ನನ್ನ ನಿಜವಾದ ಟ್ರೋಫಿಗಳು ಡ್ರೆಸ್ಸಿಂಗ್ ರೂಮ್‌ನಲ್ಲಿವೆ: ತಂಡವನ್ನೇ ಆಸ್ತಿ ಎಂದ ನಾಯಕ ಸೂರ್ಯಕುಮಾರ್

"ನನ್ನ 14 ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೇ ನನ್ನ ನಿಜವಾದ ಟ್ರೋಫಿಗಳು" ಎಂದು ಹೇಳುವ ಮೂಲಕ, ತಂಡದ ಒಗ್ಗಟ್ಟನ್ನು ಮತ್ತು ತಮ್ಮ ನಾಯಕತ್ವದ ಗುಣವನ್ನು ಜಗತ್ತಿನ ಮುಂದೆ ಪ್ರದರ್ಶಿಸಿದ್ದಾರೆ.

Update: 2025-09-29 05:41 GMT

ಸಾಂದರ್ಭಿಕ ಚಿತ್ರ

Click the Play button to listen to article

ಏಷ್ಯಾ ಕಪ್ ಗೆದ್ದರೂ, ಟ್ರೋಫಿ ಕೈಗೆ ಸಿಗದಿದ್ದಾಗ ನಾಯಕನೊಬ್ಬನ ಮನಸ್ಥಿತಿ ಹೇಗಿರಬಹುದು? ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಈ ಅನಿರೀಕ್ಷಿತ ಮತ್ತು ಮುಜುಗರದ ಸನ್ನಿವೇಶವನ್ನು ಅತ್ಯಂತ ಪ್ರಬುದ್ಧವಾಗಿ ನಿಭಾಯಿಸಿದ್ದಾರೆ. ಟ್ರೋಫಿ ವಿವಾದದ ಬಗ್ಗೆ ಎದೆಗುಂದದೆ, "ನನ್ನ 14 ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೇ ನನ್ನ ನಿಜವಾದ ಟ್ರೋಫಿಗಳು" ಎಂದು ಹೇಳುವ ಮೂಲಕ, ತಂಡದ ಒಗ್ಗಟ್ಟನ್ನು ಮತ್ತು ತಮ್ಮ ನಾಯಕತ್ವದ ಗುಣವನ್ನು ಜಗತ್ತಿನ ಮುಂದೆ ಪ್ರದರ್ಶಿಸಿದ್ದಾರೆ.

"ನನ್ನ ಕ್ರಿಕೆಟ್ ಜೀವನದಲ್ಲಿ ಇದೇ ಮೊದಲು"

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್, ತಮ್ಮ ಆಕ್ರೋಶ ಮತ್ತು ನಿರಾಶೆಯನ್ನು ಮರೆಮಾಚದೆ, "ನಾನು ಕ್ರಿಕೆಟ್ ಆಡಲು ಮತ್ತು ನೋಡಲು ಶುರು ಮಾಡಿದಾಗಿನಿಂದ ಇಂತಹ ಘಟನೆಯನ್ನು ನೋಡಿಯೇ ಇರಲಿಲ್ಲ. ಕಷ್ಟಪಟ್ಟು ಗೆದ್ದ ಚಾಂಪಿಯನ್ ತಂಡಕ್ಕೆ ಟ್ರೋಫಿಯನ್ನು ನಿರಾಕರಿಸಲಾಗಿದೆ. ಇದು ಸುಲಭದ ಗೆಲುವಾಗಿರಲಿಲ್ಲ. ಸತತ ಎರಡು ದಿನ ಕಠಿಣ ಪಂದ್ಯಗಳನ್ನು ಆಡಿ ನಾವು ಈ ಗೆಲುವಿಗೆ ಅರ್ಹರಾಗಿದ್ದೆವು" ಎಂದು ಬೇಸರ ವ್ಯಕ್ತಪಡಿಸಿದರು.

ಆದರೆ, ತಕ್ಷಣವೇ ತಮ್ಮ ಮಾತಿನ ಧಾಟಿಯನ್ನು ಬದಲಿಸಿದ ಅವರು, ತಂಡದ ಸದಸ್ಯರನ್ನು ಶ್ಲಾಘಿಸಿದರು. "ನೀವು ಟ್ರೋಫಿಗಳ ಬಗ್ಗೆ ಕೇಳುವುದಾದರೆ, ನನ್ನ ಟ್ರೋಫಿಗಳು ನನ್ನ ಡ್ರೆಸ್ಸಿಂಗ್ ರೂಮ್‌ನಲ್ಲಿವೆ. ನನ್ನೊಂದಿಗಿನ 14 ಆಟಗಾರರು, ಎಲ್ಲಾ ಸಹಾಯಕ ಸಿಬ್ಬಂದಿ, ಅವರೇ ನನ್ನ ನಿಜವಾದ ಟ್ರೋಫಿಗಳು. ಈ ಸುಂದರ ನೆನಪುಗಳೇ ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತವೆ" ಎಂದು ಹೇಳುವ ಮೂಲಕ ತಮ್ಮ ತಂಡದ ಸದಸ್ಯರಿಗೆ ಹೃದಯಸ್ಪರ್ಶಿ ಸಂದೇಶ ರವಾನಿಸಿದರು.

ಪಾಕ್ ಪತ್ರಕರ್ತರಿಗೆ ಖಡಕ್ ಉತ್ತರ

ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನಿ ಪತ್ರಕರ್ತರು, "ನೀವು ಪಾಕ್ ನಾಯಕನೊಂದಿಗೆ ಹಸ್ತಲಾಘವ ಮಾಡದೆ ಮತ್ತು ಫೋಟೋಶೂಟ್‌ಗೆ ಗೈರಾಗುವ ಮೂಲಕ ಕ್ರಿಕೆಟ್‌ಗೆ ರಾಜಕೀಯ ಬೆರೆಸುತ್ತಿದ್ದೀರಿ" ಎಂದು ಆರೋಪಿಸಿದಾಗ, ಸೂರ್ಯಕುಮಾರ್ ಶಾಂತವಾಗಿಯೇ ಉತ್ತರಿಸಿದರು. "ನೀವು ಯಾಕೆ ಕೋಪಗೊಳ್ಳುತ್ತಿದ್ದೀರಿ? ಒಂದೇ ಪ್ರಶ್ನೆಯಲ್ಲಿ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದೀರಿ" ಎಂದು ನಗುತ್ತಲೇ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಮತ್ತೊಬ್ಬ ಪತ್ರಕರ್ತ, "ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದು ಬಿಸಿಸಿಐ ಇ-ಮೇಲ್ ಮಾಡಿದ್ದು ನಿಮಗೆ ತಿಳಿದಿತ್ತೇ?" ಎಂದು ಕೇಳಿದಾಗ, "ಇ-ಮೇಲ್ ಬಗ್ಗೆ ನನಗೆ ಯಾವುದೇ ಕಲ್ಪನೆಯಿಲ್ಲ. ನಾವು ಈ ನಿರ್ಧಾರವನ್ನು ಮೈದಾನದಲ್ಲೇ ತೆಗೆದುಕೊಂಡೆವು. ಹೀಗೆ ಮಾಡಿ ಎಂದು ನಮಗೆ ಯಾರೂ ಹೇಳಿಲ್ಲ. ಒಂದು ಟೂರ್ನಿ ಗೆದ್ದರೆ, ನಿಮಗೆ ಟ್ರೋಫಿ ಸಿಗಲು ಅರ್ಹತೆ ಇದೆಯೋ ಇಲ್ಲವೋ? ನೀವೇ ಹೇಳಿ?" ಎಂದು ಮರುಪ್ರಶ್ನಿಸಿದರು. ಇದಕ್ಕೆ ಪತ್ರಕರ್ತ ಒಪ್ಪಿಗೆ ಸೂಚಿಸಬೇಕಾಯಿತು.

ಪಂದ್ಯದ ಸಂಭಾವನೆ ಸಶಸ್ತ್ರ ಪಡೆಗಳಿಗೆ ಸಮರ್ಪಣೆ

ಈ ಎಲ್ಲಾ ವಿವಾದಗಳ ನಡುವೆಯೂ, ಸೂರ್ಯಕುಮಾರ್ ಯಾದವ್ ತಮ್ಮ ದೇಶಪ್ರೇಮವನ್ನು ಮೆರೆದಿದ್ದಾರೆ. ಏಷ್ಯಾ ಕಪ್ ಟೂರ್ನಿಯಿಂದ ಬಂದ ತಮ್ಮ ಸಂಪೂರ್ಣ ಪಂದ್ಯದ ಸಂಭಾವನೆಯನ್ನು (ಅಂದಾಜು 28 ಲಕ್ಷ ರೂ.) ಭಾರತೀಯ ಸಶಸ್ತ್ರ ಪಡೆಗಳಿಗೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ನೀಡುವುದಾಗಿ 'X' (ಟ್ವಿಟರ್) ನಲ್ಲಿ ಘೋಷಿಸಿದ್ದಾರೆ.

Tags:    

Similar News