ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ: 173 ಪ್ರಯಾಣಿಕರು ಪಾರು
ನಿಲ್ದಾಣದ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಎಲ್ಲಾ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.;
ಅಮೆರಿಕದ ಡೆನ್ವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ಅಮೆರಿಕನ್ ಏರ್‌ಲೈನ್ಸ್ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ 173 ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ ಮಧ್ಯಾಹ್ನ 2:45ರ ಸುಮಾರಿಗೆ ಈ ಘಟನೆ ನಡೆದಿದೆ. ಮಿಯಾಮಿಗೆ ಹೊರಟಿದ್ದ ಬೋಯಿಂಗ್ 737 MAX 8 ಮಾದರಿಯ ವಿಮಾನವು ರನ್‌ವೇಯಲ್ಲಿದ್ದಾಗ ಲ್ಯಾಂಡಿಂಗ್ ಗೇರ್‌ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಎಲ್ಲಾ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ವಿಮಾನದಿಂದ ಹೊಗೆ ಬರುತ್ತಿದ್ದಂತೆ ಭಯಭೀತರಾದ ಪ್ರಯಾಣಿಕರು ತುರ್ತಾಗಿ ಇಳಿದು ಬರುತ್ತಿರುವ ದೃಶ್ಯಗಳು ಆತಂಕ ಮೂಡಿಸಿವೆ. "ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ನಮ್ಮ ನಿರ್ವಹಣಾ ತಂಡವು ವಿಮಾನವನ್ನು ತಪಾಸಣೆ ನಡೆಸುತ್ತಿದೆ," ಎಂದು ಅಮೆರಿಕನ್ ಏರ್‌ಲೈನ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವರ್ಷದಲ್ಲಿ ಎರಡನೇ ಘಟನೆ
ವಿಶೇಷವೆಂದರೆ, ಇದೇ ವರ್ಷ ಮಾರ್ಚ್ 14ರಂದು ಕೂಡ ಡೆನ್ವರ್ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್‌ಲೈನ್ಸ್‌ನ ಮತ್ತೊಂದು ವಿಮಾನ ತುರ್ತು ಭೂಸ್ಪರ್ಶ ಮಾಡಿದಾಗ ಬೆಂಕಿ ಕಾಣಿಸಿಕೊಂಡಿತ್ತು. ಆ ಘಟನೆಯಲ್ಲಿ 12 ಪ್ರಯಾಣಿಕರು ಗಾಯಗೊಂಡಿದ್ದರು.