ಸಿಂಧೂ ಒಪ್ಪಂದ ಅಮಾನತಿನ ನಡುವೆಯೂ ಮಾನವೀಯತೆ: ಪ್ರವಾಹದ ಬಗ್ಗೆ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ
ಪಾಕಿಸ್ತಾನಿ ಮಾಧ್ಯಮ ಸಂಸ್ಥೆ 'ದಿ ನ್ಯೂಸ್' ವರದಿಯ ಪ್ರಕಾರ, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೂಲಕ ಭಾರತವು ಈ ಪ್ರವಾಹ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ರವಾನಿಸಿದೆ.;
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು 1960ರ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿದ್ದರೂ, ತಾವಿ ನದಿಯಲ್ಲಿ ಸಂಭವನೀಯ ಪ್ರವಾಹದ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಏಪ್ರಿಲ್‌ನಲ್ಲಿ ಸಂಘರ್ಷ ಆರಂಭವಾದ ನಂತರ ಉಭಯ ರಾಷ್ಟ್ರಗಳ ನಡುವಿನ ಈ ಮೊದಲ ಪ್ರಮುಖ ಸಂಪರ್ಕ ಇದಾಗಿದೆ.
ಪಾಕಿಸ್ತಾನಿ ಮಾಧ್ಯಮ ಸಂಸ್ಥೆ 'ದಿ ನ್ಯೂಸ್' ವರದಿಯ ಪ್ರಕಾರ, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೂಲಕ ಭಾರತವು ಈ ಪ್ರವಾಹ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ರವಾನಿಸಿದೆ. ಈ ಎಚ್ಚರಿಕೆಯ ಆಧಾರದ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವರದಿ ಹೇಳಿದೆ.
ಮಾನವೀಯ ನೆಲೆಗಟ್ಟಿನ ಕಾರ್ಯ
ಸಾಮಾನ್ಯವಾಗಿ, ನದಿ ನೀರು ಒಪ್ಪಂದದ ಅಡಿಯಲ್ಲಿ ಜಲ ಆಯುಕ್ತರ ಮೂಲಕ ಇಂತಹ ಮಾಹಿತಿ ವಿನಿಮಯ ನಡೆಯುತ್ತದೆ. ಆದರೆ, ಒಪ್ಪಂದ ಅಮಾನತಿನಲ್ಲಿರುವ ಕಾರಣ ಈ ಮಾಹಿತಿ ಹಂಚಿಕೆಯು ಮಾನವೀಯ ನೆಲೆಯ ಕಾರ್ಯವೆಂದು ಪರಿಗಣಿಸಲಾಗಿದೆ.
ಪಹಲ್ಗಾಮ್ ದಾಳಿಯ ನಂತರ, ಏಪ್ರಿಲ್ 22ರಂದು ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿತ್ತು. ಅಂದಿನಿಂದ ಎರಡೂ ದೇಶಗಳ ನಡುವೆ ಈ ಒಪ್ಪಂದದ ಬಗ್ಗೆ ವಿವಾದ ತಲೆದೋರಿದೆ. ಪಾಕಿಸ್ತಾನವು ಕಿಶನ್‌ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆಗಳ ವಿನ್ಯಾಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ನಂತರ ಪಾಕಿಸ್ತಾನದ ಒತ್ತಾಯದ ಮೇರೆಗೆ ರಚನೆಯಾದ ಮಧ್ಯಸ್ಥಿಕೆ ನ್ಯಾಯಾಲಯವು ಭಾರತವು ಪಶ್ಚಿಮ ನದಿಗಳ ನೀರನ್ನು ಪಾಕಿಸ್ತಾನಕ್ಕೆ "ಹರಿಯಲು ಬಿಡಬೇಕು" ಎಂದು ತೀರ್ಪು ನೀಡಿತ್ತು.
ಭಾರತದಿಂದ ಮಾನ್ಯತೆ ಇಲ್ಲ
ಭಾರತವು ಈ ಮಧ್ಯಸ್ಥಿಕೆ ನ್ಯಾಯಾಲಯವನ್ನು ಮಾನ್ಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪು "ಕಾನೂನುಬಾಹಿರ ಮತ್ತು ಅಸಿಂಧು" ಎಂದು ತಳ್ಳಿಹಾಕಿದೆ.
ಪಾಕಿಸ್ತಾನವು ಈಗಾಗಲೇ ತೀವ್ರ ಮಾನ್ಸೂನ್ ಮಳೆಯಿಂದ ತತ್ತರಿಸಿದ್ದು, ಆಗಸ್ಟ್ 20ರವರೆಗೆ 788ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಬಲಿಯಾಗಿದ್ದಾರೆ. ಈ ಸಂದರ್ಭದಲ್ಲಿ ಭಾರತ ನೀಡಿರುವ ಪ್ರವಾಹ ಎಚ್ಚರಿಕೆ ಹೆಚ್ಚು ಮಹತ್ವ ಪಡೆದಿದೆ. ಆದರೆ, ಈ ಮಾಹಿತಿ ವಿನಿಮಯದ ಬಗ್ಗೆ ಎರಡೂ ದೇಶಗಳಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.