ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಮಮ್ದಾನಿ ಗೆಲುವಿಗೆ ಟ್ರಂಪ್ ವ್ಯಂಗ್ಯ
ಫ್ಲೋರಿಡಾದಲ್ಲಿ ನಡೆದ 'ಅಮೆರಿಕ ಬಿಸಿನೆಸ್ ಫೋರಂ ಮಿಯಾಮಿ' ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, "ನನ್ನ ಎರಡನೇ ಅವಧಿಯ ಆಯ್ಕೆಯೊಂದಿಗೆ ಅಮೆರಿಕನ್ನರು ತಮ್ಮ ಸಾರ್ವಭೌಮತ್ವವನ್ನು ಮರಳಿ ಪಡೆದಿದ್ದರು ಎಂದು ಹೇಳಿದ್ದರು.
ಜೊಹ್ರಾನ್ ಮಮ್ದಾನಿ
ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಡೆಮಾಕ್ರಟಿಕ್ ಸಮಾಜವಾದಿ ನಾಯಕ ಜೊಹ್ರಾನ್ ಮಮ್ದಾನಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಟೀಕಿಸಿದ್ದಾರೆ.
"ಅವರ ಹೆಸರು ಏನೇ ಇರಲಿ" ಎಂದು ವ್ಯಂಗ್ಯವಾಡಿದ ಟ್ರಂಪ್, ಅಮೆರಿಕನ್ನರು ಈಗ "ಕಮ್ಯುನಿಸಂ ಮತ್ತು ಸಾಮಾನ್ಯ ಜ್ಞಾನದ" ನಡುವೆ ಆಯ್ಕೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.
ನವೆಂಬರ್ 4ರಂದು ನಡೆದ ಚುನಾವಣೆಯಲ್ಲಿ ಮಮ್ದಾನಿ ನ್ಯೂಯಾರ್ಕ್ ನಗರದ ಮೊದಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾದ ಮೇಯರ್ ಆಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಫ್ಲೋರಿಡಾದಲ್ಲಿ ನಡೆದ 'ಅಮೆರಿಕ ಬಿಸಿನೆಸ್ ಫೋರಂ ಮಿಯಾಮಿ' ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, "ನನ್ನ ಎರಡನೇ ಅವಧಿಯ ಆಯ್ಕೆಯೊಂದಿಗೆ ಅಮೆರಿಕನ್ನರು ತಮ್ಮ ಸಾರ್ವಭೌಮತ್ವವನ್ನು ಮರಳಿ ಪಡೆದಿದ್ದರು. ಆದರೆ, ಈ ಮೇಯರ್ ಚುನಾವಣೆಯಿಂದಾಗಿ ಅದನ್ನು ಸ್ವಲ್ಪ ಕಳೆದುಕೊಂಡಿದ್ದಾರೆ. ಚಿಂತಿಸಬೇಡಿ, ನಾವು ಅದನ್ನು ಸರಿಪಡಿಸುತ್ತೇವೆ" ಎಂದು ಹೇಳಿದ್ದಾರೆ.
"ಕಮ್ಯುನಿಸ್ಟ್ ಆಡಳಿತ"ದ ಆರೋಪ
"ಮಹಿಳೆಯರ ಕ್ರೀಡೆಯಲ್ಲಿ ಪುರುಷರು ಆಡುವುದನ್ನು ಮಮ್ದಾನಿ ಅದ್ಭುತ ಎಂದು ಭಾವಿಸುತ್ತಾರೆ" ಎಂದು ಟ್ರಂಪ್ ಹೇಳಿದಾಗ, ಸಭಿಕರಿಂದ ವಿರೋಧದ ಕೂಗು ಕೇಳಿಬಂತು.
"ಡೆಮಾಕ್ರಟಿಕ್ ಅಮೆರಿಕದ ಅತಿದೊಡ್ಡ ನಗರದಲ್ಲಿ ಒಬ್ಬ ಕಮ್ಯುನಿಸ್ಟ್ ಅನ್ನು ಮೇಯರ್ ಆಗಿ ಸ್ಥಾಪಿಸಿದ್ದಾರೆ. ಕಮ್ಯುನಿಸಂ ಹಿಂದೆಂದೂ ಯಶಸ್ವಿಯಾಗಿಲ್ಲ. ನಮ್ಮ ವಿರೋಧಿಗಳು ಆರ್ಥಿಕ ದುಃಸ್ವಪ್ನವನ್ನು ನೀಡುತ್ತಿದ್ದರೆ, ನಾವು ಆರ್ಥಿಕ ಪವಾಡವನ್ನು ಸೃಷ್ಟಿಸುತ್ತಿದ್ದೇವೆ," ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕವನ್ನು ಕಮ್ಯುನಿಸ್ಟ್ ಕ್ಯೂಬಾ, ಸಮಾಜವಾದಿ ವೆನೆಜುವೆಲಾವನ್ನಾಗಿ ಮಾಡಲು ಡೆಮಾಕ್ರಟರು ಹೊರಟಿದ್ದಾರೆ ಎಂದು ಆರೋಪಿಸಿದ ಟ್ರಂಪ್, "ಶೀಘ್ರದಲ್ಲೇ ಮಿಯಾಮಿ, ನ್ಯೂಯಾರ್ಕ್‌ನಿಂದ ಕಮ್ಯುನಿಸಂನಿಂದ ಪಲಾಯನ ಮಾಡುವವರಿಗೆ 'ನಿರಾಶ್ರಿತ' ತಾಣವಾಗಬಹುದು" ಎಂದು ವ್ಯಂಗ್ಯವಾಡಿದ್ದಾರೆ.
ಮಮ್ದಾನಿ ತಿರುಗೇಟು
ಟ್ರಂಪ್ ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಮ್ದಾನಿ, ತಮ್ಮ ವಿಜಯೋತ್ಸವದ ಭಾಷಣದಲ್ಲಿ, "ನ್ಯೂಯಾರ್ಕ್ ವಲಸಿಗರಿಂದ ನಿರ್ಮಿಸಲ್ಪಟ್ಟ, ವಲಸಿಗರಿಂದ ನಡೆಸಲ್ಪಡುವ ಮತ್ತು ಇಂದಿನಿಂದ ಒಬ್ಬ ವಲಸಿಗನಿಂದ ಮುನ್ನಡೆಸಲ್ಪಡುವ ನಗರವಾಗಿ ಉಳಿಯಲಿದೆ. ಡೊನಾಲ್ಡ್ ಟ್ರಂಪ್, ನೀವು ನೋಡುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಿಮಗಾಗಿ ನನ್ನ ಬಳಿ ನಾಲ್ಕು ಶಬ್ದಗಳಿವೆ: 'ಟರ್ನ್ ದಿ ವಾಲ್ಯೂಮ್ ಅಪ್' (ಶಬ್ದವನ್ನು ಹೆಚ್ಚಿಸಿ)" ಎಂದು ಸವಾಲು ಹಾಕಿದ್ದಾರೆ. "ನಮ್ಮಲ್ಲಿ ಯಾರಿಗಾದರೂ ತೊಂದರೆ ಕೊಡಬೇಕಾದರೆ, ನೀವು ನಮ್ಮೆಲ್ಲರನ್ನೂ ದಾಟಿ ಬರಬೇಕಾಗುತ್ತದೆ" ಎಂದು ಅವರು ಎಚ್ಚರಿಸಿದ್ದಾರೆ.
ಈ ಚುನಾವಣೆಯು ಟ್ರಂಪ್ ಅವರ ನೀತಿಗಳ ಮೇಲಿನ ಜನಾಭಿಪ್ರಾಯ ಎಂದೇ ವಿಶ್ಲೇಷಿಸಲಾಗುತ್ತಿದ್ದು, ಮಮ್ದಾನಿ ಅವರ ಗೆಲುವು ಡೆಮಾಕ್ರಟಿಕ್ ಪಕ್ಷದ ಪ್ರಗತಿಪರ ಬಣಕ್ಕೆ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ.