು ನಮ್ಮ ಉದ್ದೇಶವಾಗಿತ್ತು. ಈಗ ಉಂಟಾಗಿರುವ ಗೊಂದಲಕ್ಕೆ ನಾವು ಕ್ಷಮೆಯಾಚಿಸುತ್ತೇವೆ," ಎಂದು ಹೇಳಿಕೊಂಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಆಗಿರುವ ದೃಶ್ಯಗಳಲ್ಲಿ, ವಿಮಾನವು ರೋಮ್‌ಗೆ ತಲುಪುವ ಮೊದಲು ಇಟಲಿಯ ವಾಯುಪಡೆಯು ಅದಕ್ಕೆ ನೆರವು ನೀಡುತ್ತಿರುವುದು ಕಂಡು ಬಂದಿತ್ತು.