14ನೇ ಪೂರ್ವ ಏಷ್ಯಾ ಶೃಂಗಸಭೆ: ಗಾಜಾದಲ್ಲಿ 'ಸಂಯಮ', ಉಕ್ರೇನ್‌ನಲ್ಲಿ ರಾಜತಾಂತ್ರಿಕತೆಗೆ ಭಾರತ ಸಲಹೆ
ʻಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದರು. ಸಂಘರ್ಷ ಪರಿಹರಿಸಲು ಯಾವುದೇ ಕೊಡುಗೆ ನೀಡಲು ಭಾರತ ಸಿದ್ಧವಿದೆ,ʼ ಎಂದು ಎಸ್. ಜೈಶಂಕರ್ ಹೇಳಿದ್ದಾರೆ
ಉಕ್ರೇನ್‌ನಲ್ಲಿನ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ ಹಾಗೂ ಗಾಜಾದ ಮೇಲಿನ ಇಸ್ರೇಲ್‌ನ ಯುದ್ಧಕ್ಕೆ ಸಂಬಂಧಿಸಿದಂತೆ ಸಂಯಮ ವಹಿಸಬೇಕೆಂದು ಭಾರತ ಶನಿವಾರ (ಜುಲೈ 27) ಕರೆ ನೀಡಿದೆ.
ಲಾವೋಸ್‌ನ ರಾಜಧಾನಿ ವಿಯೆಂಟಿಯಾನ್‌ನಲ್ಲಿ 14ನೇ ಪೂರ್ವ ಏಷ್ಯಾ ಶೃಂಗಸಭೆಯ ವಿದೇಶಾಂಗ ಸಚಿವರ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಾತನಾಡಿದರು.
ಈ ಸಭೆಯು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಅಸೆಯಾನ್)ದ ಭಾಗವಾಗಿದೆ.
ಗಾಜಾದಲ್ಲಿ ಶಾಂತಿಗೆ ಸಹಕಾರ: ʻಗಾಜಾದಲ್ಲಿ ಸಂಯಮ ಕಾಯ್ದುಕೊಳ್ಳಬೇಕಿದೆ. ಭಾರತವು ಪ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವು ನೀಡುವುದನ್ನು ಮುಂದುವರಿಸಿದೆ. ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ವಿರುದ್ಧದ ನಡೆಯುತ್ತಿರುವ ದಾಳಿಗಳು ಕಳವಳಕಾರಿ,ʼ ಎಂದು ಜೈಶಂಕರ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ʻಭಾರತವು ಹಡಗುಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತನ್ನದೇ ಕೊಡುಗೆ ನೀಡುತ್ತಿದೆ,ʼ ಎಂದು ಅವರು ಹೇಳಿದರು.
ಯುಎನ್‌ಆರ್‌ಡಬ್ಲ್ಯುಎಗೆ ಹಣಸಹಾಯ: ಭಾರತವು ವಿಶ್ವಸಂಸ್ಥೆಯ ಪ್ಯಾಲೆಸ್ತೀನ್ ನಿರಾಶ್ರಿತರ ಪರಿಹಾರ ಮತ್ತು ಕಾರ್ಯ ಏಜೆನ್ಸಿ (ಯುಎನ್ ಆರ್ ಡಬ್ಲ್ಯುಎ)ಯ ಪ್ರಮುಖ ಕಾರ್ಯಕ್ರಮಗಳು ಮತ್ತು ಸೇವೆಗಳನ್ನು ಬೆಂಬಲಿಸಲು ಜುಲೈ 15 ರಂದು 2.5 ದಶಲಕ್ಷ ಡಾಲರ್ ನೆರವು ನೀಡಿದೆ. ಭಾರತ ನೀಡುವ ವಾರ್ಷಿಕ 5 ದಶಲಕ್ಷ ಡಾಲರ್ ನೆರವಿನ ಮೊದಲ ಕಂತು ಇದಾಗಿದೆ.
ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಪರಿಸರಿಸಲು ಎರಡು ರಾಜ್ಯದ ಪರಿಹಾರವನ್ನು ಬೆಂಬಲಿಸಿದೆ. ಮಾನವೀಯ ಆಧಾರದ ಮೇಲೆ ಗಾಜಾದಲ್ಲಿ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂದು ಹೇಳಿದೆ.
ಉಕ್ರೇನ್ ಸಮಸ್ಯೆಗೆ ಸಂವಾದ ಪರಿಹಾರ: ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವನ್ನು ಕೊನೆಗೊಳಿಸಲು ಸಂವಾದ ಮತ್ತು ರಾಜತಾಂತ್ರಿಕತೆ ಮಾರ್ಗದ ಪ್ರಾಮುಖ್ಯತೆಯನ್ನು ಜೈಶಂಕರ್ ಅವರು ಒತ್ತಿಹೇಳಿದರು. ʻಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದರು. ಸಂಘರ್ಷ ಪರಿಹರಿಸಲು ಯಾವುದೇ ಕೊಡುಗೆ ನೀಡಲು ಭಾರತ ಸಿದ್ಧವಿದೆ,ʼ ಎಂದು ಹೇಳಿದರು.