ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಪಾಕಿಸ್ತಾನಕ್ಕೆ ಚೀನಾದ 'ಅಚಲ' ಬೆಂಬಲ!
ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿಯ ಪ್ರಕಾರ, ವಾಂಗ್ ಯಿ ಅವರು ಇಶಾಕ್ ದಾರ್ ಅವರೊಂದಿಗಿನ ಸಂಭಾಷಣೆಯಲ್ಲಿ, ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಉಂಟಾದ ಭಾರತ-ಪಾಕಿಸ್ತಾನ ಉದ್ವಿಗ್ನತೆಯನ್ನು ಚೀನಾ ನಿಕಟವಾಗಿ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ.;
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿದ ಹೊರತಾಗಿಯೂ ಚೀನಾ, ತನ್ನ 'ಸಾರ್ವಕಾಲಿಕ ಮಿತ್ರ ರಾಷ್ಟ್ರ' ಪಾಕಿಸ್ತಾನಕ್ಕೆ 'ಅಚಲ' ಬೆಂಬಲ ವ್ಯಕ್ತಪಡಿಸಿದೆ.
ದಾಳಿಯಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲಿ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.
ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿಯ ಪ್ರಕಾರ, ವಾಂಗ್ ಯಿ ಅವರು ಇಶಾಕ್ ದಾರ್ ಅವರೊಂದಿಗಿನ ಸಂಭಾಷಣೆಯಲ್ಲಿ, ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಉಂಟಾದ ಭಾರತ-ಪಾಕಿಸ್ತಾನ ಉದ್ವಿಗ್ನತೆಯನ್ನು ಚೀನಾ ನಿಕಟವಾಗಿ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಇಡೀ ವಿಶ್ವದ ಸಾಮೂಹಿಕ ಜವಾಬ್ದಾರಿ ಎಂದು ಅವರು ಒತ್ತಿ ಹೇಳಿದ್ದಾರೆ.
"ಪಾಕಿಸ್ತಾನವು ಚೀನಾದ 'ಅಚಲ ಸ್ನೇಹಿ' ಮತ್ತು 'ಸಾರ್ವಕಾಲಿಕ ಮಿತ್ರ ದೇಶ. ಪಾಕಿಸ್ತಾನದ ಭದ್ರತಾ ಕಾಳಜಿಗಳನ್ನು ಚೀನಾ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ ಮತ್ತು ಅದರ ಸಾರ್ವಭೌಮತ್ವ ಹಾಗೂ ಭದ್ರತಾ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತದೆ," ಎಂದು ವಾಂಗ್ ಯಿ ಹೇಳಿದ್ದಾರೆ ಎಂದು ಕ್ಸಿನ್ಹುವಾ ವರದಿ ಉಲ್ಲೇಖಿಸಿದೆ.
ತನಿಖೆಗೆ ಒತ್ತಾಯ
ವಾಂಗ್ ಯಿ ಅವರು, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವು ಎರಡೂ ದೇಶಗಳ ಮೂಲಭೂತ ಹಿತಾಸಕ್ತಿಗಳಿಗೆ ಸೇವೆ ಸಲ್ಲಿಸುವುದಿಲ್ಲ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಒಳಿತಾಗುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ. ಈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ 'ತ್ವರಿತ ಮತ್ತು ನ್ಯಾಯಯುತ' ತನಿಖೆಯನ್ನು ಆರಂಭಿಸಬೇಕೆಂದು ಚೀನಾ ವಾದಿಸಿದೆ. "ಎರಡೂ ದೇಶಗಳು ಸಂಯಮವನ್ನು ತೋರಬೇಕು ಮತ್ತು ಉದ್ವಿಗ್ನತೆ ಕಡಿಮೆ ಮಾಡಲು ಒಟ್ಟಾಗಿ ಕೆಲಸ ಮಾಡಬೇಕು," ಎಂದು ವಾಂಗ್ ಯಿ ಸಲಹೆ ನೀಡಿದ್ದಾರೆ.
ಪಾಕ್ ಹೇಳಿಕೆಯೇನು?
ಇಶಾಕ್ ದಾರ್ ಅವರು, ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಸ್ಥಿರವಾಗಿ ಮತ್ತು ದೃಢವಾಗಿ ಹೋರಾಡುತ್ತಿದೆ ಎಂದು ಒತ್ತಿ ಹೇಳಿದ್ದಾರೆ. ಯಾವುದೇ ಕ್ರಿಯೆಗಳು ಉದ್ವಿಗ್ನತೆಯನ್ನು ಉಲ್ಬಣಗೊಳಿಸುವುದನ್ನು ಪಾಕಿಸ್ತಾನ ವಿರೋಧಿಸುತ್ತದೆ ಎಂದು ಅವರು ತಿಳಿಸಿದ್ದಾರೆ. "ಪಾಕಿಸ್ತಾನವು ಈ ಪರಿಸ್ಥಿತಿಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಬದ್ಧವಾಗಿದೆ. ಚೀನಾ ಮತ್ತು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸಂವಹನ ಮುಂದುವರಿಸುತ್ತೇವೆ," ಎಂದು ದಾರ್ ತಿಳಿಸಿದ್ದಾರೆ.
ಚೀನಾದ ಖಂಡನೆ
ಏಪ್ರಿಲ್ 23ರಂದು, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಅವರು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. "ನಾವು ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಚೀನಾ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ದೃಢವಾಗಿ ವಿರೋಧಿಸುತ್ತದೆ," ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದರು.