ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ರದ್ದು: ಕೆ ಎ ಪೌಲ್​

ಸನಾ ಜೈಲಿನಲ್ಲಿರುವ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.;

Update: 2025-07-22 07:12 GMT

ಯೆಮೆನ್‌ನಲ್ಲಿ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ಶುಶ್ರೂಷಕಿ ನಿಮಿಷಾ ಪ್ರಿಯಾ ಅವರ ಶಿಕ್ಷೆ ರದ್ದುಪಡಿಸಲಾಗಿದೆ. ಭಾರತ ಮತ್ತು ಯೆಮೆನ್ ಅಧಿಕಾರಿಗಳ ತೀವ್ರ ಪರಿಶ್ರಮದ ಫಲವಾಗಿ ಅವರು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಂಸ್ಥಾಪಕ ಡಾ. ಕೆ.ಎ. ಪೌಲ್ ಮಂಗಳವಾರ ಪ್ರಕಟಿಸಿದ್ದಾರೆ.

ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಡಾ. ಪೌಲ್, "ಯೆಮೆನ್ ನಾಯಕರ ಪರಿಣಾಮಕಾರಿ ಮತ್ತು ಪ್ರಾರ್ಥನಾಪೂರ್ವಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ನಿಮಿಷಾ ಅವರ ಪ್ರಾಣ ಉಳಿಸಲು ಕಳೆದ ಹತ್ತು ದಿನಗಳಲ್ಲಿ ನಾಯಕರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ದೇವರ ದಯೆಯಿಂದ ನಿಮಿಷಾ ಬಿಡುಗಡೆಯಾಗಲಿದ್ದಾರೆ" ಎಂದು ತಿಳಿಸಿದ್ದಾರೆ. ಸನಾ ಜೈಲಿನಲ್ಲಿರುವ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ಈ ಬೆಳವಣಿಗೆಯು, ನಿಮಿಷಾ ಪ್ರಿಯಾ ಅವರ ಬಿಡುಗಡೆಗೆ ಭಾರತ ಸರ್ಕಾರ ಸಕ್ರಿಯವಾಗಿ ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ ವಾರ ನೀಡಿದ್ದ ಹೇಳಿಕೆಗೆ ಪೂರಕವಾಗಿದೆ. "ಷರಿಯಾ ಕಾನೂನಿನಲ್ಲಿ ಕ್ಷಮಾದಾನದ ಮಾರ್ಗಗಳನ್ನು ಶೋಧಿಸಲು ಸರ್ಕಾರವು ಯೆಮೆನ್‌ನಲ್ಲಿ ವಕೀಲರನ್ನು ನೇಮಿಸಿದೆ. ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ" ಎಂದು ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಈ ಹಿಂದೆ ತಿಳಿಸಿದ್ದರು.

ಜುಲೈ 16 ರಂದು ನಿಗದಿಯಾಗಿದ್ದ ಮರಣದಂಡನೆಯನ್ನು ಯೆಮೆನ್ ಸರ್ಕಾರ ಮುಂದೂಡಿದ್ದು, ಈ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮಹತ್ವದ ಹೆಜ್ಜೆಯಾಗಿತ್ತು. ಇದೀಗ ಶಿಕ್ಷೆ ರದ್ದಾಗಿರುವುದು ನಿಮಿಷಾ ಪ್ರಿಯಾ ಮತ್ತು ಅವರ ಕುಟುಂಬಕ್ಕೆ ದೊಡ್ಡ ನಿರಾಳತೆ ತಂದಿದೆ. 

Tags:    

Similar News