ನಿರ್ದೇಶಕ ಆತ್ಮಹತ್ಯೆ ಬಳಿಕ ಬದಲಾದ ‘ಅಶೋಕ ಬ್ಲೇಡ್’; ಈಗ ‘ದಿ ರೈಸ್ ಆಫ್ ಅಶೋಕ’
ಒತ್ತಡ ಎದುರಿಸಲಾಗದೆ ನಿರ್ದೇಶಕ ಮತ್ತು ನಿರ್ಮಾಪಕರಲ್ಲೊಬ್ಬರಾದ ವಿನೋದ್ ಧೋಂಡಾಳೆ ಕಳೆದ ವರ್ಷ ಜುಲೈನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಹೀಗಿರುವಾಗಲೇ ಚಿತ್ರಕ್ಕೆ ಕಾಯಕಲ್ಪ ಸಿಕ್ಕಿದೆ.;
‘ಮಸಣದ ಹೂ’ ಚಿತ್ರದ ಪೂರ್ತಿ ಮುಗಿಯುವಷ್ಟರಲ್ಲೇ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿಧನರಾದ ಹಿನ್ನೆಲೆಯಲ್ಲಿ ಆ ಚಿತ್ರವನ್ನು ಕೆ.ಎಸ್.ಎಲ್. ಸ್ವಾಮಿ ಮುಗಿಸಿ, ಬಿಡುಗಡೆ ಮಾಡಿದರು. ‘ಆರ್ಯನ್’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಡಿ. ರಾಜೇಂದ್ರ ಬಾಬು ನಿಧನರಾದಾಗ, ಚಿ. ಗುರುದತ್ ಚಿತ್ರವನ್ನು ಸಂಪೂರ್ಣ ಮಾಡಿ ಬಿಡುಗಡೆ ಮಾಡಿದರು. ಈಗ ಇಂಥದ್ದೇ ಘಟನೆ ಕನ್ನಡ ಚಿತ್ರರಂಗದಲ್ಲಿ ಪುನರಾವರ್ತನೆಯಾಗಿದೆ.
ಸತೀಶ್ ನೀನಾಸಂ ಅಭಿನಯದಲ್ಲಿ ಎರಡೂವರೆ ವರ್ಷಗಳ ಹಿಂದೆ ‘ಅಶೋಕ ಬ್ಲೇಡ್’ ಚಿತ್ರ ಪ್ರಾರಂಭವಾಗಿದ್ದು ನೆನಪಿರಬಹುದು. ಆ ಚಿತ್ರದ ಚಿತ್ರೀಕರಣ ಶೇ. 80ರಷ್ಟು ಮುಗಿದಿತ್ತು. ಮೊದಲು ಒಂದು ಭಾಷೆಯಲ್ಲಿ ಶುರುವಾದ ಚಿತ್ರ, ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಯ್ತು. ಒಂದು ಚಿತ್ರವೆಂದು ಪ್ರಾರಂಭವಾಗಿದ್ದು, ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ಸುದ್ದಿಯಾಯ್ತು. ಇದರಿಂದ ಚಿತ್ರದ ಬಜೆಟ್ ಹೆಚ್ಚಾಯಿತು.
ಈ ಒತ್ತಡ ಎದುರಿಸಲಾಗದೆ ನಿರ್ದೇಶಕ ಮತ್ತು ನಿರ್ಮಾಪಕರಲ್ಲೊಬ್ಬರಾದ ವಿನೋದ್ ಧೋಂಡಾಳೆ ಕಳೆದ ವರ್ಷ ಜುಲೈನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಇನ್ನು, ಚಿತ್ರ ಮುಂದುವರೆಯುವುದಿಲ್ಲ, ಬಿಡುಗಡೆಯಾಗುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಹೀಗಿರುವಾಗಲೇ ಚಿತ್ರಕ್ಕೆ ಕಾಯಕಲ್ಪ ಸಿಕ್ಕಿದ್ದು, ಚಿತ್ರ ಪುನಃ ಪ್ರಾರಂಭವಾಗುತ್ತಿದೆ.
ಆತ್ಮಹತ್ಯೆಗೂ ಮೊದಲು ವಿನೋದ್ ದೊಂಡಾಲೆ ಆಗಲೇ ಶೇ.80ರಷ್ಟು ಚಿತ್ರೀಕರಣ ಮುಗಿಸಿದ್ದಾರಂತೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೊತೆಯಾಗಿ ನಡೆದಿತ್ತು ಎಂದು ಹೇಳಲಾಗುತ್ತದೆ. ಒಂದಿಷ್ಟು ಟಾಕಿ ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಇತ್ತು. ಇದೀಗ ಈ ಚಿತ್ರವನ್ನು ಸಂಕಲನಕಾರ ಮನು ಶೇಡ್ಗಾರ್ ಮುಂದುವರೆಸುತ್ತಿದ್ದಾರೆ. ‘ಚಮಕ್’, ‘ಕ್ಷೇತ್ರಪತಿ’, ‘ಅವತಾರ ಪುರುಷ’ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಮನು ಶೇಡ್ಗಾರ್, ‘ದಿ ರೈಸ್ ಆಫ್ ಅಶೋಕ’ ಚಿತ್ರಕ್ಕೂ ಸಂಕಲನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಚೆನ್ನಾಗಿ ಪರಿಚಯವಿರುವ ಕಾರಣ, ಅವರೇ ಮುಂದೆ ನಿಂತು ಉಳಿದ ದೃಶ್ಯಗಳನ್ನು ನಿರ್ದೇಶನ ಮಾಡಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ, ಚಿತ್ರದ ಹೆಸರು ಬದಲಾಗಿದೆ. ‘ಅಶೋಕ ಬ್ಲೇಡ್’ ಚಿತ್ರಕ್ಕೆ ‘ದಿ ರೈಸ್ ಆಫ್ ಅಶೋಕ’ ಎಂಬ ಹೆಸರನ್ನು ಇಡಲಾಗಿದ್ದು, ಈ ಶೀರ್ಷಿಕೆಯಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಪುನಃ ಚಾಲನೆ ಸಿಕ್ಕಿರುವ ಮತ್ತು ಹೆಸರು ಬದಲಾದ ವಿಷಯವನ್ನು ಒಂದು ಮೋಷನ್ ಪೋಸ್ಟರ್ ಮೂಲಕ ಘೋಷಿಸಲಾಗಿದೆ. ಈ ಮೋಷನ್ ಪೋಸ್ಟರ್ ಇದೀಗ ಬಿಡುಗಡೆಯಾಗಿದ್ದು, ಇದು ರೆಟ್ರೋ ಕಾಲದ ಕಥೆ ಅನ್ನೋದನ್ನು ಹೇಳುತ್ತದೆ. ಇದೊಂದು ಬಂಡಾಯದ ಕಥೆ ಇರಬಹುದು ಎಂದು ಪೋಸ್ಟರ್ ಸೂಚಿಸುತ್ತದೆ.
ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಡಿ ವರ್ಧನ್ ನರಹರಿ, ಜೈಷ್ಣವಿ ಮತ್ತು ನೀನಾಸಂ ಸತೀಶ್ ನಿರ್ಮಿಸುತ್ತಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಚಿತ್ರೀಕರಣ ಫೆಬ್ರವರಿ 15ರಿಂದ ಮತ್ತೆ ಪ್ರಾರಂಭವಾಗಲಿದೆ. ಈ ಚಿತ್ರವು ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿದೆ.,
‘ದಿ ರೈಸ್ ಆಫ್ ಅಶೋಕ’ ಚಿತ್ರದಲ್ಲಿ ಸತೀಶ್ ನೀನಾಸಂಗೆ ನಾಯಕಿಯಾಗಿ ಕಾವ್ಯ ಶೆಟ್ಟಿ ನಟಿಸುತ್ತಿದ್ದಾರೆ. ಜೊತೆಗೆ ಬಿ. ಸುರೇಶ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.