ಉಕ್ರೇನ್‌ಗೆ ಶಾಂತಿ, ಮಾನವೀಯ ಬೆಂಬಲದ ಸಂದೇಶ: ಬೈಡೆನ್ ಶ್ಲಾಘನೆ

Update: 2024-08-27 08:22 GMT

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಉಕ್ರೇನ್‌ಗೆ ಅವರ ʻಶಾಂತಿಯ ಸಂದೇಶ ಮತ್ತು ಮಾನವೀಯ ಬೆಂಬಲʼಕ್ಕಾಗಿ ಶ್ಲಾಘಿಸಿದ್ದಾರೆ.

ಆಗಸ್ಟ್ 23 ರಂದು ಕೈವ್‌ಗೆ ಮೋದಿ ಅವರ ಭೇಟಿಯು ರಾಜತಾಂತ್ರಿಕ ಸಮತೋಲನ ಕ್ರಿಯೆ ಎಂಬಂತೆ ಕಂಡುಬಂದಿತು. ಏಕೆಂದರೆ, ಕಳೆದ ತಿಂಗಳು ರಷ್ಯಾಕ್ಕೆ ಅವರ ಪ್ರವಾಸವು ಬೈಡೆನ್ ಆಡಳಿತದಿಂದ ಟೀಕೆ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. 

ಭೇಟಿ ವೇಳೆ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ʻಯುಕ್ರೇನ್ ಮತ್ತು ರಷ್ಯಾ ಯುದ್ಧವನ್ನು ಕೊನೆಗೊಳಿಸಲು ಒಟ್ಟಿಗೆ ಕುಳಿತುಕೊಳ್ಳಬೇಕು; ಭಾರತ ಶಾಂತಿಯನ್ನು ಮರುಸ್ಥಾಪಿಸಲು ಸಕ್ರಿಯ ಪಾತ್ರ ವಹಿಸಲು ಸಿದ್ಧವಿದೆʼ ಎಂದು ಹೇಳಿದ್ದರು. 

ಬೈಡೆನ್‌ ತಮ್ಮ ಪೋಸ್ಟ್‌ನಲ್ಲಿ, ʻನಾನು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿ, ಪೋಲೆಂಡ್ ಮತ್ತು ಉಕ್ರೇನಿನ ಇತ್ತೀಚಿನ ಪ್ರವಾಸ ಕುರಿತು ಚರ್ಚಿಸಿದ್ದೇನೆ. ಶಾಂತಿಯ ಸಂದೇಶ ಮತ್ತು ಉಕ್ರೇನ್‌ಗೆ ಮಾನವೀಯ ಬೆಂಬಲಕ್ಕಾಗಿ ಅವರನ್ನು ಶ್ಲಾಘಿಸಿದೆ. ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ನಾವು ದೃಢಪಡಿಸಿದ್ದೇವೆ,ʼ ಎಂದು ಹೇಳಿದ್ದಾರೆ.

ಮೋದಿ ಅವರ ರಷ್ಯಾ, ಪೋಲೆಂಡ್ ಮತ್ತು ಉಕ್ರೇನ್ ಪ್ರವಾಸ ಹಾಗೂ ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳ ನಂತರ ಉಭಯ ನಾಯಕರ ನಡುವಿನ ಮೊದಲ ಕರೆ ಇದಾಗಿದೆ.

ಶ್ವೇತಭವನದ ಹೇಳಿಕೆ: ಮೋದಿ ಅವರ ಇತ್ತೀಚಿನ ಪೋಲೆಂಡ್ ಮತ್ತು ಉಕ್ರೇನ್ ಪ್ರವಾಸ ಹಾಗೂ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು ಎಂದು ಶ್ವೇತಭವನ ಹೇಳಿಕೆ ತಿಳಿಸಿದೆ. 

ʻಭಾರತೀಯ ಪ್ರಧಾನಿಯೊಬ್ಬರ ಪೋಲೆಂಡ್ ಮತ್ತು ಉಕ್ರೇನ್‌ ಐತಿಹಾಸಿಕ ಭೇಟಿ, ಉಕ್ರೇನ್‌ಗೆ ಶಾಂತಿಯ ಸಂದೇಶ ಮತ್ತು ಮಾನವೀಯ ಬೆಂಬಲಕ್ಕಾಗಿ ಅಧ್ಯಕ್ಷರು ಪ್ರಧಾನಮಂತ್ರಿ ಅವರನ್ನು ಶ್ಲಾಘಿಸಿದರು,ʼ ಎಂದು ಹೇಳಿದೆ. ಆದರೆ, ಶ್ವೇತಭವನದ ಹೇಳಿಕೆಯಲ್ಲಿ ಬಾಂಗ್ಲಾದೇಶದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಇದಕ್ಕೂ ಮೊದಲು ಎಕ್ಸ್‌ ನ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರು, ʻಬೈಡೆನ್ ಅವರೊಂದಿಗೆ ಉಕ್ರೇನ್‌ನಲ್ಲಿನ ಪರಿಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದೇನೆ. ಶಾಂತಿ ಮತ್ತು ಸ್ಥಿರತೆಯ ಶೀಘ್ರ ವಾಪಸಿಗೆ ಭಾರತದ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಿದ್ದೇನೆ,ʼ ಎಂದು ಹೇಳಿದರು.

ʻಬಾಂಗ್ಲಾದೇಶದ ಪರಿಸ್ಥಿತಿ ಬಗ್ಗೆಯೂ ಚರ್ಚಿಸಿದ್ದೇವೆ. ಸಹಜ ಸ್ಥಿತಿಯನ್ನು ಶೀಘ್ರವಾಗಿ ಮರುಸ್ಥಾಪಿಸುವ ಅಗತ್ಯವನ್ನು ಮತ್ತು ಅಲ್ಪಸಂಖ್ಯಾತರ, ವಿಶೇಷವಾಗಿ, ಹಿಂದುಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದೇನೆ,ʼ ಎಂದರು.

Tags:    

Similar News