ಅಪಾಯದ ಅಂಚಿನಲ್ಲಿ ಅಕಾಡೆಮಿ-ಪ್ರಾಧಿಕಾರಗಳೆಂಬ ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತ ಸ್ಥಾನ-ಮಾನ?

Update: 2024-06-19 13:40 GMT

ಕರ್ನಾಟಕದಲ್ಲಿ ಸಾಂಸ್ಕೃತಿಕ ಸಂಸ್ಥೆಗಳಾದ ಅಕಾಡೆಮಿ, ಪ್ರಾಧಿಕಾರಗಳಿಗೆ ಸ್ವಾಯತ್ತ ಸ್ಥಾನಮಾನವಿದೆ ಎಂಬ ನಂಬಿಕೆ ಹುಸಿಯಾಗಿ ಬಹಳ ದಿನಗಳೇ ಆಗಿವೆ. ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಆಳುವ ಪಕ್ಷಗಳ ಮುಖವಾಣಿಯಂತೆ ವರ್ತಿಸಿದ ಈ ʼಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆʼಗಳನ್ನು ಕಂಡು ಸಾಂಸ್ಕೃತಿಕ ಲೋಕ ಮರುಗಿದಾಗ, ಮತ್ತೆ ಕಾಂಗ್ರೆಸ್‌ ಆಡಳಿತ ಬಂದರೆ, ಅವುಗಳ ಸ್ವತಂತ್ರ ಸ್ವಾಯತ್ತ ನಿಲುವುಗಳಿಗೆ ಮತ್ತೆ ಪುರಸ್ಕಾರ ದೊರೆಯಬಹುದೆಂಬ ನಂಬಿಕೆ ಇತ್ತು. ಆದರೆ ಮಂಗಳವಾರ ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಅವರು ಆಡಿದ ಮಾತುಗಳು, ಅವರು ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ ಸಾಂಸ್ಕೃತಿಕ ಸಂಸ್ಥೆಗಳಾದ ಅಕಾಡೆಮಿ, ಪ್ರಾಧಿಕಾರಗಳು ತಮ್ಮ ಸ್ವಾಯತ್ತ ಸ್ಥಾನಮಾನವನ್ನು ಕಳೆದುಕೊಳ್ಳುವ ದಿನ ದೂರವಿಲ್ಲ ಎನ್ನಿಸುತ್ತಿದೆ.

ಡಿ.ಕೆ. ಶಿವಕುಮಾರ್‌ ಅವರು ಆಡಿರುವ ಮಾತುಗಳನ್ನು ಗಮನಿಸಿ; “ ಸಾಹಿತ್ಯ, ಸಂಸ್ಕೃತಿಗೆ ಸೇರಿದ ಅಕಾಡೆಮಿಗಳು, ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳಲ್ಲ. ಎಲ್ಲರೂ ರಾಜಕಾರಣಿಗಳೇ. ಅವರದೇ ಆದ ಸಿದ್ಧಾಂತಗಳನ್ನಿಟ್ಟುಕೊಂಡು ಅವರೂ ರಾಜಕೀಯ ಮಾಡುತ್ತಾರೆ. ಆದರೆ, ಅದನ್ನು ಅವರು ಬಹಿರಂಗವಾಗಿ ಹೇಳಿಕೊಳ್ಳದೇ ಇರಬಹುದು. ಅವರಿಗೆ ಅವರದ್ದೇ ಅದ ಹಕ್ಕುಗಳಿವೆ.”.‌


ಉಪಮುಖ್ಯಮಂತ್ರಿ ಈ ಮಾತುಗಳನ್ನು ಹೇಳಿದ ಹಿನ್ನೆಲೆಯನ್ನು ನೊಡಿದರೆ, ಅದಕ್ಕೆ ಕಾರಣ. ಸಾಂಸ್ಕೃತಿಕ ಸಂಸ್ಥೆಗಳಾದ ಅಕಾಡೆಮಿ, ಪ್ರಾಧಿಕಾರಗಳಿಗೂ, ಸರ್ಕಾರ ಕೃಪಾಪೋಷಿತ ನಾಟಕ ಮಂಡಳಿಗಳಾದ, ರಾಜಕಾರಣದ ಪುನರ್ವಸತಿ ಕೇಂದ್ರಗಳೆಂದೇ ಆಗಿಬಿಟ್ಟಿರುವ ನಿಗಮ ಮಂಡಳಿಗಳಿಗೂ ವ್ಯತ್ಯಾಸ ತಿಳಿಯದ ಪಕ್ಷದ ಕಾರ್ಯದರ್ಶಿ ಮಾಡಿದ ತಪ್ಪಿನಿಂದಾಗಿ ಆದ ಪ್ರಮಾದವೊಂದನ್ನು ಸರಿಪಡಿಸಿಕೊಳ್ಳುವ ಇದ್ದ ಒಂದು ಅವಕಾಶ ಕೂಡ, ಈಗ ಶಿವಕುಮಾರ್‌ ಅವರ ಮಾತಿನಿಂದ ತಪ್ಪಿದಂತಾಗಿದೆ.

ಕಳೆದ ಶುಕ್ರವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಛೇರಿಯಲ್ಲಿ ಸಭೆಯೊಂದು ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ ನಿಗಮ-ಮಂಡಳಿ, ಪ್ರಾಧಿಕಾರದ ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರು “ನಿಮಗೆ ನೀಡಿರುವ ಈ ಹುದ್ದೆಗಳು ರಾಜಕಾರಣಕ್ಕೆ ಮೆಟ್ಟಿಲುಗಳಾಗಿದ್ದು, ಕೈ ಬಾಯಿ ಶುದ್ಧವಿರಬೇಕು” ಎಂದು ಕಿವಿ ಮಾತು ಹೇಳಿದ್ದು, ನಿಗಮ-ಮಂಡಳಿಗಳ ಅಧ್ಯಕ್ಷರು ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರವಾಗಿ ಸಕ್ರೀಯ ಪಾತ್ರವಹಿಸಬೇಕೆಂದು ಸೂಚಿಸಿರುವ ಮಾತುಗಳು “ಈಗ ವಿವಾದಕ್ಕೆ ಕಾರಣವಾಗಿದೆ.

ನಾಡಿನ ಪ್ರಮುಖ ಪತ್ರಿಕೆಗಳು ಸಂಪಾದಕೀಯ ಬರೆದು, ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ರಾಜ್ಯ ಅಧ್ಯಕ್ಷರ ನಡೆ-ನುಡಿ ಎರಡನ್ನೂ ಖಂಡಿಸಿವೆ. ಸಾಂಸ್ಕೃತಿಕ ರಂಗದ ರಾಜಕೀಕರಣ, ಸಾಂಸ್ಕೃತಿಕ ರಂಗದ ಅಧಃಪತನದ ಪರಾಕಾಷ್ಟೆ, ಕಾಂಗ್ರೆಸ್‌ ಸರ್ಕಾರ ಅನಿಷ್ಠ ಪದ್ಧತಿಯನ್ನು ಹುಟ್ಟುಹಾಕಿದೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ನಡುವೆ ನಡೆದ ಸಭೆಯಲ್ಲಿ ಭಾಗವಹಿಸಿದ್ದನ್ನು ಸಮರ್ಥಿಸಿಕೊಂಡ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್. ಎನ್.‌ ಮುಕುಂದರಾಜ್‌ ಅವರು, “ ಕಾಂಗ್ರೆಸ್‌ ಪಕ್ಷವನ್ನು ಸರಿದಾರಿಗೆ ತರುವ ಜವಾಬ್ದಾರಿ ನಮ್ಮಂಥವರ ಮೇಲಿದ್ದು, ನಾವು ಕೊಳೆಗೇರಿಗೂ, ಕಾಂಗ್ರೆಸ್‌ ಕಛೇರಿಗೂ ಹೋಗಲು ತಯಾರಿದ್ದೇವೆ” ಎಂದಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಕೊಳೆಗೇರಿಗೆ ಹೋಗುವುದರಲ್ಲಿ ಯಾವುದೇ ಅಭ್ಯಂತರವಿಲ್ಲ, ಅವರು ತಮ್ಮ ಸ್ಥಾನದ ಗೌರವವನ್ನು ಗಮನದಲ್ಲಿಟ್ಟುಕೊಂಡಾದರೂ, ಕಾಂಗ್ರೆಸ್‌ ಕಛೇರಿಗೆ ಹೋಗುವುದು ಸರಿಯಲ್ಲ ಎಂದು ಹೇಳದೆ ಬೇರೆ ದಾರಿಯಿಲ್ಲ ಎನ್ನುವುದು ಟೀಕಾಕಾರರ ಪ್ರತ್ಯಸ್ತ್ರ.

ಆದರೆ, ಎಲ್ಲರೂ ಕೇಳುತ್ತಿರುವುದು. ಅಕಾಡೆಮಿಗಳು-ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳಲ್ಲ ಎಂಬ ʼತೀರ್ಪುʼ ಡಿ.ಕೆ. ಶಿವಕುಮಾರ್‌ ಅವರದ್ದೇ? ಅಥವಾ ಕಾಂಗ್ರೆಸ್‌ ಪಕ್ಷದ್ದೇ? ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಮತವಿದೆಯೇ? ಎಂಬ ಪ್ರಶ್ನೆ.

ಸಾಂಸ್ಕೃತಿಕ ನೀತಿ ಜಾರಿಗೆ ತಂದ ಕಾಂಗ್ರೆಸ್

ಈ ಪ್ರಶ್ನೆಗೆ ಕಾರಣವಿಲ್ಲದಿಲ್ಲ. ದೇಶದಲ್ಲಿ ಮೊಟ್ಟ ಮೊದಲು ಸಾಂಸ್ಕೃತಿಕ ನೀತಿ ಜಾರಿಗೆ ತಂದ ರಾಜ್ಯ -ಕರ್ನಾಟಕ. ಈ ಸಾಂಸ್ಕೃತಿಕ ನೀತಿಯಲ್ಲಿ, ಸಾಂಸ್ಕೃತಿಕ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಸ್ವಾಯತ್ತತೆ ಇರಬೇಕೆಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್‌, ಲೇಖಕ ಮತ್ತು ಪ್ರಖರ ವಿಚಾರವಂತರಾದ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ಸಲ್ಲಿಸಿದ ವರದಿಯನ್ನು, ಭಾಗಶಃವಾಗಿಯಾದರೂ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದೆ.

ಇಂಥ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಯೋಚಿಸುವ ಕಾಂಗ್ರೆಸ್‌ ಸರ್ಕಾರಕ್ಕೆ, ಅದರಲ್ಲೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೀಗೇಕೆ ನಡೆದುಕೊಳ್ಳುತ್ತಿದ್ದಾರೆ? ಎಂಬುದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ. ಕಳೆದ ಶುಕ್ರವಾರ ಈ ಸಭೆಯನ್ನು ಶಿವಕುಮಾರ್‌ ಅವರು ಕರೆದದ್ದು ಏಕೆ? ಎಂದು ಸಭೆಯಲ್ಲಿ ಭಾಗವಹಿಸಿದವರನ್ನು ಪ್ರಶ್ನಿಸಿದರೆ ಸಿಕ್ಕುವ ಉತ್ತರವೇ ಬೇರೆ.

ಹೀಗೇಕೆ ಮಾಡಿದಿರಿ? ಸಾಂಸ್ಕೃತಿಕ ಜಗತ್ತಿನ ಘನತೆಯನ್ನು ಉಳಿಸಬೇಕಾದ ನೀವೇ ಕಾಂಗ್ರೆಸ್‌ ಕಛೇರಿಗೆ ಹೋದದ್ದು ಸರಿಯೇ? ಎಂದು ಇತ್ತೀಚೆಗಷ್ಟೇ ಕರ್ನಾಟಕ ನಾಟಕ ಆಕಾಡೆಮಿಯ ಅಧ್ಯಕ್ಷರಾದ ನಾಗರಾಜಮೂರ್ತಿ ಅವರನ್ನು ದ ಫೆಡರಲ್‌ ಕರ್ನಾಟಕ ಪ್ರಶ್ನಿಸಿತು. ಪ್ರಶ್ನೆಗೆ ನಾಗರಾಜಮೂರ್ತಿ ನೀಡಿದ ಉತ್ತರ ಮಾತ್ರ ಅಚ್ಚರಿ ಹುಟ್ಟಿಸುವಂತಿತ್ತು.

“ಜೂನ್‌ ೧೪ರಂದು ಸಂಜೆ ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿ ನನಗೆ ಕರೆ ಮಾಡಿ ಉಪಮುಖ್ಯಮಂತ್ರಿಗಳು ಎಲ್ಲ ಅಕಾಡೆಮಿಯ ಪ್ರಾಧಿಕಾರದ ಅಧ್ಯಕ್ಷರನ್ನು ಭೇಟಿ ಮಾಡಲು ಇಚ್ಛಿಸಿದ್ದಾರೆ. ದಯವಿಟ್ಟು ಬನ್ನಿ ಎಂದು ಕರೆದದ್ದು ಸತ್ಯ. ನಾವು ಹೋಗಬೇಕೋ? ಬೇಡವೋ? ಎಂಬ ಗೊಂದಲದಲ್ಲಿಯೇ ಅಲ್ಲಿಗೆ ಹೋದೆವು. ನಂತರ ಉಪಮುಖ್ಯಮಂತ್ರಿಗಳು ಸಭೆ ಆರಂಭಿಸಿದಾಗಲೇ ನಮಗೆ ಗೊತ್ತಾದ ಸಂಗತಿ ಈ ಸಭೆ ನಮಗಾಗಿ ಕರೆದದ್ದಲ್ಲ ಎಂಬದು. ಏಕೆಂದರೆ ಸಭೆಯಲ್ಲಿ ಸಾಂಸ್ಕೃತಿಕ ಅಕಾಡೆಮಿ ಮತ್ತು ಪ್ರಾಧಿಕಾರದ ಬಗ್ಗೆ ಯಾವುದೇ ರೀತಿಯ ಚರ್ಚೆಯೂ ನಡೆಯಲಿಲ್ಲ” ಎಂದು ನಾಗರಾಜಮುರ್ತಿ ಸ್ಪಷ್ಟಪಡಿಸಿದರು.

ತಮ್ಮ ವಿವರಣೆ ಮುಂದುವರೆಸಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರು; “ ನಂತರ ನಾನು ಮತ್ತು ಎಲ್.‌ ಎನ್.‌ ಮುಕುಂದರಾಜ್‌ ಅವರು ʼಉಪಮುಖ್ಯಮಂತ್ರಿಗಳು ಕಾಂಗ್ರೆಸ್‌ ಕಛೇರಿಯಲ್ಲಿ ಅಕಾಡೆಮಿ ಮತ್ತು ಪ್ರಾಧಿಕಾರದ ಅಧ್ಯಕ್ಷರನ್ನು ಕಾಂಗ್ರೆಸ್‌ ಕಛೇರಿಗೆ ಕರೆಯಬಾರದು. ವಿಧಾನ ಸೌಧದಲ್ಲಿಯೋ, ಕನ್ನಡ ಭವನದಲ್ಲಿಯೇ ಕರೆಯುವುದು ಸರಿಯಾದ ಸಂಪ್ರದಾಯ ಎಂದಾಗ, ಡಿ. ಕೆ. ಶಿವಕುಮಾರ್‌ ಅವರಿಗೆ ಅಚ್ಚರಿ. ನಾನು ನಿಮ್ಮನ್ನು ಈ ಸಭೆಗೆ ಕರೆದೇ ಇಲ್ಲ. ನಾನು ಕರೆದದ್ದು, ಸರ್ಕಾರದಿಂದ ನೇಮಕಗೊಂಡಿರುವ ಮಂಡಳಿ ಮತ್ತು ಪ್ರಾಧಿಕಾರದ ಅಧ್ಯಕ್ಷರುಗಳನ್ನು ಮಾತ್ರ. ನಿಮ್ಮನ್ನು ನೋಡಿ ನನಗೂ ಅಚ್ಚರಿಯಾಯಿತು ಎಂದು ಉಪಮುಖ್ಯಮಂತ್ರಿ ಹೇಳಿದರು. ಅಷ್ಟೇ ಅಲ್ಲ. ಸಾಂಸ್ಕೃತಿಕ ಕ್ಷೇತ್ರವನ್ನು ಹಸನು ಮಾಡಲು ಯಾವುದೇ ಸಲಹೆ-ಸೂಚನೆಗಳನ್ನು ನೀವು ನಮಗೆ ಕೊಡಬಹುದು ಎಂದು ವಿನಯದಿಂದಲೇ ಹೇಳಿದರು. ನಾವು ಅಲ್ಲಿಂದ ಹೊರಟು ಬಂದೆವು. ನಾವು ಕಛೇರಿಗೆ ಬಂದ ನಂತರ ನಮಗೆ ಸಿಕ್ಕಿದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪತ್ರ ನೋಡಿ ದಿಗ್ಭ್ರಮೆಯಾಯಿತು. ಪಕ್ಷದ ಕಾರ್ಯಾಧ್ಯಕ್ಷರು (ಆಡಳಿತ) ಜಿ.ಸಿ. ಚಂದ್ರಶೇಖರ್‌ ಅವರು ಬರೆದ ಪತ್ರದಲ್ಲಿ ಆಹ್ವಾನವಿದ್ದದ್ದು, ನಿಗಮ ಮಂಡಳಿ ಅಧ್ಯಕ್ಷರಿಗೆ ಮಾತ್ರ” -ಎಂದು ಪತ್ರವನ್ನು ತೋರಿಸಿದರು.

ಪತ್ರದ ವಿವರ ಈ ರೀತಿ ಇದೆ: “ಮುಂಬರುವ ಚುನಾವಣಾ ಪೂರ್ವಸಿದ್ಧತೆ, ಪಕ್ಷದ ಸಂಘಟನೆ ಮತ್ತು ಬಲವರ್ಧನೆ, ಇನ್ನಿತರ ಪಕ್ಷ ಸಂಘಟನಾತ್ಮಕ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ಸಲುವಾಗಿ ದಿನಾಂಕ 14-06-2024 ರಂದು ಶುಕ್ರವಾರ ಮಧ್ಯಾಹ್ನ 03 ಗಂಟೆಗೆ ಬೆಂಗಳೂರು ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಛೇರಿಯ ಹಿಂಭಾಗದ “ಭಾರತ್‌ ಜೋಡೋ” ಭವನದಲ್ಲಿ ನಿಗಮ-ಮಂಡಳಿಗಳ ಅಧ್ಯಕ್ಷರ ಸಭೆಯನ್ನು ಕರೆಯಲಾಗಿದೆ. ಮಾನ್ಯ ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ ಶಿವಕುಮಾರ್‌ ವಹಿಸಲಿದ್ದಾರೆ. ಪತ್ರದಲ್ಲಿನ ವಿಷಯ ಸೂಚಿ ಕೂಡ ಕೇವಲ ನಿಗಮ ಮಂಡಳಿಗಳ ಕುರಿತಾಗಿತ್ತು. “ಆದರೆ, ಕೆಪಿಸಿಸಿ ಕಾರ್ಯದರ್ಶಿ ಮಾಡಿದ ಅನರ್ಥದಿಂದ ಅಕಾಡೆಮಿ ಪ್ರಾಧಿಕಾರದ ಅಧ್ಯಕ್ಷರೂ ಭಾಗವಹಿಸಬೇಕಾಗಿ ಬಂದಿತು. ಆದರೆ ಯಾವದೇ ಕಾರಣಕ್ಕೂ ಕಾಂಗ್ರೆಸ್‌ ಕಛೇರಿಯ ಮೆಟ್ಟಿಲು ಹತ್ತಕೂಡದೆಂದು ನಿರ್ಧರಿಸಿದ್ದ ಕೆಲವು ಸ್ವಾಭಿಮಾನಿ ಅಧ್ಯಕ್ಷರುಗಳು ಈ ಸಭೆಗೆ ಹಾಜರಾಗಲಿಲ್ಲ. ಹಾಗೆ ಸಭೆಗೆ ಹೋದ ಕೆಲವು ಅಕಾಡೆಮಿಯ ಅಧ್ಯಕ್ಷರ ಅತ್ಯುತ್ಸಾಹದಿಂದ ಎಲ್ಲರೂ ಮುಜುಗರ ಎದುರಿಸಬೇಕಾಯಿತು.” ಎಂದು ನಾಗರಾಜಮೂರ್ತಿ ಹೇಳಿದರಲ್ಲದೆ, ಪತ್ರದ ಪ್ರತಿಯನ್ನೂ ನೀಡಿದರು.

ರಾಜಕೀಯ ಪಕ್ಷದ ಕಛೇರಿಯಲ್ಲಿ ಹಿಂದೆಂದೂ ಇಂಥ ಸಭೆ ನಡೆದಿರಲಿಲ್ಲ. ಅಕಾಡೆಮಿ ಮತ್ತು ಪ್ರಾಧಿಕಾರದ ಅಧ್ಯಕ್ಷರುಗಳು ಆಡಳಿತ ಪಕ್ಷದ ಕಛೇರಿಯಲ್ಲಿ ಕುಳಿತು, ರಾಜಕಾರಣಿಯೊಬ್ಬರಿಂದ ಪಾಠ ಹೇಳಿಸಿಕೊಳ್ಳುವಂಥ ಸ್ಥಿತಿ ಇದುವರೆಗೆ ಕರ್ನಾಟಕ ಕಂಡಿಲ್ಲ. ಅಷ್ಟೇ ಅಲ್ಲ, ಇದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಗೈರು ಹಾಜರಿಯಲ್ಲಿ ನಡೆದಿದೆ ಎಂಬುದು ಮುಖ್ಯವಾದ ಸಂಗತಿ. ಉಪಮುಖ್ಯಮಂತ್ರಿ, ಸಂಬಂಧಿಸಿದ ಖಾತೆಯ ಸಚಿವರ ಗಮನಕ್ಕೂ ತರದೆ, ಈ ರೀತಿಯ ಸಭೆ ನಡೆಸಿದ್ದು, ಸಾಂಸ್ಕೃತಿಕ ಮೌಲ್ಯಗಳಿಗೆ ತಂದಿರುವ ಧಕ್ಕೆ ಎಂಬ ಮಾತುಗಳು ಕಾಂಗ್ರೆಸ್‌ ಪಕ್ಷದ ಸೂಕ್ಷ್ಮ ಮನಸ್ಸಿನ ನಾಯಕರ ಅನಿಸಿಕೆ.

“ಸಾಹಿತಿ-ಕಲಾವಿದರನ್ನು ಕರೆಸಿದ್ದು ನಾನೇ”

ಇಷ್ಟರ ನಡುವೆ ಅಕಾಡೆಮಿ-ಪ್ರಾಧಿಕಾರಗಳ ಅಧ್ಯಕ್ಷರು ಕಾಂಗ್ರೆಸ್‌ ಸಭೆಯಲ್ಲಿ ಭಾಗವಹಿಸಿದ್ದು, ಸಾಂಸ್ಕೃತಿಕ ವಲಯದಲ್ಲಿ ಸಾಕಷ್ಟ ಟೀಕೆ ಟಿಪ್ಪಣಿಗಳಿಗೆ ಕಾರಣವಾಯಿತು. ಕಾಲ ಮಿಂಚಿತ್ತು. ಪತ್ರಿಕೆಗಳಲ್ಲಿ ಪ್ರಕಟವಾದ ಟೀಕೆಗಳಿಂದ ವ್ಯಘ್ರರಾದ ಶಿವಕುಮಾರ್‌, ಮಂಗಳವಾರ “ಕಾಂಗ್ರೆಸ್‌ ಪಕ್ಷದ ಕಛೇರಿಗೆ ಸಾಹಿತಿಗಳನ್ನು ಕರೆದು ಸಭೆ ನಡೆಸಿದ್ದು ನಾನೇ. ಅದರಲ್ಲಿ ತಪ್ಪೇನಿದೆ? ಮಾಧ್ಯಮದವರಿಗೆ ತಪ್ಪು ಎನ್ನಿಸಬಹುದು. ಸಾಹಿತಿಗಳೂ ರಾಜಕಾರಣಿಗಳೇ, ಅವರೂ ರಾಜಕಾರಣಕ್ಕೆ ಬರಬಹುದು…”. ಶಿವಕುಮಾರ್‌ ಅವರು ಇಷ್ಟಕ್ಕೆ ಸುಮ್ಮನಾಗಿಲ್ಲ. “ಪಕ್ಷದ ಕಛೇರಿಗೆ ಕರೆಸಿದ್ದು ಮಾಧ್ಯಮದವರಿಗೆ ಸರಿಯಿಲ್ಲ ಎನ್ನಿಸಿರಬಹುದು. ಇದು ಸರ್ಕಾರದ ನೇಮಕಾತಿ. ಹಾಗಾಗಿ ಅಕಾಡೆಮಿ, ಪ್ರಾಧಿಕಾರ, ಮಂಡಳಿ, ನಿಗಮಗಳ ಅಧ್ಯಕ್ಷರನ್ನು ಎಲ್ಲಿಗೆ ಬೇಕಾದರೂ ಕರೆಸಿಕೊಳ್ಳಬಹುದು. ಎಲ್ಲಿ ಬೇಕಾದರೂ ಸಭೆ ಮಾಡಬಹುದು. ಅವರೂ (ಸಾಹಿತಿಗಳು-ಕಲಾವಿದರು) ರಾಜಕಾರಣಿಗಳಾಗಬಾರದು ಎಂದು ಎಲ್ಲಾದರೂ ಇದೆಯೇ? ಎಂದು ಪ್ರಶ್ನಿಸಿ ಮತ್ತಷ್ಟು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅವರು ತಮ್ಮ ಈ ವಿಪರೀತ ಚಿಂತನೆಯನ್ನ್ ಮಾಧ್ಯಮದವರೆಗೂ ಎಳೆದು ತಂದು, ಪತ್ರಕರ್ತರು “ಮಾಧ್ಯಮ ಸಲಹೆಗಾರ”ರಾಗಲು ನಡೆಸಿದ, ನಡೆಸುತ್ತಿರುವ ಲಾಬಿ ಬಗ್ಗೆ ಕೂಡ ಪ್ರಸ್ತಾಪಿಸಿ, ಒಂದು ವರ್ಗದ ಸಾಹಿತಿಗಳು, ಕಲಾವಿದರು, ಪತ್ರಕರ್ತರ ಮುಖವಾಡ ಕಳೆಚಲು ಹೋಗಿ, ಇಡೀ ಸಾಂಸ್ಕೃತಿಕ ಸಮುದಾಯವನ್ನೇ ಎದುರು ಹಾಕಿಕೊಂಡಿದ್ದಾರೆ.

“ಈಗಿರುವ ಪ್ರಶ್ನೆಯೆಂದರೆ. ಆಸ್ಥಾನ ಸಾಹಿತಿ, ಕಲಾವಿದರನ್ನು ಹೊರತು ಪಡಿಸಿ, ಉಳಿದವರು ಶಿವಕುಮಾರ್‌ ಅವರ ಮಾತುಗಳಿಗೆ ಯಾವ ಉತ್ತರ ನೀಡುತ್ತಾರೆ? ಇದು ಶಿವಕುಮಾರ್‌ ಅವರ ಮಾತೇ? ಅಥವಾ ಕಾಂಗ್ರೆಸ್‌ ಸರ್ಕಾರದ ಮಾತೇ ಸ್ಪಷ್ಟವಾಗಬೇಕು. “ಶಿವಕುಮಾರ್‌ ಅವರ ಈ ನಿಲುವಿಗೆ ಸಾಂಸ್ಕೃತಿಕ ನೀತಿಯನ್ನು ರೂಪಿಸಿದ ಕಾಂಗ್ರೆಸ್‌ ಸರ್ಕಾರದ ಉತ್ತರವೇನು? ಸಾಂಸ್ಕೃತಿಕ ನೀತಿಯನ್ನುರೂಪಿಸಿದ ಸಮಿತಿ ಸರ್ಕಾರದ ಅಥವಾ ಶಿವಕುಮಾರ್‌ ಅವರ ನಿಲುವಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಕಾಂಗ್ರೆಸ್‌ ಸರ್ಕಾರದ ಸಾಂಸ್ಕೃತಿಕ ಸಂಗತಿಗಳ ಬದ್ಧತೆ ತೀರ್ಮಾನವಾಗುತ್ತದೆ” ಎನ್ನುತ್ತಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಹಾಗೂ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮೊದಲ ಅಧ್ಯಕ್ಷರಾದ ಟಿ.ಎಸ್.‌ ನಾಗಾಭರಣ.

ಅಕಾಡೆಮಿಗಳ, ಪ್ರಾಧಿಕಾರದ ಅಧ್ಯಕ್ಷರ ಉತ್ತರದಾಯಿತ್ವ ಇರಬೇಕಾದುದು, ನಾಡಿನ ಸಂಸ್ಕೃತಿಗೆ ಮತ್ತು ಅದರ ಹಕ್ಕುದಾರರಾದ ಜನರಿಗೆ. ಇವರ ಗೌರವ ಮತ್ತು ಘನತೆಯನ್ನು ಕುಗ್ಗಿಸುವ ಕೆಲಸವನ್ನು ಯಾವುದೇ ಸರ್ಕಾರ ಕೂಡ ಮಾಡಬಾರದು, ಮಾಡಕೂಡದು. ಸರ್ಕಾರ ಮುಖ್ಯವಾಗಿ ಶಿವಕುಮಾರ್‌ ರಂಥ ರಾಜಕಾರಣಿಗಳು ಸಾಂಸ್ಕೃತಿಕ ವಲಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಹಾಗೆಯೇ ಅಕಾಡೆಮಿಗಳ, ಪ್ರಾಧಿಕಾರಗಳ ಅಧ್ಯಕ್ಷರು ಸರ್ಕಾರವನ್ನು ಓಲೈಸುವ ತಮ್ಮ ನಡವಳಿಕೆ ಕಡಿವಾಣ ಹಾಕಿಕೊಳ್ಳಬೇಕು ಎನ್ನುವುದು ಕರ್ನಾಟಕದ ಸಾಂಸ್ಕೃತಿಕ ಜಗತ್ತಿನ ಎಲ್ಲರ ಕ್ರೂಢೀಕೃತ ಅಭಿಪ್ರಾಯ.

Tags:    

Similar News