ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು: 3 ಪ್ರದೇಶಗಳಲ್ಲಿ 'ದೈನಂದಿನ ಯುದ್ಧ ವಿರಾಮ' ಘೋಷಿಸಿದ ಇಸ್ರೇಲ್
ವಿರಾಮವು ಸ್ಥಳೀಯ ಕಾಲಮಾನದ ಪ್ರಕಾರ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಜನದಟ್ಟಣೆ ಹೆಚ್ಚಿರುವ ಅಲ್-ಮವಾಸಿ, ದೇರ್ ಅಲ್-ಬಲಾಹ್ ಮತ್ತು ಗಾಜಾ ನಗರದಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ.;
ಗಾಜಾ ಪಟ್ಟಿಯಲ್ಲಿ ಉಲ್ಬಣಗೊಳ್ಳುತ್ತಿರುವ ಮಾನವೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಪರಿಹಾರ ಕಾರ್ಯಗಳಿಗೆ ಅನುವು ಮಾಡಿಕೊಡುವ ಸಲುವಾಗಿ ಇಸ್ರೇಲ್ ಸೇನೆಯು ಗಾಜಾದ ಮೂರು ಪ್ರಮುಖ ಪ್ರದೇಶಗಳಲ್ಲಿ ದೈನಂದಿನ "ಯುದ್ಧತಂತ್ರದ ವಿರಾಮ" (Tactical Pause) ಜಾರಿಗೊಳಿಸುವುದಾಗಿ ಭಾನುವಾರ ಘೋಷಿಸಿದೆ.
ಇಸ್ರೇಲ್ ರಕ್ಷಣಾ ಪಡೆಗಳ (IDF) ಪ್ರಕಟಣೆಯ ಪ್ರಕಾರ, ಈ ವಿರಾಮವು ಸ್ಥಳೀಯ ಕಾಲಮಾನದ ಪ್ರಕಾರ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಜನದಟ್ಟಣೆ ಹೆಚ್ಚಿರುವ ಅಲ್-ಮವಾಸಿ, ದೇರ್ ಅಲ್-ಬಲಾಹ್ ಮತ್ತು ಗಾಜಾ ನಗರದಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದ್ದು, ಮುಂದಿನ ಸೂಚನೆ ಬರುವವರೆಗೂ ಇದು ಮುಂದುವರಿಯಲಿದೆ.
ಆದಾಗ್ಯೂ, ಗಾಜಾದ ಇತರ ಭಾಗಗಳಲ್ಲಿ ಸೇನಾ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಸೇನೆ ಸ್ಪಷ್ಟಪಡಿಸಿದೆ.
ಪರಿಹಾರ ಕಾರ್ಯಗಳಿಗೆ ವಿಶೇಷ ಮಾರ್ಗ
ಇದರ ಜೊತೆಗೆ, ಮಾನವೀಯ ನೆರವು ಮತ್ತು ನಾಗರಿಕರ ಸಂಚಾರವನ್ನು ಸುಲಭಗೊಳಿಸಲು ಶಾಶ್ವತವಾಗಿ "ಸುರಕ್ಷಿತ ಮಾರ್ಗಗಳನ್ನು" ಗೊತ್ತುಪಡಿಸಲಾಗಿದೆ. ಈ ಮಾರ್ಗಗಳು ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 11 ಗಂಟೆಯವರೆಗೆ ತೆರೆದಿರುತ್ತವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಈ ನಿರ್ಧಾರವನ್ನು ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ತೆಗೆದುಕೊಳ್ಳಲಾಗಿದೆ. "ಗಾಜಾ ಪಟ್ಟಿಯಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಡೆಯುತ್ತಿರುವ ಆಕ್ರಮಣಕಾರಿ ಕಾರ್ಯಾಚರಣೆಗಳ ಜೊತೆಗೆ, ಇಸ್ರೇಲಿ ನಾಗರಿಕರನ್ನು ರಕ್ಷಿಸಲು ಐಡಿಎಫ್ ಮಾನವೀಯ ಪ್ರಯತ್ನಗಳನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ," ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಮಧ್ಯೆ, ಇಸ್ರೇಲ್ ಶನಿವಾರದಿಂದ ಗಾಜಾದಲ್ಲಿ ವೈಮಾನಿಕವಾಗಿ (Airdrop) ಮಾನವೀಯ ನೆರವು ವಿತರಿಸಲು ಪ್ರಾರಂಭಿಸಿದೆ. ಬ್ರಿಟನ್ ಸೇರಿದಂತೆ ಇತರ ದೇಶಗಳು ಕೂಡ ವೈಮಾನಿಕ ನೆರವು ಕಳುಹಿಸಲು ಸಿದ್ಧತೆ ನಡೆಸುತ್ತಿವೆ. ಈಜಿಪ್ಟ್‌ನಿಂದಲೂ ನೆರವಿನ ಟ್ರಕ್‌ಗಳು ಗಾಜಾದತ್ತ ಹೊರಟಿವೆ ಎಂದು ವರದಿಯಾಗಿದೆ.