ಪುಟಿನ್ ಘೋಷಣೆ ಬೆನ್ನಲ್ಲೇ ಅಣ್ವಸ್ತ್ರ ಪರೀಕ್ಷೆಗೆ ಟ್ರಂಪ್ ಆದೇಶ: ಜಾಗತಿಕ ಜಿದ್ದು ಶುರು
ಭಾನುವಾರ ರಷ್ಯಾ ತನ್ನ ಅಣ್ವಸ್ತ್ರ ಸಾಮರ್ಥ್ಯದ 'ಬುರೆವೆಸ್ಟ್ನಿಕ್' ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಪುಟಿನ್ ಪ್ರಕಟಿಸಿದ್ದರು. ಇದಾದ ನಂತರ, ಬುಧವಾರ ರಷ್ಯಾದ ಪರಮಾಣು ಚಾಲಿತ ಸೂಪರ್ ಟಾರ್ಪೆಡೊ 'ಪೊಸಿಡಾನ್' ಪರೀಕ್ಷೆಯನ್ನೂ ಘೋಷಿಸಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ದೇಶದ ಅಣ್ವಸ್ತ್ರ-ವಾಹಕ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂದು ಘೋಷಿಸಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಲೇ ಅಣ್ವಸ್ತ್ರಗಳ ಪರೀಕ್ಷೆಯನ್ನು ಪ್ರಾರಂಭಿಸುವಂತೆ ತಮ್ಮ ಸೇನೆಗೆ ಆದೇಶಿಸಿದ್ದಾರೆ. ಇತರ ರಾಷ್ಟ್ರಗಳ ಪರೀಕ್ಷಾ ಕಾರ್ಯಕ್ರಮಗಳಿಗೆ ಸರಿಸಮನಾಗಿ ಅಮೆರಿಕವೂ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಹೊಸ ಶೀತಲ ಸಮರದ ಭೀತಿಯನ್ನು ಹುಟ್ಟುಹಾಕಿದೆ.
ಗುರುವಾರ (ಅಕ್ಟೋಬರ್ 30) ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, "ಇತರ ದೇಶಗಳ ಪರೀಕ್ಷಾ ಕಾರ್ಯಕ್ರಮಗಳಿಂದಾಗಿ, ನಮ್ಮ ಯುದ್ಧ ಇಲಾಖೆಗೆ (ಹಿಂದಿನ ರಕ್ಷಣಾ ಇಲಾಖೆ) ನಮ್ಮ ಅಣ್ವಸ್ತ್ರಗಳನ್ನು ಸಮಾನ ರೀತಿಯಲ್ಲಿ ಪರೀಕ್ಷಿಸಲು ಸೂಚಿಸಿದ್ದೇನೆ. ಈ ಪ್ರಕ್ರಿಯೆಯು ತಕ್ಷಣವೇ ಪ್ರಾರಂಭವಾಗಲಿದೆ" ಎಂದು ಘೋಷಿಸಿದ್ದಾರೆ.
ಪುಟಿನ್‌ಗೆ ಟ್ರಂಪ್ ಟೀಕೆ
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಟ್ರಂಪ್, ಪುಟಿನ್ ಅವರ ಈ ಘೋಷಣೆ "ಸೂಕ್ತವಲ್ಲ" ಎಂದು ಟೀಕಿಸಿದ್ದರು. 'ಪೊಸಿಡಾನ್' ಟಾರ್ಪೆಡೊಗಳು ಕರಾವಳಿ ಪ್ರದೇಶಗಳಲ್ಲಿ ಬೃಹತ್ ವಿಕಿರಣಶೀಲ ಸಾಗರದ ಅಲೆಗಳನ್ನು ಸೃಷ್ಟಿಸಿ ಅಪಾರ ವಿನಾಶವನ್ನುಂಟು ಮಾಡುವ ಸಾಮರ್ಥ್ಯ ಹೊಂದಿವೆ ಎಂದು ಸೇನಾ ವಿಶ್ಲೇಷಕರು ಹೇಳಿದ್ದಾರೆ.
ಅಮೆರಿಕವೇ ನಂಬರ್ 1 ಎಂದ ಟ್ರಂಪ್
ತಮ್ಮ ಪೋಸ್ಟ್‌ನಲ್ಲಿ ಟ್ರಂಪ್, "ಅಮೆರಿಕವು ಬೇರೆ ಯಾವುದೇ ದೇಶಕ್ಕಿಂತ ಹೆಚ್ಚು ಅಣ್ವಸ್ತ್ರಗಳನ್ನು ಹೊಂದಿದೆ. ನನ್ನ ಮೊದಲ ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಶಸ್ತ್ರಾಸ್ತ್ರಗಳ ಸಂಪೂರ್ಣ ನವೀಕರಣ ಮತ್ತು ಆಧುನೀಕರಣವನ್ನು ಮಾಡಲಾಗಿದೆ. ರಷ್ಯಾ ಎರಡನೇ ಸ್ಥಾನದಲ್ಲಿದ್ದರೆ, ಚೀನಾ ಮೂರನೇ ಸ್ಥಾನದಲ್ಲಿದೆ" ಎಂದು ಹೇಳಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆ ತಪ್ಪು ಎಂದು 'ದಿ ಗಾರ್ಡಿಯನ್' ವರದಿ ಮಾಡಿದೆ. ಅಂತರರಾಷ್ಟ್ರೀಯ ಅಣ್ವಸ್ತ್ರ ನಿರ್ಮೂಲನಾ ಅಭಿಯಾನದ (ICAN) ಪ್ರಕಾರ, ರಷ್ಯಾ 5,500ಕ್ಕೂ ಹೆಚ್ಚು ಅಣ್ವಸ್ತ್ರಗಳನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ಅಮೆರಿಕ 5,044 ಅಣ್ವಸ್ತ್ರಗಳನ್ನು ಹೊಂದಿದೆ.
33 ವರ್ಷಗಳ ನಂತರ ಪರೀಕ್ಷೆ
1992ರ ಸೆಪ್ಟೆಂಬರ್ 23ರಂದು ಅಮೆರಿಕ ತನ್ನ ಕೊನೆಯ ಅಣ್ವಸ್ತ್ರ ಪರೀಕ್ಷೆಯನ್ನು ನಡೆಸಿತ್ತು. ಅಂದಿನ ಅಧ್ಯಕ್ಷ ಜಾರ್ಜ್ ಎಚ್.ಡಬ್ಲ್ಯೂ. ಬುಷ್ ಅವರು ಭೂಗತ ಪರಮಾಣು ಪರೀಕ್ಷೆಗಳ ಮೇಲೆ ನಿಷೇಧ ಹೇರಿದ್ದರು. ಈಗ 33 ವರ್ಷಗಳ ನಂತರ ಟ್ರಂಪ್ ಮತ್ತೆ ಅಣ್ವಸ್ತ್ರ ಪರೀಕ್ಷೆಗೆ ಆದೇಶಿಸಿರುವುದು, ಅಮೆರಿಕದ ದೀರ್ಘಕಾಲದ ನೀತಿಯಲ್ಲಿ ದೊಡ್ಡ ಬದಲಾವಣೆಯನ್ನು ಸೂಚಿಸುತ್ತದೆ ಮತ್ತು ಜಾಗತಿಕ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸುವ ಆತಂಕವನ್ನು ಸೃಷ್ಟಿಸಿದೆ.