ಎಲ್‌ಎಸಿಯಲ್ಲಿ ಹೊಸ ಗಸ್ತು ವ್ಯವಸ್ಥೆಗೆ ಒಪ್ಪಂದ | ಚೀನಾ-ಭಾರತದ ಗಾಲ್ವಾನ್ ಬಿಕ್ಕಟ್ಟು ಸುಖಾಂತ್ಯ
ರಷ್ಯಾದ ಕಜಾನದಲ್ಲಿ ಮಂಗಳವಾರದಿಂದ ಆರಂಭವಾಗಿರುವ ಬ್ರಿಕ್ಸ್ ಶೃಂಗಸಭೆಗೂ ಮುನ್ನವೇ ಚೀನಾ-ಭಾರತ ಬಿಕ್ಕಟ್ಟು ಶಮನಕ್ಕೆ ನಿರ್ಧರಿಸಿರುವುದು ಆಶಾದಾಯಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ. ವಿವಾದಿತ ಜಾಗಗಳಲ್ಲಿ ಸೈನಿಕರ ಜಮಾವಣೆಯನ್ನು ವಾಪಸ್ ಕರೆಸಿಕೊಳ್ಳಲು ಉಭಯ ರಾಷ್ಟ್ರಗಳು ತೀರ್ಮಾನಿಸಿವೆ.;
ʼಗಾಲ್ವಾನ್ ಕಣಿವೆಯ ಸೇನಾ ಸಂಘರ್ಷʼ ದಿಂದ ಬಿಗಡಾಯಿಸಿದ್ದ ಚೀನಾ- ಭಾರತ ನಡುವಿನ ಸಂಬಂಧವು ಮಿಲಿಟರಿ ಹಾಗೂ ರಾಜತಾಂತ್ರಿಕ ಮಾತುಕತೆಯ ಮೂಲಕ ಬಗೆಹರಿಯುವ ಹಂತ ತಲುಪಿದೆ.
ಗಡಿ ವಿವಾದಕ್ಕೆ ಸಂಬಂಧಿಸಿ 2020 ಮೇ ತಿಂಗಳಲ್ಲಿ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ಮಧ್ಯೆ ದೊಡ್ಡ ಘರ್ಷಣೆ ನಡೆದಿತ್ತು. ಇದರಿಂದ ಗಡಿ ಹಾಗೂ ಸೇನಾ ಬಿಕ್ಕಟ್ಟು ಉಲ್ಭಣಿಸಿತ್ತು. ಸಂಧಾನಕಾರರ ಮಾತುಕತೆಯ ಫಲವಾಗಿ ವಿವಾದಿತ ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ) ಉದ್ದಕ್ಕೂ ಗಸ್ತು ತಿರುಗಲು ಭಾರತ-ಚೀನಾ ಒಪ್ಪಂದ ಮಾಡಿಕೊಂಡಿವೆ.
ರಷ್ಯಾದ ಕಜಾನದಲ್ಲಿ ಮಂಗಳವಾರದಿಂದ ಆರಂಭವಾಗಿರುವ ಬ್ರಿಕ್ಸ್ ಶೃಂಗಸಭೆಗೂ ಮುನ್ನವೇ ಚೀನಾ-ಭಾರತ ಬಿಕ್ಕಟ್ಟು ಶಮನಕ್ಕೆ ನಿರ್ಧರಿಸಿರುವುದು ರಚನಾತ್ಮಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ. ವಿವಾದಿತ ಜಾಗಗಳಲ್ಲಿ ಸೈನಿಕರ ಜಮಾವಣೆಯನ್ನು ವಾಪಸ್ ಕರೆಸಿಕೊಳ್ಳಲು ಎರಡೂ ರಾಷ್ಟ್ರಗಳು ತೀರ್ಮಾನಿಸಿವೆ.
ಗಾಲ್ವಾನ್ ಕಣಿವೆ ಸಂಘರ್ಷ ಏನು?
ಶಿಯಾಕ್ ನದಿ ಹರಿಯುವ ಪ್ರದೇಶದ ಮೇಲೆ ಪ್ರಾಬಲ್ಯ ಸಾಧಿಸಲು ಚೀನಾ ಗಾಲ್ವಾನ್ ಕಣಿವೆಯಲ್ಲಿ ರಸ್ತೆ ನಿರ್ಮಿಸಿದ್ದು ಘರ್ಷಣೆಗೆ ಪ್ರಮುಖ ಕಾರಣವಾಯಿತು. ಪೆಟ್ರೋಲಿಂಗ್ ಪಾಯಿಂಟ್ -14 ರ ಬಳಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ದೊಡ್ಡ ಘರ್ಷಣೆ ಜರುಗಿ, 20 ಭಾರತೀಯ ಯೋಧರು, 43 ಚೀನಾ ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಅಂದಿನಿಂದ ಎರಡೂ ರಾಷ್ಟ್ರಗಳ ನಡುವಿನ ಮಿಲಿಟರಿ ಹಾಗೂ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿತ್ತು.
1962ರ ಯುದ್ದದ ನಂತರವೂ ಪೂರ್ವ ಲಡಾಖ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸುವ ಯೋಜನೆಯ ಭಾಗವಾಗಿ ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆಗೆ ಇಳಿದಿತ್ತು. ಘರ್ಷಣೆಗೂ ಮುನ್ನ ಚೀನಾ ಸೈನಿಕರು ಭಾರತೀಯ ಯೋಧರೊಂದಿಗೆ ಶಸ್ತ್ರಾಸ್ತ್ರ ಬಳಸದೇ ದೊಣ್ಣೆ, ಕಲ್ಲೆಸೆತ, ಮಲ್ಲಯುದ್ಧದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಗಾಲ್ವಾನ್ ಕಣಿವೆ ಮೇಲೆ ಚೀನಾದ ಕಣ್ಣು ಏಕೆ?
ಚೀನಾದ ಪ್ರಾಬಲ್ಯ ಹೆಚ್ಚಿರುವ ಶಿಯೊಕ್ ನದಿ ಹರಿಯುವ ಮಾರ್ಗದ ಪಕ್ಕದಲ್ಲೇ ಗಾಲ್ವಾನ್ ಕಣಿವೆ ಇದೆ. ಈ ಪ್ರದೇಶದ ಮೇಲೆ ಚೀನಾ ಸಂಪೂರ್ಣ ಹಿಡಿತ ಸಾಧಿಸಲು 1962ರಿಂದಲೂ ಪ್ರಯತ್ನಿಸುತ್ತಿದೆ. ಗಾಲ್ವಾನ್ ಮೇಲೆ ಪ್ರಾಬಲ್ಯ ಸಾಧಿಸದಿದ್ದರೆ ಭಾರತವು ಇದೇ ಕಣಿವೆ ಸಹಾಯದಿಂದ ಅಕ್ಸಾಯ್ ಚಿನ್ ಪ್ರಸ್ಥಭೂಮಿಯ ಮೇಲೆ ಹಿಡಿತ ಸಾಧಿಸಬಹುದು ಎಂಬ ಆತಂಕ ಚೀನಾವನ್ನು ಕಾಡುತ್ತಿದೆ. ಹಾಗಾಗಿ ಚೀನಾ ಪದೇ ಪದೇ ಗಡಿ ರೇಖೆ ಉಲ್ಲಂಘನೆ, ವಾಸ್ತವ ನಿಯಂತ್ರಣ ರೇಖೆ ದಾಟಿ ಒಳ ನುಗ್ಗುವ ಯತ್ನ ನಡೆಸುತ್ತಲೇ ಇದೆ. ಭಾರತೀಯ ಯೋಧರು ಅದನ್ನು ವಿಫಲಗೊಳಿಸುತ್ತಲೇ ಬಂದಿದ್ದಾರೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ದ್ವಿಪಕ್ಷೀಯ ಸಭೆ
ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಗಸ್ತು ತಿರುಗುವ ಒಪ್ಪಂದವು ಬ್ರಿಕ್ಸ್ ಶೃಂಗಸಭೆಯಲ್ಲಿ ಎರಡೂ ರಾಷ್ಟ್ರಗಳ ಮುಖ್ಯಸ್ಥರ ಮಧ್ಯೆ ದ್ವಿಪಕ್ಷೀಯ ಮಾತುಕತೆಗೆ ಬರಲಿದೆ.
ನಾಲ್ಕು ವರ್ಷಗಳ ಸಮಸ್ಯೆ ಯಾವುದೇ ಸೇನಾ ಬಿಕ್ಕಟ್ಟಿಗೆ ಆಸ್ಪದ ನೀಡದೇ ಬಗೆಹರಿಯುತ್ತಿರುವುದು ಉತ್ತಮ ಬೆಳವಣಿಗೆ. ಇದು ಅತ್ಯಂತ ತಾಳ್ಮೆಯ ಮತ್ತು ಪರಿಶ್ರಮದ ರಾಜತಾಂತ್ರಿಕ ಮಾತುಕತೆಯ ಫಲವಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಪ್ರಯತ್ನದ ಭಾಗವಾಗಿ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಶಮನಗೊಂಡಿದೆ. ಭಾರತದ ಡೆಪ್ಸಾಂಗ್ ಮತ್ತು ಡೆಮ್ಚೋಕ್ನಲ್ಲಿನ ಅಡೆತಡೆಗಳು ದೂರಾಗಿವೆ ಎಂದು ಹೇಳಿದ್ದಾರೆ.
ಎಲ್‌ಎಸಿಯಲ್ಲಿ ಗಸ್ತು ತಿರುಗಲು ಒಪ್ಪಂದ
ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ವಿವಾದಿತ ಸ್ಥಳಗಳಲ್ಲಿ ಗಸ್ತು ತಿರುಗಲು ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಸೋಮವಾರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಘೋಷಿಸಿದ್ದರು. ಈ ಒಪ್ಪಂದದ ಅನ್ವಯ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಗಸ್ತು ತಿರುಗಲು ಉಭಯ ದೇಶಗಳು ಮುಕ್ತವಾಗಿವೆ ಎಂದು ತಿಳಿದುಬಂದಿದೆ.
ಚರ್ಚೆಗೆ ಅವಕಾಶವೇ ಇಲ್ಲ: ಕಾಂಗ್ರೆಸ್
ಭಾರತ ಮತ್ತು ಚೀನಾ ನಡುವಿನ ಗಸ್ತು ತಿರುಗುವ ಒಪ್ಪಂದದ ಕುರಿತು ಒಮ್ಮೆಯೂ ಕೇಂದ್ರ ಸರ್ಕಾರ ವಿರೋಧ ಪಕ್ಷಗಳೊಂದಿಗೆ ಚರ್ಚಿಸಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ʼಎಕ್ಸ್ʼನಲ್ಲಿ ಆರೋಪಿಸಿದ್ದಾರೆ.
ಒಪ್ಪಂದದ ಕುರಿತು ಪೂರ್ಣ ವಿವರಗಳಿಗಾಗಿ ಕಾಯುತ್ತಿದ್ದೇವೆ. ಗಡಿ ಪರಿಸ್ಥಿತಿಯ ಬಗ್ಗೆ ಆಡಳಿತ ಪಕ್ಷ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಟೀಕಿಸಿದ್ದಾರೆ.
2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಕೆಲವು ಟೀಕೆಗಳ ವಿಡಿಯೋ ಹಂಚಿಕೊಂಡಿರುವ ರಮೇಶ್ ಅವರು, 2020 ಜೂನ್ 19 ರಂದು ಪ್ರಧಾನಿ ಮಾಡಿದ ಈ ಟೀಕೆಗಳನ್ನು ದೇಶ ಮರೆಯುವುದೇ? ಎಂದು ಕೇಳಿದ್ದಾರೆ. ಸೇನಾ ಸಂಘರ್ಷದ ಕುರಿತು ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಕ್ಲೀನ್ ಚಿಟ್ ನೀಡಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.
ಗಸ್ತು ಹಕ್ಕು ಯಥಾಸ್ಥಿತಿಗೆ ಮರಳುವುದೇ?
ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಗಸ್ತು ತಿರುಗುವ ಒಪ್ಪಂದದಿಂದ ಈ ಹಿಂದಿನಂತೆ ಗಸ್ತು ಹಕ್ಕಿನ ಮರುಸ್ಥಾಪನೆ ಸಾಧ್ಯವೇ ಎಂಬ ಸಂಶಯ ಎದುರಾಗಿದೆ.
2020 ರಲ್ಲಿ ಘರ್ಷಣೆ ನಡೆದ ಸ್ಥಳಗಳಲ್ಲಿ ಉಭಯ ಕಡೆಯವರು ವಾಪಸಾಗಿದ್ದರೂ ಇನ್ನು ಹಲವು ಕಡೆ ಸೈನಿಕರ ಜಮಾವಣೆ ಮುಂದುವರಿದಿರುವುದು ಸಣ್ಣ ಆತಂಕಕ್ಕೆ ಕಾರಣವಾಗಿದೆ.
2020 ರಲ್ಲಿ ಗಾಲ್ವಾನ್ ಕಣಿವೆ ಘರ್ಷಣೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಗಸ್ತು ಸಂಚಾರಕ್ಕೆ ಎರಡೂ ಕಡೆಗಳಿಂದ ನಿರ್ಬಂಧ ಹೇರಲಾಗಿತ್ತು. ಈಗ ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಹೊಸ ಗಡಿ ಗಸ್ತು ವ್ಯವಸ್ಥೆಗೆ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ. ಇದು ಎಷ್ಟರ ಮಟ್ಟಿಗೆ ಅನುಷ್ಠಾನ ಆಗಲಿದೆಯೋ ಕಾದು ನೋಡಬೇಕಿದೆ.