Grammy Award: ಇಂದ್ರಾ ನೂಯಿ ಸೋದರಿ ಚಂದ್ರಿಕಾ ಟಂಡನ್‌ಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ
Grammy Award : ಮೂರು ನದಿಗಳ ಸಂಗಮದ ಹೆಸರಿನ ಆಲ್ಬಮ್‌ನಲ್ಲಿ ಅವರೊಂದಿಗೆ ದಕ್ಷಿಣ ಆಫ್ರಿಕಾದ ಕೊಳಲುವಾದಕ ವೌಟರ್ ಕೆಲ್ಲರ್‌ಮನ್ ಮತ್ತು ಜಪಾನಿನ ಚೆಲೋವಾದಕ ಎರು ಮಾಟ್ಸುಮೊಟೊ ಅವರು ಜತೆಯಾಗಿದ್ದಾರೆ.;
ಭಾರತೀಯ ಮೂಲದ ಅಮೆರಿಕದ ಉದ್ಯಮಿ ಹಾಗೂ ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಭಾನುವಾರ ತಮ್ಮ ಮಂತ್ರ ಪಠಣದ ಆಲ್ಬಮ್ ʼತ್ರಿವೇಣಿʼಗಾಗಿ ಪ್ರತಿಷ್ಠಿತ ಗ್ರ್ಯಾಮಿ ಪುರಸ್ಕಾರ (Grammy Award) ಜಯಿಸಿದ್ದಾರೆ. ಮಂತ್ರಪಠಣಗಳನ್ನು ವಿಶ್ವ ಸಂಗೀತದೊಂದಿಗೆ ಬೆರೆಸುವ ಆಲ್ಬಮ್ ಇದಾಗಿದೆ. 71 ವರ್ಷದ ಟಂಡನ್, ಬೆಸ್ಟ್ ನ್ಯೂ ಏಜ್, ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಮ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಏಳು ಟ್ರ್ಯಾಕ್‌ಗಳ ಈ ಆಲ್ಬಮ್ ಟಂಡನ್ ಹೇಳುವ ಪ್ರಕಾರ "ಇನ್ನರ್ ಹೀಲಿಂಗ್" ಎಂದು ಕರೆದ ಧ್ಯಾನದ ಮೂಲವಾಗಿದೆ.
ಮೂರು ನದಿಗಳ ಸಂಗಮದ ಹೆಸರಿನ ಆಲ್ಬಮ್‌ನಲ್ಲಿ ಅವರೊಂದಿಗೆ, ದಕ್ಷಿಣ ಆಫ್ರಿಕಾದ ಕೊಳಲುವಾದಕ ವೌಟರ್ ಕೆಲ್ಲರ್‌ಮನ್ ಮತ್ತು ಜಪಾನಿನ ಚೆಲೋವಾದಕ ಎರು ಮಾಟ್ಸುಮೊಟೊ ಅವರು ಜತೆಯಾಗಿದ್ದಾರೆ.
"ಸಂಗೀತ ಎಂದರೆ ಪ್ರೀತಿ, ಸಂಗೀತವು ನಮ್ಮೊಳಗಿನ ಬೆಳಕು ಮತ್ತು ಕತ್ತಲೆಯಲ್ಲೂ ಸಂಗೀತ ಸಂತೋಷ ಮತ್ತು ನಗು ಹರಡುತ್ತದೆ" ಎಂದು ಲಾಸ್ ಏಂಜಲೀಸ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ ಚಂದ್ರಿಕಾ ಟಂಡನ್ ಹೇಳಿದ್ದಾರೆ. .
ಚೆನ್ನೈ ಮೂಲದವರು
ಚೆನ್ನೈನಲ್ಲಿ ಸಾಂಪ್ರದಾಯಿಕ ಮಧ್ಯಮ ವರ್ಗದ ಮನೆಯಲ್ಲಿ ಬೆಳೆದ ಚಂದ್ರಿಕಾ ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಹಳೆಯ ವಿದ್ಯಾರ್ಥಿನಿ. ಚಂದ್ರಿಕಾ ಅವರ ಸಹೋದರಿ ಇಂದ್ರಾ ನೂಯಿ ಪೆಪ್ಸಿಕೋ ಕಂಪನಿಯಲ್ಲಿ 12 ವರ್ಷಗಳ ಕಾಲ ಸಿಇಒ ಆಗಿದ್ದರು.
ಚಂದ್ರಿಕಾ ಟಂಡನ್ ಮೆಕಿನ್ಸೆಯಲ್ಲಿ (ಗ್ಲೋಬಲ್ ಸ್ಟ್ರಾಟಜಿ ಕಂಪನಿ) ಮೊದಲ ಭಾರತೀಯ-ಅಮೆರಿಕನ್ ಪಾಲುದಾರರಾಗಿದ್ದರು. ನ್ಯೂಯಾರ್ಕ್ ಮೂಲದ ಟಂಡನ್ ಕ್ಯಾಪಿಟಲ್ ಅಸೋಸಿಯೇಟ್ಸ್ ಸಂಸ್ಥೆಯನ್ನು ಕಟ್ಟಿದ್ದಾರೆ. ಇದು ಸಂಸ್ಥೆಗಳ ಪುನರ್ರಚನೆಯನ್ನು ನೋಡಿಕೊಳ್ಳುವ ಕಂಪನಿ.
ಜಾಗತಿಕ ಉದ್ಯಮಿ
ಐಐಎಂ ಅಹಮದಾಬಾದ್‌ನಿಂದ ಪದವಿ ಪಡೆದಿರುವ ಟಂಡನ್, ಉದ್ಯಮಿ ಮತ್ತು ಸಮಾಜ ಸೇವಕರೂ ಹೌದು. ಅವರು ತಮ್ಮ ಪತಿ ರಂಜನ್ ಅವರೊಂದಿಗೆ 2015ರಲ್ಲಿ ನ್ಯೂಯಾರ್ಕ್ ಸ್ಕೂಲ್ ಆಫ್ ಎಂಜಿನಿಯರಿಂಗ್‌ಗೆ 10 ಕೋಟಿ ಡಾಲರ್ ದೇಣಿಗೆ ನೀಡಿದ್ದರು. ಈ ಸಂಸ್ಥೆ ಈಗ ತನ್ನ ಹೆಸರಿನೊಂದಿಗೆ ಟಂಡನ್ ಅನ್ನು ಸೇರಿಸಿಕೊಂಡಿದೆ.
ಶಾಸ್ತ್ರೀಯ ಗಾಯಕಿ ಶುಭ್ರಾ ಗುಹಾ ಮತ್ತು ಗಾಯಕ ಗಿರೀಶ್ ವಜಲ್ವಾರ್ ಅವರಿಂದ ಚಂದ್ರಿಕಾ ಟಂಡನ್ ಸಂಗೀತ ಕಲಿತಿದ್ದರು. 2010 ರಲ್ಲಿ ತಮ್ಮ ʼಓಂ ನಮೋ ನಾರಾಯಣ: ಸೋಲ್ ಕಾಲ್ʼ ಆಲ್ಬಮ್‌ಗಾಗಿ ಮೊದಲ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.