ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷ ನಿಷೇಧ

ಆಧಿಸೂಚನೆಯ ನಂತರ ಮಾತನಾಡಿದ ಚುನಾವಣಾ ಆಯೋಗದ ಕಾರ್ಯದರ್ಶಿ ಅಖ್ತರ್ ಅಹ್ಮದ್, ಅವಾಮಿ ಲೀಗ್‌ನ ಚಟುವಟಿಕೆಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಪಕ್ಷದ ನೋಂದಣಿಯನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.;

Update: 2025-05-13 04:31 GMT

ಬಾಂಗ್ಲಾದೇಶ ಸರ್ಕಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನೇತೃತ್ವದ ಅವಾಮಿ ಲೀಗ್ ಪಕ್ಷವನ್ನು ಅಧಿಕೃತವಾಗಿ ನಿಷೇಧಿಸಿದೆ. ಪರಿಷ್ಕೃತ ಭಯೋತ್ಪಾದಕ ವಿರೋಧಿ ಕಾಯ್ದೆ 2025ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಬೆಳವಣಿಗೆಗೆ ಎರಡು ದಿನಗಳ ಮೊದಲು, ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಪಕ್ಷದ ಎಲ್ಲಾ ಚಟುವಟಿಕೆಗಳ ಮೇಲೆ ನಿಷೇಧ ಹೇರಿತ್ತು.

ಗೃಹ ಸಚಿವಾಲಯದ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಹಾಂಗೀರ್ ಆಲಮ್ ಅವರು ಈ ಕುರಿತು ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿರುವುದಾಗಿ ತಿಳಿಸಿದ್ದಾರೆ. ಗೃಹ ಸಚಿವಾಲಯದ ಅಧಿಕಾರಿಯೊಬ್ಬರ ಪ್ರಕಾರ, ಬಾಂಗ್ಲಾದೇಶದ ಅಂತರರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ (ICT-BD) ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ವಿಚಾರಣೆಯನ್ನು ಪೂರ್ಣಗೊಳಿಸುವವರೆಗೆ ಅವಾಮಿ ಲೀಗ್ ಮತ್ತು ಅದರ ಅಂಗಸಂಸ್ಥೆಗಳ ಮೇಲೆ ಈ ನಿಷೇಧ ಮುಂದುವರಿಯಲಿದೆ. ಪರಿಷ್ಕೃತ ಕಾನೂನಿನ ಸೆಕ್ಷನ್ 18 ರ ಅಡಿಯಲ್ಲಿ, ಭಯೋತ್ಪಾದನೆಯಲ್ಲಿ ಭಾಗಿಯಾಗಿರುವ ಯಾವುದೇ "ಸಂಸ್ಥೆ" ಅಥವಾ ಸಂಘಟನೆಯನ್ನು ಸರ್ಕಾರವು ಸೂಕ್ತ ಕಾರಣಗಳಿದ್ದಲ್ಲಿ ನಿಷೇಧಿಸಬಹುದು. 2009 ರ ಮೂಲ ಕಾಯ್ದೆಯಲ್ಲಿ ಈ ನಿಷೇಧದ ಅವಕಾಶವಿರಲಿಲ್ಲ.

ನೋಂದಣಿ ರದ್ದು

ಇದರ ಬೆನ್ನಲ್ಲೇ, ಚುನಾವಣಾ ಆಯೋಗವು ಅವಾಮಿ ಲೀಗ್‌ನ ನೋಂದಣಿಯನ್ನು ರದ್ದುಗೊಳಿಸಿದೆ. ಇದರಿಂದಾಗಿ ಪಕ್ಷವು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹವಾಗುತ್ತದೆ. ಗೃಹ ಸಚಿವಾಲಯದ ಅಧಿಸೂಚನೆಯ ನಂತರ ಮಾತನಾಡಿದ ಚುನಾವಣಾ ಆಯೋಗದ ಕಾರ್ಯದರ್ಶಿ ಅಖ್ತರ್ ಅಹ್ಮದ್, ಅವಾಮಿ ಲೀಗ್‌ನ ಚಟುವಟಿಕೆಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಪಕ್ಷದ ನೋಂದಣಿಯನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕಳೆದ ವರ್ಷ ನಡೆದ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ಸಂದರ್ಭದಲ್ಲಿ ನೂರಾರು ಜನರ ಸಾವಿಗೆ ಕಾರಣವಾದ "ಮಾನವೀಯತೆಯ ವಿರುದ್ಧದ ಅಪರಾಧ"ಗಳ ಆರೋಪದ ಮೇಲೆ ಅವಾಮಿ ಲೀಗ್ ನಾಯಕರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಈ ಪ್ರತಿಭಟನೆಗಳು 2024 ರ ಆಗಸ್ಟ್ 5 ರಂದು ಹಸೀನಾ ಅವರ 16 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದವು.

ಶನಿವಾರದಂದು, ಮಧ್ಯಂತರ ಸರ್ಕಾರದ ಸಲಹೆಗಾರರ ಸಮಿತಿ ಅಥವಾ ಕ್ಯಾಬಿನೆಟ್, ಸೈಬರ್‌ಸ್ಪೇಸ್ ಸೇರಿದಂತೆ "ಅವಾಮಿ ಲೀಗ್‌ನ ಎಲ್ಲಾ ಚಟುವಟಿಕೆಗಳ" ಮೇಲೆ ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ನಿಷೇಧ ಹೇರಿತ್ತು. ವಿಶೇಷ ನ್ಯಾಯಮಂಡಳಿಯು ಪಕ್ಷ ಮತ್ತು ಅದರ ನಾಯಕರ ವಿಚಾರಣೆಯನ್ನು ಪೂರ್ಣಗೊಳಿಸುವವರೆಗೆ ಈ ನಿಷೇಧವು ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿತ್ತು.

ಅವಾಮಿ ಲೀಗ್​ನಿಂದ ತಿರಸ್ಕಾರ

ಮರುದಿನ, ಅವಾಮಿ ಲೀಗ್ ಮಧ್ಯಂತರ ಸರ್ಕಾರದ ಈ ನಿರ್ಧಾರವನ್ನು ತಿರಸ್ಕರಿಸಿತು ಮತ್ತು ತನ್ನ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿತು.

ಸೋಮವಾರದ ಬೆಳವಣಿಗೆಯು, ಬಾಂಗ್ಲಾದೇಶವು ಪರಿಷ್ಕೃತ ಭಯೋತ್ಪಾದಕ ಕಾನೂನಿನ ಅಡಿಯಲ್ಲಿ ಆರೋಪಕ್ಕೊಳಗಾದ ವ್ಯಕ್ತಿಗಳು ಅಥವಾ ಸಂಸ್ಥೆಗಳ ಹೇಳಿಕೆಗಳ ಪ್ರಕಟಣೆ ಅಥವಾ ಪ್ರಸಾರವನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದ ಸಂದರ್ಭದಲ್ಲಿ ನಡೆದಿದೆ. ಭಾನುವಾರ ರಾತ್ರಿ, ರಾಷ್ಟ್ರಪತಿ ಮೊಹಮ್ಮದ್ ಶಹಾಬುದ್ದೀನ್ ಅವರು ಭಯೋತ್ಪಾದಕ ವಿರೋಧಿ ಕಾಯ್ದೆಗೆ ತಿದ್ದುಪಡಿ ತರುವ ಆದೇಶವನ್ನು ಹೊರಡಿಸಿದರು. ಈ ತಿದ್ದುಪಡಿಯಲ್ಲಿ ಪತ್ರಿಕಾ ಹೇಳಿಕೆಗಳು, ಸಾಮಾಜಿಕ ಮಾಧ್ಯಮ ವಿಷಯ ಮತ್ತು ಸಾರ್ವಜನಿಕ ಸಭೆಗಳನ್ನು ಒಳಗೊಂಡಂತೆ ಯಾವುದೇ ರೀತಿಯ ಪ್ರಚಾರವನ್ನು ನಿಷೇಧಿಸಲಾಗಿದೆ.

1949ರಲ್ಲಿ ಸ್ಥಾಪಿತವಾದ ಅವಾಮಿ ಲೀಗ್, ಅಂದಿನ ಪೂರ್ವ ಪಾಕಿಸ್ತಾನದ ಬಂಗಾಳಿಗಳ ಸ್ವಾಯತ್ತತೆಗಾಗಿ ದಶಕಗಳ ಕಾಲ ಹೋರಾಟ ನಡೆಸಿತು ಮತ್ತು 1971 ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿತು.

Tags:    

Similar News