ಪಿಎನ್ಬಿ ಹಗರಣದ ರೂವಾರಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ: ಭಾರತದ ಮನವಿ ಮೇರೆಗೆ ಕಾರ್ಯಾಚರಣೆ
ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಇಬ್ಬರೂ 2018 ರಲ್ಲಿ ಬಹಿರಂಗಗೊಂಡ PNB ಹಗರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಖ್ಯ ಬೆಳೆಸಿ ಮೋಸ ಮಾಡಿದ್ದರು.;
ಮೆಹುಲ್ ಚೋಕ್ಸಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣದಲ್ಲಿ ಭಾಗಿಯಾಗಿರುವ ಆರೋಪಿ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಭಾರತದ ಕೇಂದ್ರೀಯ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯ (ED) ದ ವಿನಂತಿಯ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. 13,500 ಕೋಟಿ ರೂಪಾಯಿಗಳ ಬ್ಯಾಂಕ್ ಹಗರಣದಲ್ಲಿ ಚೋಕ್ಸಿಯ ಮೇಲೆ ಆರೋಪವಿದ್ದು, ಈ ಬಂಧನವು ಭಾರತದ ರಕ್ಷಣಾ ತನಿಖಾ ಸಂಸ್ಥೆಗಳಿಗೆ ಒಂದು ಪ್ರಮುಖ ಯಶಸ್ಸಾಗಿದೆ.
ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಇಬ್ಬರೂ 2018 ರಲ್ಲಿ ಬಹಿರಂಗಗೊಂಡ PNB ಹಗರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಖ್ಯ ಬೆಳೆಸಿ ಮೋಸ ಮಾಡಿದ್ದರು. ನಕಲಿ ಲೆಟರ್ ಆಫ್ ಅಂಡರ್‌ಟೇಕಿಂಗ್ (LoUs) ಮೂಲಕ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿದ್ದರು ಈ ಹಗರಣವು ಭಾರತದ ಬ್ಯಾಂಕಿಂಗ್ ವಲಯದಲ್ಲಿ ಒಂದು ದೊಡ್ಡ ಕಳಂಕವಾಗಿದೆ 2018 ರಲ್ಲಿ ಚೋಕ್ಸಿ ಭಾರತದಿಂದ ಪರಾರಿಯಾಗಿ, ಆರಂಭದಲ್ಲಿ ಅಮೆರಿಕಕ್ಕೆ ತೆರಳಿದ್ದ. ನಂತರ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನೆಲೆಸಿದ್ದ. ಅವರು 2017ರಲ್ಲಿ ಆಂಟಿಗುವಾದ ಪೌರತ್ವ ಪಡೆದುಕೊಂಡಿದ್ದರು,
ಬೆಲ್ಜಿಯಂಗೆ ತೆರಳಿದ್ದು ಹೇಗೆ?
ಚೋಕ್ಸಿ ಇತ್ತೀಚಿನ ದಿನಗಳಲ್ಲಿ ಆಂಟಿಗುವಾ ತೊರೆದು ತಮ್ಮ ಪತ್ನಿ ಪ್ರೀತಿ ಚೋಕ್ಸಿಯೊಂದಿಗೆ ಬೆಲ್ಜಿಯಂನ ಆಂಟ್‌ವರ್ಪ್‌ನಲ್ಲಿ ವಾಸಿಸುತ್ತಿದ್ದರು. ಪ್ರೀತಿ ಚೋಕ್ಸಿ ಬೆಲ್ಜಿಯಂನ ಪ್ರಜೆಯಾಗಿದ್ದು, ಇವರಿಬ್ಬರೂ 'F ರೆಸಿಡೆನ್ಸಿ ಕಾರ್ಡ್' ಪಡೆದುಕೊಂಡಿದ್ದರು. ಚೋಕ್ಸಿ ತಾನು ಕ್ರಾನಿಕ್ ಲಿಂಫೊಸೈಟಿಕ್ ಲ್ಯುಕೇಮಿಯಾ ಮತ್ತು ಲಿಂಫೋಮಾದಿಂದ ಬಳಲುತ್ತಿರುವುದಾಗಿ ಆರೋಗ್ಯ ಕಾರಣಗಳಿಂದ ಬೆಲ್ಜಿಯಂಗೆ ತೆರಳಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಭಾರತೀಯ ತನಿಖಾ ಸಂಸ್ಥೆಗಳು ಚೋಕ್ಸಿಯ ಈ ಚಲನವಲನ ಗಮನಿಸಿ. 2024ರಲ್ಲಿ ಬೆಲ್ಜಿಯಂ ಸರ್ಕಾರಕ್ಕೆ ಮನವಿ ಮಾಡಿತ್ತು.
ಹೇಗೆ ಬಂಧನ?
ಏಪ್ರಿಲ್ 11, 2025 ರಂದು, ಬೆಲ್ಜಿಯಂ ಪೊಲೀಸರು ಚೋಕ್ಸಿಯನ್ನು ಆಸ್ಪತ್ರೆಯೊಂದರಲ್ಲಿ ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕಾರ್ಯಾಚರಣೆಗೆ ಭಾರತದ CBI ಮತ್ತು ED ಯಿಂದ ನೀಡಲಾದ ಮಾಹಿತಿಯ ಆಧಾರದ ಮೇಲೆ ಸ್ಥಳೀಯ ಅಧಿಕಾರಿಗಳು ಬಂಧಿಸಿದ್ದಾರೆ. ಚೋಕ್ಸಿಯ ವಿರುದ್ಧ ಮುಂಬೈನ ನ್ಯಾಯಾಲಯವು 2018ರ ಮೇ 23 ಮತ್ತು 2021 ರ ಜೂನ್ 15 ರಂದು ಎರಡು ಓಪನ್-ಎಂಡೆಡ್ ಬಂಧನ ವಾರಂಟ್‌ಗಳನ್ನು ಜಾರಿಗೊಳಿಸಿತ್ತು. ಪ್ರಸ್ತುತ, ಚೋಕ್ಸಿಯನ್ನು ಬೆಲ್ಜಿಯಂನ ಜೈಲಿನಲ್ಲಿ ಇರಿಸಲಾಗಿದೆ.
ಭಾರತದ ನಿರಂತರ ಪ್ರಯತ್ನ
ಭಾರತ ಸರ್ಕಾರವು ಚೋಕ್ಸಿಯನ್ನು ದೇಶಕ್ಕೆ ಕರೆತರಲು ಎಲ್ಲಾ ಕಾನೂನು ಮತ್ತು ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸಿಬಿಐ ಅಧಿಕಾರಿಗಳು, ಬೆಲ್ಜಿಯಂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಈ ಘಟನೆಯನ್ನು ಭಾರತದ ಎರಡನೇ ಪ್ರಮುಖ ಯಶಸ್ಸು ಎಂದು ಕರೆಯಲಾಗಿದೆ, ಇತ್ತೀಚೆಗೆ 2008 ರ ಮುಂಬೈ ದಾಳಿಯ ಆರೋಪಿಯಾದ ತಹವ್ವುರ್ ರಾಣಾವನ್ನು ಅಮೆರಿಕದಿಂದ ಗಡೀಪಾಡು ಮಾಡಿಸಿ ಭಾರತಕ್ಕೆ ಕರೆ ತಂದಿದ್ದರು.