ಗಾಝಾ ಆಸ್ಪತ್ರೆ ಮೇಲೆ ಇಸ್ರೇಲ್‌ನ ಅವಳಿ ದಾಳಿ: 26 ನಾಗರಿಕರ ಸಾವು

ಈ ದಾಳಿಯನ್ನು 'ದುರಂತ ಪ್ರಮಾದ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಣ್ಣಿಸಿದ್ದು, ಸೇನೆಯು ತನ್ನ ಪ್ರಾಥಮಿಕ ತನಿಖೆಯ ಭಾಗವಾಗಿ ಈ ಹೇಳಿಕೆ ಬಿಡುಗಡೆ ಮಾಡಿದೆ;

Update: 2025-08-27 03:28 GMT

ಐವರು ಪತ್ರಕರ್ತರು ಸೇರಿದಂತೆ 20 ಮಂದಿಯನ್ನು ಬಲಿತೆಗೆದುಕೊಂಡ ಗಾಝಾ ಆಸ್ಪತ್ರೆಯ ಮೇಲಿನ ಮಾರಣಾಂತಿಕ ದಾಳಿಯು, ಹಮಾಸ್‌ನ ಕಣ್ಗಾವಲು ಕ್ಯಾಮೆರಾ ಮತ್ತು ಉಗ್ರರನ್ನು ಗುರಿಯಾಗಿಸಿಕೊಂಡು ನಡೆಸಿದ್ದಾಗಿದೆ ಎಂದು ಇಸ್ರೇಲ್ ಸೇನೆ ಮಂಗಳವಾರ (ಆಗಸ್ಟ್ 26) ಹೇಳಿಕೆ ನೀಡಿದೆ.

ಈ ದಾಳಿಯನ್ನು 'ದುರಂತ ಪ್ರಮಾದ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಣ್ಣಿಸಿದ್ದು, ಸೇನೆಯು ತನ್ನ ಪ್ರಾಥಮಿಕ ತನಿಖೆಯ ಭಾಗವಾಗಿ ಈ ಹೇಳಿಕೆ ಬಿಡುಗಡೆ ಮಾಡಿದೆ.

ಉಗ್ರರು ಆಸ್ಪತ್ರೆಯ ಕ್ಯಾಮೆರಾ ಬಳಸಿ ಇಸ್ರೇಲಿ ಪಡೆಗಳ ಮೇಲೆ ನಿಗಾ ಇಟ್ಟಿದ್ದರು ಮತ್ತು ಹಮಾಸ್ ಸೇರಿದಂತೆ ಇತರ ಉಗ್ರಗಾಮಿ ಗುಂಪುಗಳು ಆಸ್ಪತ್ರೆಗಳಲ್ಲಿ ಬೀಡುಬಿಟ್ಟಿವೆ ಎಂಬ ನಂಬಿಕೆಯಿಂದ ದಕ್ಷಿಣ ಗಾಝಾದ ಅತಿದೊಡ್ಡ ಆಸ್ಪತ್ರೆಯ ಮೇಲೆ ಸತತ ಎರಡು ಬಾರಿ ದಾಳಿ ನಡೆಸಲು ಆದೇಶಿಸಲಾಯಿತು ಎಂದು ಸೇನೆ ತಿಳಿಸಿದೆ.

ಆಸ್ಪತ್ರೆ ಮೇಲಿನ ದಾಳಿಗೆ ಜಾಗತಿಕ ಆಕ್ರೋಶ

ಸೇನೆಯ ಮುಖ್ಯಸ್ಥರು ತನಿಖೆಯಲ್ಲಿ ಹಲವು "ಲೋಪಗಳನ್ನು" ಒಪ್ಪಿಕೊಂಡಿದ್ದು, ಕ್ಯಾಮೆರಾವನ್ನು ಹೊಡೆದುರುಳಿಸಲು ಯಾವ ರೀತಿಯ ಮದ್ದುಗುಂಡುಗಳನ್ನು ಬಳಸಲಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದಿದ್ದಾರೆ.

ಪ್ರಾಥಮಿಕ ತನಿಖೆಯ ಈ ವರದಿಯು ಜಾಗತಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ನಾಯಕರು ಮತ್ತು ಮಾನವ ಹಕ್ಕುಗಳ ಗುಂಪುಗಳು ಈ ದಾಳಿಯನ್ನು ಖಂಡಿಸಿವೆ. ಇಸ್ರೇಲ್‌ನಲ್ಲಿ ಪ್ರತಿಭಟನಾಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿ, ಹೆದ್ದಾರಿಗಳನ್ನು ತಡೆದು, ಗಾಝಾದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಕದನ ವಿರಾಮಕ್ಕೆ ಆಗ್ರಹಿಸಿದ್ದಾರೆ. ಆದರೆ, ಹಮಾಸ್ ಅನ್ನು ಸೋಲಿಸಲು ಆಕ್ರಮಣಕಾರಿ ಕಾರ್ಯಾಚರಣೆ ಅಗತ್ಯ ಎಂದು ಇಸ್ರೇಲಿ ನಾಯಕರು ವಾದಿಸಿದ್ದಾರೆ.

ನೆತನ್ಯಾಹು ವಿಸ್ತೃತ ಕಾರ್ಯಾಚರಣೆ

ಕದನ ವಿರಾಮದ ಮಾತುಕತೆಗಳ ನಡುವೆಯೂ, ಇಸ್ರೇಲ್ ಗಾಝಾ ನಗರದಲ್ಲಿ ವಿಸ್ತೃತ ಸೇನಾ ಕಾರ್ಯಾಚರಣೆ ಆರಂಭಿಸಲಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಈ ಕಾರ್ಯಾಚರಣೆಯೇ ಹಮಾಸ್ ಅನ್ನು ದುರ್ಬಲಗೊಳಿಸಲು ಮತ್ತು ಒತ್ತೆಯಾಳುಗಳನ್ನು ಮರಳಿ ಪಡೆಯಲು ಉತ್ತಮ ಮಾರ್ಗ ಎಂದು ಅವರು ಪ್ರತಿಪಾದಿಸಿದರೆ, ಒತ್ತೆಯಾಳುಗಳ ಕುಟುಂಬಗಳು ಮತ್ತು ಅವರ ಬೆಂಬಲಿಗರು ಇದನ್ನು ವಿರೋಧಿಸುತ್ತಿದ್ದಾರೆ.

ಆಸ್ಪತ್ರೆಯ ಮೇಲಿನ ದಾಳಿಯ ನಂತರ ಕದನ ವಿರಾಮಕ್ಕೆ ಒತ್ತಾಯಗಳು ಹೆಚ್ಚಾಗಿವೆ. ಪತ್ರಕರ್ತರು ಮತ್ತು ಆಸ್ಪತ್ರೆಗಳ ಮೇಲಿನ ಈ ಯುದ್ಧದ ಅತ್ಯಂತ ಭೀಕರ ದಾಳಿಗಳಲ್ಲಿ ಇದೂ ಒಂದಾಗಿದ್ದು, ಪತ್ರಿಕಾ ಸ್ವಾತಂತ್ರ್ಯದ ಪ್ರತಿಪಾದಕರು ಮತ್ತು ಪ್ಯಾಲೆಸ್ತೀನಿಯನ್ನರಲ್ಲಿ ಆಘಾತ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಮೊದಲ ಸ್ಫೋಟದ ಸ್ಥಳಕ್ಕೆ ಧಾವಿಸಿದವರನ್ನು ಗುರಿಯಾಗಿಸಿ ನಡೆಸಿದ ಎರಡನೇ ದಾಳಿಯಲ್ಲಿ ಹೆಚ್ಚಿನವರು ಸಾವನ್ನಪ್ಪಿದ್ದಾರೆ. ಈ ದಾಳಿಯು ಹಲವು ಟೆಲಿವಿಷನ್ ನೆಟ್‌ವರ್ಕ್‌ಗಳಲ್ಲಿ ಸೆರೆಯಾಗಿತ್ತು. 

Tags:    

Similar News