2008ರ ಮುಂಬೈ ಉಗ್ರರ ದಾಳಿ: ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರಕ್ಕೆ ಸಮ್ಮತಿ

2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಆರು ಅಮೆರಿಕನ್ನರು ಸೇರಿದಂತೆ 166 ಜನರು ಸಾವನ್ನಪ್ಪಿದರು.

Update: 2024-08-17 06:53 GMT

ವಾಷಿಂಗ್ಟನ್: 2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿರುವ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾ ಅವರನ್ನು ಹಸ್ತಾಂತರಿಸಬಹುದೆಂದು ಅಮೆರಿಕದ ಒಂಬತ್ತನೇ ಸರ್ಕ್ಯೂಟಿನ ಮೇಲ್ಮನವಿ ನ್ಯಾಯಾಲಯ ತೀರ್ಪು ನೀಡಿದೆ.

ರಾಣಾ ಸಲ್ಲಿಸಿದ್ದ ಮೇಲ್ಮನವಿ ಕುರಿತು ತೀರ್ಪು ನೀಡಿ, ಭಾರತ ಅಮೆರಿಕ ಹಸ್ತಾಂತರ ಒಪ್ಪಂದವು ರಾಣಾ ಅವರ ಹಸ್ತಾಂತರಕ್ಕೆ ಅನುಮತಿ ನೀಡುತ್ತದೆ ಎಂದು ನ್ಯಾಯಾಲಯ ಆಗಸ್ಟ್ 15 ರಂದು ತನ್ನ ತೀರ್ಪಿನಲ್ಲಿ ಹೇಳಿದೆ.

ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಕ್ಯಾಲಿಫೋರ್ನಿ ಯಾದ ಸೆಂಟ್ರಲ್ ಡಿಸ್ಟ್ರಿಕ್ಟ್‌ನ ಜಿಲ್ಲಾ ನ್ಯಾಯಾಲಯದ ತೀರ್ಪು ವಿರೋಧಿಸಿ ನೀಡಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಒಂಬತ್ತನೇ ಸರ್ಕ್ಯೂಟಿನ ನ್ಯಾಯಾಲಯದ ನ್ಯಾಯಾಧೀಶರ ಸಮಿತಿಯು ರಾಣಾ ಅವರ ಅಪರಾಧವು ಅಮೆರಿಕ ಮತ್ತು ಭಾರತದ ನಡುವಿನ ಹಸ್ತಾಂತರ ಒಪ್ಪಂದದ ನಿಯಮಗಳಿಗೆ ಒಳಪಟ್ಟಿದೆ ಎಂದು ಅಭಿಪ್ರಾಯಪಟ್ಟಿದೆ.

ಮಿಲನ್ ಡಿ. ಸ್ಮಿತ್, ಬ್ರಿಡ್ಜೆಟ್ ಎಸ್. ಬೇಡ್ ಮತ್ತು ಸಿಡ್ನಿ ಎ. ಫಿಟ್ಜ್‌ವಾಟರ್ ಅವರನ್ನು ಒಳಗೊಂಡ ಸಮಿತಿಯು ಅಮೆರಿಕದಲ್ಲಿ ರಾಣಾ ಅವರನ್ನು ಖುಲಾಸೆಗೊಳಿಸಿದ ಅಪರಾಧಗಳಿಂದ ಭಾರತೀಯ ಆರೋಪಗಳು ವಿಭಿನ್ನ ಅಂಶಗಳನ್ನು ಒಳಗೊಂಡಿರುವ ಕಾರಣ, ವಿನಾಯಿತಿ ಅನ್ವಯಿಸುವುದಿಲ್ಲ. ರಾಣಾ ಅಪರಾಧ ಸಾಬೀತುಗೊಳಿಸಲು ಭಾರತವು ಸಾಕಷ್ಟು ಪುರಾವೆಗಳನ್ನು ಒದಗಿಸಿದೆ ಎಂದು ಸಮಿತಿ ಹೇಳಿದೆ.

ರಾಣಾಗೆ ಶಿಕ್ಷೆ: ಮುಂಬೈನಲ್ಲಿ ಭಾರಿ ಭಯೋತ್ಪಾದಕ ದಾಳಿ ನಡೆಸಿದ ಸಂಘಟನೆಗೆ ಬೆಂಬಲ ನೀಡಿದ ಆರೋಪದ ಮೇಲೆ ಪಾಕಿಸ್ತಾನಿ ಪ್ರಜೆ ರಾಣಾ ಅವರ ವಿಚಾರಣೆ ಯುಎಸ್ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಿತು. ಉಗ್ರ ಸಂಘಟನೆಗೆ ಬೆಂಬಲ ಮತ್ತು ಡೆನ್ಮಾರ್ಕ್‌ನಲ್ಲಿ ಭಯೋ ತ್ಪಾದಕ ದಾಳಿಗಳ ವಿಫಲ ಸಂಚಿಗೆ ಬೆಂಬಲ ನೀಡಿದ್ದಕ್ಕಾಗಿ ಜ್ಯೂರಿ ರಾಣಾಗೆ ಶಿಕ್ಷೆ ವಿಧಿಸಿತು. ಆದರೆ, ಭಾರತದಲ್ಲಿನ ದಾಳಿಗೆ ಬೆಂಬಲ ನೀಡಿದ ಆರೋಪದಲ್ಲಿ ಖುಲಾಸೆಗೊಳಿಸಲಾಗಿತ್ತು. ಏಳು ವರ್ಷಗಳ ಜೈಲುವಾಸ ಅನುಭವಿಸಿ, ಸಹಾನುಭೂತಿಯ ಬಿಡುಗಡೆ ನಂತರ, ಮುಂಬೈ ದಾಳಿಯಲ್ಲಿ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಸ್ತಾಂತರಿಸುವಂತೆ ಭಾರತ ವಿನಂತಿ ಮಾಡಿಕೊಂಡಿತ್ತು.

ರಾಣಾ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ, ಯುಎಸ್ ಹಸ್ತಾಂತರ ಒಪ್ಪಂದ ತಮಗೆ ಅನ್ವಯಿಸುವುದಿಲ್ಲ. ಭಾರತ ಸಾಕಷ್ಟು ಪುರಾವೆ ಒದಗಿಸಿಲ್ಲ ಎಂದು ಅವರು ವಾದಿಸಿದರು.

ಹಸ್ತಾಂತರ ನ್ಯಾಯಾಲಯ ರಾಣಾ ಅವರ ವಾದವನ್ನು ತಿರಸ್ಕರಿಸಿ, ಅವರನ್ನು ಹಸ್ತಾಂತರಿಸಬಹುದೆಂದು ಹೇಳಿತು. ರಾಣಾ ಮೇಲ್ಮನವಿ ಸಲ್ಲಿಸಿದ್ದರು. ಒಪ್ಪಂದದ ಸರಳ ನಿಯಮಗಳು, ಸಹಿ ಮಾಡಿದವರ ಅನುಮೋದನೆಯ ನಂತರದ ತಿಳಿವಳಿಕೆ ಮತ್ತು ಮನವೊಲಿಸುವ ಪೂರ್ವನಿದರ್ಶನಗಳು ಸರ್ಕಾರದ ವ್ಯಾಖ್ಯಾನವನ್ನು ಬೆಂಬಲಿಸುತ್ತವೆ ಎಂದು ನ್ಯಾಯಾಧೀಶ ಸ್ಮಿತ್ ಹೇಳಿದರು.

ʻಭಾರತದಲ್ಲಿ ವಿಧಿಸಿದ ಅಪರಾಧಗಳು ಅಮೆರಿಕದಲ್ಲಿ ರಾಣಾ ಅವರನ್ನು ವಿಚಾರಣೆಗೆ ಒಳಪಡಿಸಿದ ಅಂಶಗಳಿಗಿಂತ ಸ್ವತಂತ್ರ ಅಂಶಗಳನ್ನು ಒಳಗೊಂಡಿವೆ. ಹೀಗಾಗಿ, ಒಪ್ಪಂದವು ರಾಣಾ ಅವರ ಹಸ್ತಾಂತರಕ್ಕೆ ಅನುಮತಿ ನೀಡುತ್ತದೆ,ʼ ಎಂದು ನ್ಯಾಯಾಧೀಶ ಸ್ಮಿತ್ ಹೇಳಿದರು.

ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ರಾಣಾ ಅವರಿಗೆ ಕಾನೂನು ಆಯ್ಕೆಗಳಿವೆ.

Tags:    

Similar News