ಕೆನಡಾದ ಚುನಾವಣೆಯಲ್ಲಿ ಭಾರತ, ಚೀನಾದ ಹಸ್ತಕ್ಷೇಪ: ಕೆನಡಾ ಗುಪ್ತಚರ ಸಂಸ್ಥೆ ಆರೋಪ

"ಭಾರತ ಸರ್ಕಾರವು ಕೆನಡಾದ ಸಮುದಾಯಗಳಲ್ಲಿ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಮತ್ತು ಸಾಮರ್ಥ್ಯ ಎರಡನ್ನೂ ಹೊಂದಿದೆ ಎಂಬುದನ್ನು ನಾವು ಗಮನಿಸಿದ್ದೇವೆ," ಎಂದು ಲಾಯ್ಡ್ ವಿವರಣೆ ನೀಡಿದ್ದಾರೆ.;

Update: 2025-03-25 06:55 GMT

ಕೆನಡಾದಲ್ಲಿ ಏಪ್ರಿಲ್ 28, 2025ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಚೀನಾದಿಂದ ಹಸ್ತಕ್ಷೇಪವಾಗುವ ಸಾಧ್ಯತೆ ಇದೆ ಎಂದು ಕೆನಡಾ ಆತಂಕ ವ್ಯಕ್ತಪಡಿಸಿದೆ. ರಷ್ಯಾ ಮತ್ತು ಪಾಕಿಸ್ತಾನ ಕೂಡ ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಬಹುದು ಎಂದು ಕೆನಡಾದ ಗುಪ್ತಚರ ಸಂಸ್ಥೆ, (ಸಿಎಸ್‌ಐಎಸ್) ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ .

ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಈಗಾಗಲೇ ಹದಗೆಟ್ಟಿರುವ ನಡುವೆಯೇ ಇಂಥದ್ದೊಂದು ಆರೋಪ ಕೇಳಿ ಬಂದಿದೆ. ಕೆನಡಾ, ತನ್ನ ದೇಶದೊಳಗೆ ಖಲಿಸ್ತಾನಿ ಪ್ರತ್ಯೇಕವಾದಿಗಳ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬ ಭಾರತದ ಆರೋಪ ಮತ್ತು ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್‌ನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಆರೋಪಗಳು ಉಭಯ ದೇಶಗಳ ಸಂಬಂಧವನ್ನು ಹಾಳು ಮಾಡಿದ್ದವು

ಎಐ ಮೂಲಕ ಹಸ್ತಕ್ಷೇಪದ ಆತಂಕ

ಸಿಎಸ್‌ಐಎಸ್‌ನ ಉಪನಿರ್ದೇಶಕಿ ವನೆಸ್ಸಾ ಲಾಯ್ಡ್ ರಾಯಿಟರ್ಸ್‌ಗೆ ಮಾತನಾಡಿ, ಚೀನಾ ಕೆನಡಾದ ಚುನಾವಣೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಾಧನಗಳನ್ನು ಬಳಸಿ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

"ಭಾರತ ಸರ್ಕಾರವು ಕೆನಡಾದ ಸಮುದಾಯಗಳಲ್ಲಿ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಮತ್ತು ಸಾಮರ್ಥ್ಯ ಎರಡನ್ನೂ ಹೊಂದಿದೆ ಎಂಬುದನ್ನು ನಾವು ಗಮನಿಸಿದ್ದೇವೆ," ಎಂದು ಲಾಯ್ಡ್ ವಿವರಣೆ ನೀಡಿದ್ದಾರೆ.

"ವಿದೇಶಿ ಹಸ್ತಕ್ಷೇಪ ಚಟುವಟಿಕೆಗಳು ಮತ್ತು ಚುನಾವಣಾ ಫಲಿತಾಂಶಗಳ ನಡುವೆ ನೇರ ಸಂಬಂಧವನ್ನು ಸ್ಥಾಪಿಸುವುದು ಕಷ್ಟ. ಆದರೆ, ಇಂಥ ಕೃತ್ಯಗಳು ಕೆನಡಾದ ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಮತ್ತು ಸಂಸ್ಥೆಗಳ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸಬಹುದು," ಎಂದು ಅವರು ತಿಳಿಸಿದ್ದಾರೆ. ರಷ್ಯಾ ಮತ್ತು ಪಾಕಿಸ್ತಾನವೂ ಕೆನಡಾದ ವಿರುದ್ಧ ಪಿತೂರಿ ಚಟುವಟಿಕೆಗಳಲ್ಲಿ ತೊಡಗಬಹುದು ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರತಿಕ್ರಿಯೆ ನೀಡಿದ ಭಾರತ

ಈ ಹಿಂದೆಯೂ ಭಾರತ ಮತ್ತು ಚೀನಾ ಇಂತಹ ಹಸ್ತಕ್ಷೇಪದ ಆರೋಪಗಳನ್ನು ನಿರಾಕರಿಸಿವೆ. ಜನವರಿಯಲ್ಲಿ, ಕೆನಡಾದ ಆಯೋಗದ ವರದಿಯೊಂದು ಭಾರತದ ವಿದೇಶಾಂಗ ಸಚಿವಾಲಯವು ಕೆನಡಾದ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿತ್ತು. ಆದರೆ, ಭಾರತ ಈ ಆರೋಪಗಳನ್ನು "ಆಧಾರರಹಿತ" ಎಂದು ತಳ್ಳಿಹಾಕಿತ್ತು.

ವರದಿಯ ಪ್ರಕಾರ, 2019 ಮತ್ತು 2021ರ ಚುನಾವಣೆಗಳಲ್ಲಿ ಭಾರತ ಮತ್ತು ಚೀನಾದಿಂದ ಹಸ್ತಕ್ಷೇಪ ಪ್ರಯತ್ನಗಳು ನಡೆದಿದ್ದವು ಎಂದು ಹೇಳಲಾಗಿತ್ತು. ಆದರೆ, ಕೆನಡಾ ಈ ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸುವಲ್ಲಿ ವಿಳಂಬ ಮಾಡಿತ್ತು ಎಂದು ವರದಿ ತಿಳಿಸಿತ್ತು.

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ನಮ್ಮ ಆಂತರಿಕ ವ್ಯವಹಾರಗಳಲ್ಲಿ ಕೆನಡಾ ಹಸ್ತಕ್ಷೇಪ ಮಾಡುತ್ತಿದೆ. ಆ ದೇಶ ಅಕ್ರಮ ವಲಸೆ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಭಾರತದ ಮೇಲಿನ ಈ ಆರೋಪಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಅಕ್ರಮ ವಲಸೆಗೆ ಬೆಂಬಲ ನೀಡುವ ಈ ವ್ಯವಸ್ಥೆಯನ್ನು ಮುಂದುವರಿಸದಿರುವಂತೆ ಆಶಿಸುತ್ತೇವೆ ," ಎಂದು ಹೇಳಿದ್ದರು.

Tags:    

Similar News