ಸಿರಿಯಾದಿಂದ 75 ಭಾರತೀಯರ ಸ್ಥಳಾಂತರ
ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಸಿರಿಯಾದಲ್ಲಿ ಉಳಿದಿರುವ ಭಾರತೀಯ ಪ್ರಜೆಗಳು ಡಮಾಸ್ಕಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.;
ಅಧ್ಯಕ್ಷ ಬಷರ್ ಅಸ್ಸಾದ್ ಅವರ ಸರ್ವಾಧಿಕಾರಿ ಸರ್ಕಾರವನ್ನು ಬಂಡುಕೋರರು ಪದಚ್ಯುತಗೊಳಿಸಿದ ಹಿನ್ನೆಲೆಯಲ್ಲಿ ಉಂಟಾಗಿರುವ ಆಂತರಿಕೆ ಕ್ಷೋಭೆಯಲ್ಲಿ ಸಿಲುಕಿದ್ದ ಭಾರತದ 75 ಪ್ರಜೆಗಳನ್ನು ಕೇಂದ್ರ ಸರ್ಕಾರ ಸ್ಥಳಾಂತರ ಮಾಡಿದೆ.
ಭದ್ರತಾ ಪರಿಸ್ಥಿತಿಯ ಪರಿಶೀಲನೆಯ ಬಳಿಕ ಡಮಾಸ್ಕಸ್ ಮತ್ತು ಬೈರುತ್ನಲ್ಲಿರುವ ರಾಯಭಾರ ಕಚೇರಿಗಳು ಸಮನ್ವಯ ಮಾಡಿಕೊಂಡು ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
"ಸಿರಿಯಾದಲ್ಲಿ ಇತ್ತೀಚಿನ ಬೆಳವಣಿಗೆಗಳ ನಂತರ ಭಾರತ ಸರ್ಕಾರ 75 ಭಾರತೀಯ ಪ್ರಜೆಗಳನ್ನು ಸಿರಿಯಾದಿಂದ ಸ್ಥಳಾಂತರಿಸಿದೆ" ಎಂದು ಅದು ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ.
"ಸ್ಥಳಾಂತರಗೊಂಡವರಲ್ಲಿ ಸೈದಾ ಝೈನಾಬ್ನಲ್ಲಿ ಸಿಲುಕಿದ್ದ ಜಮ್ಮು ಮತ್ತು ಕಾಶ್ಮೀರದ 44 ಮಂದಿ ಇದ್ದಾರೆ. ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಲೆಬನಾನ್ ದಾಟಿದ್ದಾರೆ. ಭಾರತಕ್ಕೆ ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಮರಳಲಿದ್ದಾರೆ" ಎಂದು ವಿದೇಶಾಂಗ ಇಲಾಖೆ ಹೇಳಿದೆ.
ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಸಿರಿಯಾದಲ್ಲಿ ಉಳಿದಿರುವ ಭಾರತೀಯ ಪ್ರಜೆಗಳು ಡಮಾಸ್ಕಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.
"ಸರ್ಕಾರವು ಪರಿಸ್ಥಿತಿಯನ್ನು ಸತತವಾಗಿ ಮೇಲ್ವಿಚಾರಣೆ ಮಾಡಲಿದೆ ಎಂದು" ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಬಂಡುಕೋರರು ಹಲವಾರು ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ವಶಪಡಿಸಿಕೊಂಡ ನಂತರ ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಂಡಿದ್ದರು. ಹೀಗಾಗಿ ಸಿರಿಯನ್ ಸರ್ಕಾರ ಭಾನುವಾರ ಪತನಗೊಂಡಿತ್ತು. ಬಂಡುಕೋರ ಗುಂಪು, ಹಯಾತ್ ತಹ್ರಿರ್ ಅಲ್-ಶಾಮ್ ಡಮಾಸ್ಕಸ್ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಅಧ್ಯಕ್ಷ ಅಸ್ಸಾದ್ ದೇಶದಿಂದ ಪಲಾಯನ ಮಾಡಿದ್ದರು. ಇದು ಅವರ ಕುಟುಂಬದ 50 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತ್ತು
ಅಸ್ಸಾದ್ ಮಾಸ್ಕೋದಲ್ಲಿದ್ದು, ಅವರಿಗೆ ಆಶ್ರಯ ನೀಡಲಾಗುವುದು ಎಂದು ರಷ್ಯಾ ಹೇಳಿದೆ. ಅವರ ಸುಮಾರು 14 ವರ್ಷಗಳ ಅಧಿಕಾರಾವಧಿಯು ಅಂತರ್ಯುದ್ಧ, ರಕ್ತಪಾತ ಮತ್ತು ಅವರ ರಾಜಕೀಯ ವಿರೋಧಿಗಳ ಮೇಲೆ ಕ್ರೂರ ದಬ್ಬಾಳಿಕೆಯಿಂದಲೇ ಕುಖ್ಯಾತರಾಗಿದ್ದರು.