ಚಿಕಾಗೋ | ಭಾರತೀಯ ವಿದ್ಯಾರ್ಥಿ ಮೇಲೆ ಭೀಕರ ದಾಳಿ

ಭಾರತೀಯ ವಿದ್ಯಾರ್ಥಿಯೊಬ್ಬನ ಮೇಲೆ ಚಿಕಾಗೋದಲ್ಲಿ ದರೋಡೆಕೋರರು ಭೀಕರವಾಗಿ ದಾಳಿ ನಡೆಸಿ ಆತನ ಫೋನ್‌ ದೋಚಿ ಪರಾರಿಯಾಗಿದ್ದಾರೆ.;

Update: 2024-02-07 06:55 GMT
ದಾಳಿಗೂ ಮುನ್ನ ದರೋಡೆಕೋರರು ವಿದ್ಯಾರ್ಥಿಯನ್ನು ಹಿಂಬಾಲಿಸ

ಹೈದರಾಬಾದ್ ಮೂಲದ ಭಾರತೀಯ ವಿದ್ಯಾರ್ಥಿಯೊಬ್ಬನ ಮೇಲೆ ಚಿಕಾಗೋದಲ್ಲಿ ಭೀಕರವಾಗಿ ದಾಳಿ ನಡೆಸಿ ದರೋಡೆ ಮಾಡಲಾಗಿದೆ.

ದಾಳಿಯಿಂದ ತೀವ್ರ ಗಾಯಗೊಂಡಿರುವ ಸೈಯದ್ ಮಜಾಹಿರ್ ಅಲಿ, ತಮ್ಮ ಮೇಲಿನ ದಾಳಿಯ ಬಗ್ಗೆ ಅಧಿಕಾರಿಗಳಿಗೆ ವಿವರಗಳನ್ನು ಹಂಚಿಕೊಂಡು, ಸಹಾಯಕ್ಕಾಗಿ ಒತ್ತಾಯಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ತನ್ನ ಮನೆಯ ಬಳಿ ನಾಲ್ವರು ವ್ಯಕ್ತಿಗಳು ತನ್ನನ್ನು ಹೊಡೆದು ಫೋನ್ ಕದ್ದಿದ್ದಾರೆ ಎಂದು ಅವರು ಆರೋಪಿಸಿದ್ದಾನೆ.

“ನಾನು ಆಹಾರವನ್ನು ಒಯ್ಯುತ್ತಿದ್ದಾಗ ನಾಲ್ಕು ಜನರು ನನ್ನನ್ನು ತಡೆದು, ಹಲ್ಲೆ ನಡೆಸಿ ನನ್ನ ಫೋನ್‌ನೊಂದಿಗೆ ಪರಾರಿಯಾಗಿದ್ದಾರೆ. ದಯವಿಟ್ಟು ನನಗೆ ಸಹಾಯ ಮಾಡಿ” ಎಂದು ಸಂತ್ರಸ್ತ ಯುವಕ ಹೇಳುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಮಾಧ್ಯಮ ವರದಿಗಳ ಪ್ರಕಾರ, ಲಂಗರ್ ಹೌಜ್ ನಿವಾಸಿಯಾಗಿರುವ ಅಲಿ, ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾರೆ.

ದಾಳಿಕೋರರು ಕ್ಯಾಂಪ್‌ಬೆಲ್ ಅವೆನ್ಯೂನಲ್ಲಿರುವ ಅಲಿ ಮನೆಯ ಬಳಿ ಆತನನ್ನು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ಘಟನೆಯ ಕುರಿತು ಅಲಿ ಪತ್ನಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಸಂಪರ್ಕಿಸಿದ್ದು, ಚಿಕಾಗೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲಿ ಮತ್ತು ಆತನ ಪತ್ನಿಯೊಂದಿಗೆ ಸಂಪರ್ಕದಲ್ಲಿದೆ, ಅವರಿಗೆ ಬೇಕಾದ ಎಲ್ಲಾ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದೆ.

“ಭಾರತದ ಸೈಯದ್ ಮಜಾಹಿರ್ ಅಲಿ ಮತ್ತು ಅವರ ಪತ್ನಿ ಸೈಯದಾ ರುಕ್ವಿಯಾ ಫಾತಿಮಾ ರಜ್ವಿ ಅವರೊಂದಿಗೆ ರಾಯಭಾರ ಕಚೇರಿಯು ಸಂಪರ್ಕದಲ್ಲಿದೆ. ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವ ಭರವಸೆ ನೀಡಿದೆ. ದೂತಾವಾಸವು ಪ್ರಕರಣದ ತನಿಖೆ ನಡೆಸುತ್ತಿರುವ ಸ್ಥಳೀಯ ಅಧಿಕಾರಿಗಳನ್ನು ಕೂಡಾ ಸಂಪರ್ಕಿಸಿದೆ" ಎಂದು ದೂತಾವಾಸವು ಎಕ್ಸ್‌ನಲ್ಲಿನ (ಹಳೆಯ ಟ್ವಿಟರ್) ಪೋಸ್ಟ್‌ನಲ್ಲಿ ತಿಳಿಸಿದೆ.

ಶ್ರೇಯಸ್ ರೆಡ್ಡಿ ಬೆನ್ನಿಗೇರ್ ಎಂಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆಯಾದ ಒಂದು ವಾರದ ನಂತರ ಈ ಘಟನೆ ನಡೆದಿದೆ. ಜನವರಿ 16 ರಂದು, ಜಾರ್ಜಿಯಾದಲ್ಲಿ ವ್ಯಕ್ತಿಯೊಬ್ಬ ವಿವೇಕ್ ಸೈನಿ ಎಂಬ ವಿದ್ಯಾರ್ಥಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದನು.

Tags:    

Similar News