ಸಂಘರ್ಷದ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ

ಶನಿವಾರ (ಜುಲೈ 6, 2025) ಅಶುರಾ ಹಬ್ಬದ ಮುನ್ನಾದಿನದಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಖಮೇನಿ ಭಾಗವಹಿಸಿದರು.;

Update: 2025-07-06 07:43 GMT

ಇಸ್ರೇಲ್ ವಿರುದ್ಧದ ಇತ್ತೀಚಿನ ಸಂಘರ್ಷದ ನಂತರ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಯುದ್ಧದ ಸಂದರ್ಭದಲ್ಲಿ ಅವರು ಬಂಕರ್‌ಗಳಲ್ಲಿ ಅಡಗಿಕೊಂಡಿದ್ದರು ಎಂಬ ವದಂತಿಗಳು ಹರಡಿದ್ದವು.

ಇಸ್ರೇಲ್ ಮತ್ತು ಇರಾನ್ ನಡುವೆ ಸುಮಾರು 12 ದಿನಗಳ ಕಾಲ ತೀವ್ರ ಸಂಘರ್ಷ ನಡೆದಿತ್ತು. ಈ ಅವಧಿಯಲ್ಲಿ, ಅಮೆರಿಕವು ಇರಾನ್‌ನ ಮೂರು ಪರಮಾಣು ಘಟಕಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿದ್ದಾಗಿ ವರದಿಯಾಗಿತ್ತು. ಸಂಘರ್ಷದ ಸಮಯದಲ್ಲಿ ಇರಾನ್‌ನ ಪರಮೋಚ್ಚ ನಾಯಕರು ಅಜ್ಞಾತ ಸ್ಥಳದಲ್ಲಿದ್ದರು ಎಂದು ಹೇಳಲಾಗಿತ್ತು.

ಶನಿವಾರ (ಜುಲೈ 6, 2025) ಅಶುರಾ ಹಬ್ಬದ ಮುನ್ನಾದಿನದಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಖಮೇನಿ ಭಾಗವಹಿಸಿದರು. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಹುಸೇನ್ ಅವರ ಹುತಾತ್ಮ ಸ್ಮರಣಾರ್ಥವಾಗಿ ಈ ಸಮಾರಂಭವನ್ನು ಆಯೋಜಿಸಲಾಗಿತ್ತು.

ಇರಾನ್‌ನ ಸರ್ಕಾರಿ ಮಾಧ್ಯಮಗಳಲ್ಲಿ ಈ ಸಂಬಂಧ ವಿಡಿಯೋಗಳು ಪ್ರಸಾರವಾಗಿದ್ದು, ವ್ಯಾಪಕವಾಗಿ ಹರಿದಾಡಿವೆ. ಇರಾನ್‌ನ ರಾಜಧಾನಿ ಟೆಹರಾನ್‌ನಲ್ಲಿರುವ ತಮ್ಮ ಕಚೇರಿ ಮತ್ತು ನಿವಾಸದ ಸಮೀಪದಲ್ಲಿರುವ ಮಸೀದಿಗೆ ಆಗಮಿಸಿದ ಖಮೇನಿ ಅವರು ನೆರೆದಿದ್ದ ಜನಸಮೂಹದತ್ತ ಕೈಬೀಸಿದರು. ಈ ವೇಳೆ ನೆರೆದಿದ್ದ ಜನರು ಜಯಘೋಷಗಳನ್ನು ಕೂಗಿದರು.

ಭಾರಿ ಭದ್ರತೆಯ ನಡುವೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಖಮೇನಿ ಅವರ ಸಾರ್ವಜನಿಕ ಹೇಳಿಕೆ ಕುರಿತು ತಕ್ಷಣಕ್ಕೆ ಯಾವುದೇ ವರದಿ ಬಂದಿಲ್ಲ. ಇರಾನ್ ಸಂಸತ್ತಿನ ಸ್ಪೀಕರ್ ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.

ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ, 86 ವರ್ಷದ ಖಮೇನಿ ಎಲ್ಲಿ ಅಡಗಿದ್ದಾರೆ ಎಂಬುದು ತಿಳಿದಿದೆ ಆದರೆ ತಕ್ಷಣಕ್ಕೆ ಹತ್ಯೆ ಮಾಡುವ ಉದ್ದೇಶವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಮತ್ತೊಂದೆಡೆ, ಇರಾನ್ ತಂಟೆಗೆ ಬಂದರೆ ತಕ್ಕ ತಿರುಗೇಟು ನೀಡುವುದಾಗಿ ಖಮೇನಿ ಎಚ್ಚರಿಸಿದ್ದರು. ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಇರಾನ್‌ನ 900ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು ಮತ್ತು ಸಾವಿರಾರು ಜನರು ಗಾಯಗೊಂಡಿದ್ದರು. 

Tags:    

Similar News