ಬಾಂಗ್ಲಾದಲ್ಲಿ 90 ದಿನದಲ್ಲಿ ಚುನಾವಣೆ ಖಚಿತಪಡಿಸಿ: ಸಜೀಬ್ ವಾಝೆದ್ ಜಾಯ್
ಉದ್ಯೋಗ ಮೀಸಲು ವಿರುದ್ಧ ರಾಷ್ಟ್ರವ್ಯಾಪಿ ವಿದ್ಯಾರ್ಥಿ ಪ್ರತಿಭಟನೆಯನ್ನು ನಿಭಾಯಿಸುವಲ್ಲಿ ತಮ್ಮ ತಾಯಿ ತಪ್ಪು ಮಾಡಿದ್ದಾರೆ. ಅದು ಸರ್ಕಾರಿ ವಿರೋಧಿ ಚಳವಳಿಗೆ ಕಾರಣವಾಯಿತು.ಚಳವಳಿ ವೇಳೆ ನಡೆದ ಬೀದಿ ಹಿಂಸಾಚಾರಕ್ಕೆ ವಿದೇಶಿ ಗುಪ್ತಚರ ಸಂಸ್ಥೆ ಕಾರಣ ಎಂದು ಸಜೀಬ್ ವಾಝೆದ್ ಜಾಯ್ ಹೇಳಿದರು.
ಬಾಂಗ್ಲಾದೇಶದಲ್ಲಿ 90 ದಿನಗಳಲ್ಲಿ ಹೊಸ ಚುನಾವಣೆ ನಡೆಯಬೇಕು ಮತ್ತು ಅವಾಮಿ ಲೀಗ್ ಪಕ್ಷಕ್ಕೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂಬುದನ್ನು ಭಾರತ ಖಚಿತಪಡಿಸಿಕೊಳ್ಳಬೇಕು ಎಂದು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಝೆದ್ ಜಾಯ್ ಹೇಳಿದ್ದಾರೆ.
ಉದ್ಯೋಗ ಮೀಸಲು ವಿರುದ್ಧ ರಾಷ್ಟ್ರವ್ಯಾಪಿ ವಿದ್ಯಾರ್ಥಿ ಪ್ರತಿಭಟನೆಯನ್ನು ನಿಭಾಯಿಸಲು ನ್ಯಾಯಾಂಗಕ್ಕೆ ಅವಕಾಶ ನೀಡುವ ಮೂಲಕ ತಮ್ಮ ತಾಯಿ ತಪ್ಪು ಮಾಡಿದ್ದಾರೆ. ಅದು ಸರ್ಕಾರಿ ವಿರೋಧಿ ಚಳವಳಿಗೆ ಕಾರಣವಾಯಿತು. ಚಳವಳಿ ವೇಳೆ ನಡೆದ ಬೀದಿ ಹಿಂಸಾಚಾರಕ್ಕೆ ವಿದೇಶಿ ಗುಪ್ತಚರ ಸಂಸ್ಥೆ ಕಾರಣ ಎಂದು ತಿಳಿಸಿದರು.
ಭಾರತಕ್ಕೆ ಮನವಿ: ʻ90 ದಿನಗಳ ಸಾಂವಿಧಾನಿಕ ಕಾಲಮಿತಿಯೊಳಗೆ ಚುನಾವಣೆ ನಡೆಯುವುದನ್ನು, ಅವಾಮಿ ಲೀಗ್ ಗೆ ಪ್ರಚಾರ ಮತ್ತು ಸ್ಪರ್ಧೆಗೆ ಅವಕಾಶ ನೀಡುವುದನ್ನು ಭಾರತ ಖಚಿತಪಡಿಸಬೇಕಿದೆ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ನಾವು ಈಗಲೂ ಅತ್ಯಂತ ಜನಪ್ರಿಯ ಪಕ್ಷವಾಗಿ ಉಳಿದಿದ್ದೇವೆ,ʼ ಎಂದು ಹೇಳಿದರು.
ಹಸೀನಾ ಅವರ ತಪ್ಪು: ʻಸರ್ಕಾರ ವಿದ್ಯಾರ್ಥಿ ಪ್ರತಿಭಟನೆಕಾರರೊಂದಿಗೆ ಮೀಸಲು ಸಂಬಂಧ ಮಾತನಾಡಬೇಕಿತ್ತು. ಸರ್ಕಾರ ಮೀಸಲು ಪ್ರಮಾಣ ಕಡಿಮೆ ಮಾಡಲು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಮೀಸಲು ಕುರಿತು ಸಾರ್ವಜನಿಕ ನಿಲುವು ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದ್ದೆ. ಆದರೆ, ಸರ್ಕಾರವು ನ್ಯಾಯಾಂಗ ವ್ಯವಸ್ಥೆ ಅದನ್ನು ನಿಭಾಯಿಸುತ್ತದೆ ಎಂದು ನಿರೀಕ್ಷಿಸಿ ತಪ್ಪು ಮಾಡಿತು,ʼ ಎಂದರು.
ಹಿಂಸಾಚಾರಕ್ಕೆ ಗುಪ್ತಚರ ಸಂಸ್ಥೆ ಪ್ರೇರಣೆ: ʻಜುಲೈ 15 ರಂದು ಅನೇಕ ಪ್ರದರ್ಶನಕಾರರು ಶಸ್ತ್ರಸಜ್ಜಿತರಾಗಿದ್ದರು ಎಂಬ ಕಾರಣದಿಂದಾಗಿ ವಿದೇಶಿ ಗುಪ್ತಚರ ಸಂಸ್ಥೆ ಭಾಗಿಯಾಗಿದೆ ಎಂದು ನಾನು ನಂಬುತ್ತೇನೆ. ಬಾಂಗ್ಲಾದೇಶದಲ್ಲಿ ಬಂದೂಕು ಪಡೆಯುವುದು ಬಹಳ ಕಷ್ಟಕರ. ವಿದೇಶಿ ಗುಪ್ತಚರ ಸಂಸ್ಥೆ ದೇಶಕ್ಕೆ ಬಂದೂಕು ಕಳ್ಳಸಾಗಣೆ ಮಾಡುವ ಮತ್ತು ಪ್ರದರ್ಶನಕಾರರಿಗೆ ಸರಬರಾಜು ಮಾಡಿದೆ,ʼ ಎಂದು ದೂರಿದರು.
ʻಹಸೀನಾ ಅವರು ದೇಶವನ್ನು ತೊರೆಯುವ ಉದ್ದೇಶ ಹೊಂದಿರಲಿಲ್ಲ. ಅವರನ್ನು ತಕ್ಷಣವೇ ಹೊರಡುವಂತೆ ವಿಶೇಷ ಭದ್ರತಾ ಪಡೆ ಒತ್ತಾಯಿಸಿದಾಗ, ರಾಜೀನಾಮೆ ನೀಡಲು ಮತ್ತು ಅದನ್ನು ಸಾರ್ವಜನಿಕವಾಗಿ ಘೋಷಿಸಲು ತಯಾರಿ ನಡೆಸುತ್ತಿದ್ದರು,ʼ ಎಂದು ಹೇಳಿದರು.
ಭಾರತಕ್ಕೆ ಧನ್ಯವಾದ: ಹಸೀನಾ ಅವರಿಗೆ ಆಶ್ರಯ ನೀಡಿದ ಭಾರತಕ್ಕೆ ಜಾಯ್ ಮತ್ತೊಮ್ಮೆ ಧನ್ಯವಾದ ಅರ್ಪಿಸಿದರು. ಅವರು ಬೇರೆ ಯಾವುದೇ ದೇಶದಲ್ಲಿ ಆಶ್ರಯ ಕೇಳಿರಲಿಲ್ಲ. ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಹೇಗೆ ಹೊಮ್ಮುತ್ತದೆ ಎಂದು ಅವರು ಕಾಯುತ್ತಿದ್ದಾರೆ. ಸದ್ಯಕ್ಕೆ ಅವರು ಭಾರತದಲ್ಲಿ ಉಳಿಯುವ ಸಾಧ್ಯತೆಯಿದೆ,ʼ ಎಂದು ಹೇಳಿದರು.
ʻಹಸೀನಾ ಅವರನ್ನು ಭೇಟಿಯಾಗಲು ನೀವು ಭಾರತಕ್ಕೆ ಭೇಟಿ ನೀಡುತ್ತೀರಾ?,ʼ ಎಂಬ ಪ್ರಶ್ನೆಗೆ ʻಸಮಯ ನಿಗದಿಯಾಗಿಲ್ಲ,ʼ ಎಂದು ಹೇಳಿದರು.