ದೇಶದ್ರೋಹ ಕಾನೂನಿನ ದುರ್ಬಳಕೆ: ಎನ್ಸಿಆರ್ಬಿ ವರದಿಯಿಂದ ಬಹಿರಂಗ

ವಸಾಹತು ಕಾಲದ ಅಂತಹ ಕರಾಳ ಕಾನೂನುಗಳು ದೇಶಬಾಂಧವ ಆಡಳಿತಗಾರರ ಕೈಯಲ್ಲಿ ಬ್ರಿಟಿಷರಿಗಿಂತ ಅಪಾಯಕಾರಿಯಾಗಿ ಬಳಕೆಯಾಗುತ್ತಿವೆ. ಈ ಸಂಗತಿಯನ್ನು ಸ್ವತಃ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್ ಸಿ ಆರ್ ಬಿ) ಬಹಿರಂಗಪಡಿಸಿದ ಮಾಹಿತಿಯೇ ಸಾರಿ ಹೇಳುತ್ತಿದೆ.;

Update: 2024-02-05 06:30 GMT

ಭಾರತೀಯರನ್ನು ಬಗ್ಗುಬಡಿಯಲು ಬ್ರಿಟಿಷರು ಬಳಸುತ್ತಿದ್ದ ಕರಾಳ ಕಾನೂನುಗಳು ದೇಶ ಸ್ವಾತಂತ್ರ್ಯ ಗಳಿಸುತ್ತಲೇ ಮೂಲೆಗುಂಪಾಗಬೇಕಿತ್ತು. ಆದರೆ, ದೇಶದ ಜನ ತಾವೇ ಮತ ಹಾಕಿ, ತಮ್ಮದೇ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ತಮ್ಮದೇ ಸರ್ಕಾರವನ್ನು ರಚಿಸಿ, ಆಡಳಿತ ನಡೆಸುತ್ತಾ ೭೫ ವರ್ಷ ಕಳೆದರೂ ಅದೇ ಕಾನೂನುಗಳಿಗೆ ಕೊರಳೊಡ್ಡುತ್ತಿದ್ದಾರೆ!

ವಿಪರ್ಯಾಸವೆಂದರೆ, ವಸಾಹತು ಕಾಲದ ಅಂತಹ ಕರಾಳ ಕಾನೂನುಗಳು ದೇಶಬಾಂಧವ ಆಡಳಿತಗಾರರ ಕೈಯಲ್ಲಿ ಬ್ರಿಟಿಷರಿಗಿಂತ ಅಪಾಯಕಾರಿಯಾಗಿ ಬಳಕೆಯಾಗುತ್ತಿವೆ. ಈ ಸಂಗತಿಯನ್ನು ಸ್ವತಃ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್ ಸಿ ಆರ್ ಬಿ) ಬಹಿರಂಗಪಡಿಸಿದ ಮಾಹಿತಿಯೇ ಸಾರಿ ಹೇಳುತ್ತಿದೆ.

2019-2022ರ ಮಧ್ಯೆ ದೇಶದಾದ್ಯಂತ ದಾಖಲಾದ ದೇಶದ್ರೋಹದ ಪ್ರಕರಣಗಳು ತನಿಖೆ ಮತ್ತು ವಿಚಾರಣೆ ಹಂತದಲ್ಲೇ ಕೊಳೆಯುತ್ತಿವೆ. ತನಿಖೆ ಮತ್ತು ನ್ಯಾಯಾಲಯದ ಹಂತದಲ್ಲಿ ವಿಲೇವಾರಿಯಾದ ಪ್ರಕರಣಗಳ ಪ್ರಮಾಣ ತೀರಾ ಕಡಿಮೆ ಇದೆ. ಆದರೆ ಈ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದವರಲ್ಲಿ ಬಹುತೇಕ ಮಂದಿ ಇತ್ತ ಬಿಡುಗಡೆಯೂ ಆಗದೆ. ಅತ್ತ ಶಿಕ್ಷೆಯೂ ಅಗದೆ ಜೈಲುಗಳಲ್ಲೇ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ.

ಎನ್ಸಿಆರ್ಬಿ ವರದಿಯಲ್ಲಿ ಏನಿದೆ?

2019ರಿಂದ 2022ರ ಮಧ್ಯೆ ದೇಶದಾದ್ಯಂತ ದೇಶದ್ರೋಹದ (ಐಪಿಸಿ ಸೆಕ್ಷನ್ 124ಎ) ಕಾನೂನಿನ ಅಡಿಯಲ್ಲಿ ಪೊಲೀಸರು ಒಟ್ಟು 262 ಪ್ರಕರಣಗಳನ್ನು ದಾಖಲಿಸಿದ್ದಾರೆ. 2019ಕ್ಕೂ ಮುನ್ನ ಈ ಸೆಕ್ಷನ್ ಅಡಿಯಲ್ಲಿ ದಾಖಲಾಗಿದ್ದ ಮತ್ತು ಹೊಸದಾಗಿ ದಾಖಲಾದವೂ ಸೇರಿ ಪೊಲೀಸರು 965 ಪ್ರಕರಣಗಳಲ್ಲಿ ತನಿಖೆ ನಡೆಸಿದ್ದಾರೆ. 2019ರ ಜನವರಿಯಿಂದ 2022ರ ಡಿಸೆಂಬರ್ ಅಂತ್ಯದವರೆಗೆ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದು 196 ಪ್ರಕರಣಗಳಲ್ಲಿ ಮಾತ್ರ. ಉಳಿದ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದ ಜನರು ಇನ್ನೂ ಜೈಲುಗಳಲ್ಲೇ ಇದ್ದಾರೆ.

196 ಪ್ರಕರಣಗಳನ್ನು ಪೊಲೀಸರು ವಿಲೇವಾರಿ ಮಾಡಿದ್ದರೂ ಅವುಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿ, ನ್ಯಾಯಾಲಯಕ್ಕೆ ವಿಚಾರಣೆಗೆ ಹೋಗಿದ್ದು 103 ಪ್ರಕರಣಗಳು, 58 ಪ್ರಕರಣಗಳನ್ನು ಸಾಕ್ಷ್ಯದ ಕೊರತೆ ಎಂದು ಮತ್ತು 35 ಪ್ರಕರಣಗಳನ್ನು ಸುಳ್ಳು ಎಂದು ಪೊಲೀಸರೇ ವಜಾ ಮಾಡಿದ್ದಾರೆ. ಆದರೆ 769 ಪ್ರಕರಣಗಳು ಪೊಲೀಸರ ಬಳಿ ತನಿಖೆಯ ಹಂತದಲ್ಲೇ ಉಳಿದಿವೆ. ಇವೆಲ್ಲವೂ ಬಹಳ ಹಳೆಯ ಪ್ರಕರಣಗಳಾದರೂ ತನಿಖೆ ಪೂರ್ಣಗೊಳ್ಳದೆ ಇರುವುದು, ಅವೆಲ್ಲವೂ ಸುಳ್ಳು ಪ್ರಕರಣಗಳು ಇರಬಹುದು ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

2019ಕ್ಕೂ ಹಿಂದೆಯೇ ಮತ್ತು 2019-2022ರ ಅವಧಿಯಲ್ಲಿ ನ್ಯಾಯಾಲಯಗಳ ಬಳಿ ಒಟ್ಟು 492 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದವು. ಇವುಗಳಲ್ಲಿ 48 ಪ್ರಕರಣಗಳನ್ನು ಮಾತ್ರ ನ್ಯಾಯಾಲಯಗಳು ವಿಲೇವಾರಿ ಮಾಡಿವೆ. ಆದರೆ, ಉಳಿದ 444 ಪ್ರಕರಣಗಳಲ್ಲಿ ಆರೋಪಿಗಳು ಸೆರೆವಾಸ ಅಥವಾ ಜಾಮೀನಿನ ಮೇಲೆ ಹೊರಗಿದ್ದಾರೆ.

ವಿಲೇವಾರಿ ಮಾಡಿದ 48 ಪ್ರಕರಣಗಳಲ್ಲಿ 37 ಪ್ರಕರಣಗಳು ಖುಲಾಸೆಯಲ್ಲಿ ಅಂತ್ಯವಾಗಿದ್ದರೆ, 7 ಪ್ರಕರಣಗಳನ್ನು ನ್ಯಾಯಾಲಯಗಳು ವಜಾ ಮಾಡಿವೆ. ಶಿಕ್ಷೆಯಾಗಿದ್ದು ಕೇವಲ 5 ಪ್ರಕರಣಗಳಲ್ಲಿ ಮಾತ್ರ! ನ್ಯಾಯಾಲಯವು ವಿಲೇವಾರಿ ಮಾಡಿದ ದೇಶದ್ರೋಹದ ಪ್ರಕರಣಗಳಲ್ಲಿ ಬಹುತೇಕವು ಬಿದ್ದುಹೋಗುತ್ತವೆ ಎಂದು ಈ ದತ್ತಾಂಶಗಳು ಹೇಳುತ್ತವೆ.

ಈ ಎಲ್ಲಾ ಅಂಶಗಳು ದೇಶದ್ರೋಹದ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನೇ ಸೂಚಿಸುತ್ತವೆ. ಪೊಲೀಸರು ದಾಖಲಿಸಿದ ಒಟ್ಟು ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು (ಶೇ.80ರಷ್ಟು) ನ್ಯಾಯಾಲಯಕ್ಕೆ ಬರುತ್ತಲೇ ಇಲ್ಲ ಎಂಬ ಅಂಶವೂ ದುರ್ಬಳಕೆ ಆರೋಪವನ್ನು ಪುಷ್ಟೀಕರಿಸುತ್ತದೆ.

ಗೃಹ ಸಚಿವರೇ ಸುಳ್ಳು ಹೇಳಿದ್ದರೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ, ದೇಶದ್ರೋಹದ ಕಾನೂನನ್ನು ಸಂಪೂರ್ಣವಾಗಿ ರದ್ದುಪಡಿಸಿದ್ದೇವೆ ಎಂದು ಹೇಳಿದ್ದರು. ನಿಜಾಂಶ ಏನೆಂದರೆ ಆ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ.

ಐಪಿಸಿ ಸೆಕ್ಷನ್ 124ಎ ಅನ್ನು ಮಾತ್ರ ರದ್ದುಪಡಿಸಲಾಗಿದೆ. ಆದರೆ ಈ ಸೆಕ್ಷನ್ ಅಡಿಯಲ್ಲಿ ವಿವರಿಸಲಾಗಿದ್ದ 'ದೇಶದ್ರೋಹ'ದ ವ್ಯಾಖ್ಯಾನವನ್ನು ಹೊಸದಾಗಿ ರೂಪಿಸಲಾಗಿದ್ದ 150ನೇ ಸೆಕ್ಷನ್ನ ಅಡಿಯಲ್ಲಿ ಸೇರಿಸಲಾಗಿದೆ. ನೂತನ ಸೆಕ್ಷನ್ನಲ್ಲಿ 'ದೇಶದ್ರೋಹ' ಎಂಬುದನ್ನು `ಭಾರತದ ಒಗ್ಗಟ್ಟು, ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತರುವಂತಹ ಕೃತ್ಯಗಳು' ಎಂದು ಬದಲಿಸಲಾಗಿದೆ. ಈ ಪ್ರಕರಣಗಳಿಗೆ ವಿಧಿಸಬಹುದಾದ ಶಿಕ್ಷೆ ಮತ್ತು ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.

ಹಿಡನ್ ಅಜೆಂಡಾ ಕಾಣಿಸುತ್ತಿದೆ: ನ್ಯಾ. ದಾಸ್

ದೇಶದ್ರೋಹ ಕಾನೂನು ದುರ್ಬಳಕೆ ಬಗ್ಗೆ ʼದ ಫೆಡರಲ್ʼಗೆ ಪ್ರತಿಕ್ರಿಯಿಸಿದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, “ಬ್ರಿಟಿಷರಿಗಿಂತ ಕೆಟ್ಟದಾದ ಕಾನೂನುಗಳನ್ನು ಜಾರಿ ಮಾಡುವ ಹಿಡನ್ ಅಜೆಂಡಾ ಇದರಲ್ಲಿ ಕಾಣುತ್ತದೆ. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಮಾನವ ಹಕ್ಕುಗಳ ವಿರೋಧಿ ಕಾನೂನುಗಳನ್ನು ಜಾರಿ ಮಾಡುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

“ಇತ್ತೀಚಿನ ವರ್ಷಗಳಲ್ಲಿ ದೇಶದ್ರೋಹದ ಕಾನೂನನ್ನು ಸರ್ಕಾರಗಳು ಬಹಳಷ್ಟು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಪ್ರಭುತ್ವವನ್ನು ಪ್ರಶ್ನೆ ಮಾಡುವ ಹಾಗಿಲ್ಲ, ಟೀಕೆ ಮಾಡುವ ಹಾಗಿಲ್ಲ. ಒಂದು ವೇಳೆ ಟೀಕೆ ವಿಮರ್ಶೆ ಮಾಡಿದರೆ ಬಂಧನ ಮಾಡಲಾಗುತ್ತಿದೆ. ಇಂತಹ ಕರಾಳ ಕಾನೂನುಗಳನ್ನು ಹೆಚ್ಚಾಗಿ ವಿರೋಧ ಪಕ್ಷದ ನಾಯಕರು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಮಾನವ ಹಕ್ಕುಗಳ ಹೋರಾಟಗಾರರು, ಲೇಖಕರು, ವಕೀಲರು ಹಾಗೂ ಪತ್ರರ್ಕರ ಮೇಲೆ ಹೇರಲಾಗುತ್ತಿದೆ ಎಂದು ನ್ಯಾ. ದಾಸ್ ವಿವರಿಸಿದರು.

“ದೇಶದ್ರೋಹ ಕಾನೂನು ಸೇರಿದಂತೆ ಬ್ರಿಟಿಷ್ ವಸಾಹತುಶಾಹಿಯ ಪಳಯುಳಿಕೆಗಳಾಗಿರುವ ಹಲವು ಕಾನೂನುಗಳು ನಮ್ಮ ವ್ಯವಸ್ಥೆಯಲ್ಲಿ ಅಧಿಕಾರಸ್ಥರ ಪಾಲಿನ ಅಸ್ತ್ರಗಳಾಗಿ ದುರ್ಬಳಕೆಯಾಗುತ್ತಿವೆ ಎಂಬ ವ್ಯಾಪಕ ಚರ್ಚೆ ದೇಶವ್ಯಾಪಿ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾನೂನು ಆಯೋಗ ಒಂದು ವರದಿ ನೀಡಿತು. ಅದರಲ್ಲಿ ಈ ದೇಶದ್ರೋಹ ಕಾನೂನನ್ನು ಮುಂದುವರಿಸಬೇಕು ಮತ್ತು ಶಿಕ್ಷೆಯನ್ನು ಎರಡು ಪಟ್ಟು ಹೆಚ್ಚಿಗೆ ಮಾಡಬೇಕು ಎಂದು ಹೇಳಲಾಗಿದೆ. ಆ ವರದಿಯನ್ನು ಆಧರಿಸಿ ದೇಶದ್ರೋಹ ಎನ್ನುವ ಪದವನ್ನು ಮಾತ್ರ ಕಿತ್ತುಹಾಕುತ್ತಿದ್ದಾರೆ. ಇದು ಜನರ ಕಣ್ಣೊರೆಸುವ ನಾಟಕವಾಗಿದೆ, ಆದರೆ ಅದಕ್ಕಿಂತ ಬರ್ಬರವಾದ ಕಾನೂನನ್ನು ಜಾರಿಗೆ ತರಲಾಗುತ್ತಿದೆ’’ ಎಂದು ನಾಗಮೋಹನ್ ದಾಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Tags:    

Similar News