WOMEN'S DAY SPECIAL | ಕನ್ನಡ ಚಿತ್ರರಂಗದ ಮೂರು ಮಹಿಳಾ ನವಧಾರೆಗಳು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಸಾಧನೆ ಮಾಡಿರುವ ಮೂವರು ಮಹಿಳಾ ನಿರ್ದೇಶಕರ ಕುರಿತ ವಿಶೇಷ ಬರಹ ಇಲ್ಲಿದೆ..;

Update: 2024-03-08 01:00 GMT

ಕನ್ನಡ ಚಿತ್ರರಂಗಕ್ಕೆ ತೊಂಭತ್ತು ವರ್ಷ ತುಂಬುತ್ತಿರುವ ಇಂದಿನ ಸಂದರ್ಭದಲ್ಲಿ ಬಂದು ಹೋಗಿರುವ ಮಹಿಳಾ ನಿರ್ದೇಶಕಿಯರ ಸಂಖ್ಯೆಯನ್ನು ಲೆಕ್ಕ ಹಾಕಿದರೆ, ನಿರಾಶೆಯಾಗುತ್ತದೆ. ಏಕೆಂದರೆ ಅವರ ಸಂಖ್ಯೆ ಬೆರಳೆಣಿಕೆಯಷ್ಟು. ಆದರೆ ಕತ್ತಲಲ್ಲೊಂದು ಕೋಲ್ಮಿಂಚು ಎಂಬಂತೆ ಕನ್ನಡ ಚಿತ್ರರಂಗ ಒಂಭತ್ತು ದಶಕಗಳ ಗಡಿ ದಾಟುತ್ತಿರುವ ಇಂದಿನ ಸಂದರ್ಭದಲ್ಲಿ, ಮೂರು ಮಂದಿ ಮಹಿಳಾ ನಿರ್ದೇಶಕಿಯರು ಮೆಗಾಫೋನ್‌ ಹಿಡಿಯಲು ಸಜ್ಜಾಗುತ್ತಿರುವಂತೆ ತೋರುತ್ತಿದೆ.

ಈ ಪೈಕಿ ಸಿಂಧೂ ಶ್ರೀನಿವಾಸಮೂರ್ತಿ ಎಂಬ ಹುಡುಗಿ ʼಆಚಾರ್‌ ಅಂಡ್‌ ಕೋʼ ಚಿತ್ರ ನಿರ್ದೇಶಿಸಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇವರೊಂದಿಗೆ, ಕನ್ನಡದ ಸೂಕ್ಷ್ಮಮನಸ್ಸಿನ ಹುಡುಗಿ ಎಂದೇ ಮನೆಮಾತಾಗಿರುವ ಶೃತಿ ಹರಿಹರನ್‌ ತಮ್ಮದೇ ಚಿತ್ರ ನಿರ್ದೇಶನಕ್ಕೆ ಸಿದ್ಧರಾಗಿದ್ದಾರೆ. ಇವರಿಬ್ಬರ ನಡುವೆ ತಮಗಷ್ಟು ಜಾಗಮಾಡಿಕೊಂಡು ಚಿತ್ರವೊಂದನ್ನು ನಿರ್ದೇಶಿಸಲು ಸಿದ್ಧರಾಗಿರುವವರು ನಾಗಿಣಿ ಭರಣ. ಈಕೆ ಖ್ಯಾತ ನಿರ್ದೇಶಕ ನಾಗಾಭರಣ ಅವರ ಪತ್ನಿ ಎನ್ನುವುದು ಮತ್ತೊಂದು ಸಂಗತಿ. ಹಾಗೆಂದು ಆಕೆ ಚಿತ್ರ ನಿರ್ದೇಶಿಸುವ ಅರ್ಹತೆಯನ್ನು ಎಂದೋ ಗಳಿಸಿಕೊಂಡಿದ್ದಾರೆ. ಆದರೆ ಅವರು ಮೆಗಾಫೋನ್‌ ಹಿಡಿಯುವುದು ಕೊಂಚ ತಡವಾಗಿದೆ ಅಷ್ಟೆ. ನಾಗಾಭರಣ ಅವರಷ್ಟೇ ಸೂಕ್ಷ್ಮ ಮನಸ್ಸಿನ ನಿರ್ದೇಶಕಿ ಅವರು.

ಈ ಮೂರು ಮಂದಿ ಮಹಿಳಾ ನಿರ್ದೇಶಕಿಯರ ಬಗ್ಗೆ ಚಿಂತಿಸುವ ಮುನ್ನ, ಕಳೆದ 90 ವರ್ಷಗಳಲ್ಲಿ ಕನ್ನಡ ಚಿತ್ರರಂಗಕ್ಕಾಗಿ ದುಡಿದ ಮಹಿಳಾ ನಿರ್ದೇಶಕಿಯರು ಯಾರು ಎಂಬ ಬಗ್ಗೆ ಕನ್ನಡ ಸಿನಿಮಾದ ಇತಿಹಾಸದ ಪುಟಗಳಲ್ಲಿ ಇಣುಕಿದರೆ, ಕಾಣುವವರು; ಪ್ರೇಮಾ ಕಾರಂತ, ಖ್ಯಾತ ನಟಿ ಆರತಿ, ಕವಿತಾ‌ ಲಂಕೇಶ್, ರೂಪ ಅಯ್ಯರ್‌, ಸುಮನಾ ಕಿತ್ತೂರು, ಪ್ರಿಯಾ ಹಾಸನ್‌, ವಿಜಯಲಕ್ಷ್ಮಿ ಸಿಂಗ್‌, ಪೂರ್ಣಿಮಾ ಮೋಹನ್‌, ಪ್ರಿಯಾ ಬೆಳ್ಳಿಯಪ್ಪ, ರೂಪಾರಾವ್‌ ಹಾಗೂ ಚಂಪಾ ಶೆಟ್ಟಿ. ಇವರ ಸಾಲಿಗೆ ಈಗಾಗಲೇ ಸಿಂಧೂ ಶ್ರೀನಿವಾಸಮೂರ್ತಿ ಸೇರಿದ್ದಾರೆ. ಶೃತಿ ಹರಿಹರನ್‌ ಹಾಗೂ ನಾಗಿಣಿ ಭರಣ, ಈ ಸಾಲಿಗೆ ಅವರ ಚಿತ್ರ ಬಿಡುಗಡೆಯಾದ ನಂತರ ಸೇರಲಿದ್ದಾರೆ.

ಮಹಿಳೆಯರದೇ ಚಿತ್ರ

‘ಆಚಾರ್ ಅಂಡ್ ಕೋ’ ಸಿಂಧೂ ಶ್ರೀನಿವಾಸಮೂರ್ತಿ ಅವರ ಚೊಚ್ಚಲ ನಿರ್ದೇಶನದ ಚಿತ್ರ.

ಈಗ ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದೆ. ಹಾಗೆ ನೋಡಿದರೆ, ‘ಆಚಾರ್ ಅಂಡ್ ಕೋ’ ಒಂದು ರೀತಿಯಲ್ಲಿ ಮಹಿಳೆಯರದೇ ಚಿತ್ರ. ಈ ಚಿತ್ರದ ಪ್ರಮುಖ ವಿಭಾಗಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿರುವುದು. ಈ ಚಿತ್ರವನ್ನು ನಿರ್ಮಿಸಿದವರು ಪಿಆರ್‌ಕೆ ನಿರ್ಮಾಣ ಸಂಸ್ಥೆಯ ಅಶ್ವಿನಿ ಪುನೀತ್ ರಾಜ್ ಕುಮಾರ್‌, ನಿರ್ದೇಶಕಿ ಸಿಂಧೂ ಶ್ರೀನಿವಾಸಮೂರ್ತಿ, ಬಿಂದೂ ಮಾಲಿನಿ ನಾರಾಯಣ ಸ್ವಾಮಿ ಸಂಗೀತ ನಿರ್ದೇಶಕಿ. ಇಂಚರಾ ಸುರೇಶ ವಸ್ತ್ರ ವಿನ್ಯಾಸಕಿ, ಶಬ್ದಗ್ರಹಣ ನಿರ್ವಹಣೆ ಹೇಮಾ ಸುವರ್ಣ ಅವರದು. ಈ ಹಿಂದೆ ಈ ರೀತಿ ಚಿತ್ರ ನಿರ್ಮಿಸಿದವರು ʼರಿಂಗ್‌ ರೋಡ್‌ ಶುಭಾʼ ಚಿತ್ರ ನಿರ್ದೇಶಿಸಿದ ಪ್ರಿಯಾ ಬೆಳ್ಳಿಯಪ್ಪ.

ವಿಜ್ಞಾನ, ಗಣಿತದ ಮೂಲಕ ಎಂಜಿನಿಯರ್‌, ಡಾಕ್ಟರ್‌ಗಳಾಗಲು ಕನಸು ಕಾಣುವ ಇಂದಿನ ತಲೆಮಾರಿನ ನಡುವೆ, ಚಿಕ್ಕ ವಯಸ್ಸಿನಿಂದಲೇ ತಮ್ಮ ಹಾದಿಯನ್ನು ತಾವೇ ಕಂಡುಕೊಳ್ಳಲು ಬಯಸಿದವರು ಸಿಂಧೂ. ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ರಂಗಭೂಮಿಯ ಸಾಧ್ಯತೆಗಳನ್ನು ಕಂಡು ಬೆರಗಾದ ಈಕೆ, ಆ ರಂಗದಲ್ಲಿಯೇ ಮುಂದುವರಿಯಲು ತೀರ್ಮಾನಿಸಿದ್ದು ಈಗಲೂ ಅವರು ತಮ್ಮ ಮುಗ್ಧ ನಗುವನ್ನು ಉಳಿಸಿಕೊಳ್ಳುವಂತೆ ಮಾಡಿದೆ. ಕಳೆದ ಹದಿನಾರು ವರ್ಷಗಳಿಂದ ಅಭಿನಯವನ್ನೇ ಬದುಕಾಗಿಸಿಕೊಂಡಿದ್ದರೂ, ಹಲವು ನಿರ್ದೇಶಕರಿಗೆ ಸಹಾಯಕರಾಗಿ ಕೆಲಸಮಾಡಿ ಒಂದು ರೀತಿಯಲ್ಲಿ ಎರಡು ದೋಣಿಯಲ್ಲಿ ಕಾಲಿಟ್ಟುಕೊಂಡು ಪ್ರಯಾಣಿಸುತ್ತಿರುವುದು ಸಿಂಧೂ ಗಮನಕ್ಕೆ ಬಂದಿದೆ. ನಿರ್ದೇಶನ ತಮ್ಮ ನಿಜವಾದ ಆಯ್ಕೆ ಎಂದು ಅವರು ಒಪ್ಪಿಕೊಂಡಂತೆ ಕಾಣುತ್ತಿದೆ. ಅದು ʼಆಚಾರ್‌ ಅಂಡ್‌ ಕೋʼನಲ್ಲಿ ಢಾಳಾಗಿ ಕಾಣಿಸುತ್ತದೆ. “ನಿರ್ದೇಶಕರಾದರೆ ಚಿತ್ರ ಕಥೆಯನ್ನು ರೂಪಿಸುವ ಕ್ರಿಯೆಯೂ ಸೇರಿದಂತೆ ಚಿತ್ರ ನಿರ್ಮಾಣದ ಮುಂಚಿನ ಕೆಲಸಗಳು, ಚಿತ್ರೀಕರಣದ ನಂತರ ಚಿತ್ರೀಕರಣೋತ್ತರ ಕೆಲಸಗಳು ನಮ್ಮ ಸೃಜನಶೀಲತೆಯನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಆದರೆ ಚಿತ್ರ ತೆರೆಯಮೇಲೆ ಪ್ರದರ್ಶನಗೊಂಡಾಗ ಮತ್ತು ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾದಾಗ, ಆ ಸಂಕಷ್ಟಗಳ್ಯಾವುವೂ ಕಾಣುವುದೇ ಇಲ್ಲ” ಎಂದು ಸಿಂಧೂ ಮುಗುಳ್ನಗುತ್ತಾರೆ. ಆದರೆ ತಾವು ಮುಂದೆ ನಿರ್ದೇಶಿಸಲಿರುವ ಚಿತ್ರದ ಗುಟ್ಟು ಮಾತ್ರ ಬಿಟ್ಟುಕೊಡುವುದಿಲ್ಲ. ಅದು ಅವರ ವೃತ್ತಿ ಪರತೆಗೆ ಸಾಕ್ಷಿ.

ಭರಣ ನೆರಳಿನಿಂದ ಆಚೆಗೆ ಜಿಗಿದ ನಾಗಿಣಿ

ನಾಗಾಭರಣ ಅವರ ಎಲ್ಲ ಚಿತ್ರಗಳಿಗೆ ಹಿನ್ನೆಲೆಯಲ್ಲಿ ನಿಂತು ಭರಣ ಅವರ ಕನಸುಗಳನ್ನು ನನಸು ಮಾಡಿದ ಅವರ ಪತ್ನಿ ನಾಗಿಣಿ ಭರಣ ಅವರು ನಿರ್ದೇಶಕಿಯಾಗುವ ತಮ್ಮ ಕನಸಿನ ರಂಗೋಲಿಯ ಚುಕ್ಕೆಗಳನ್ನು ಇಡಲು ಮುಂದಾಗಿದ್ದಾರೆ. ಅವರೀಗ ತಮ್ಮ ಚೊಚ್ಚಲ ಚಿತ್ರ ʼಜೀನಿಯಸ್‌ ಮುತ್ತಾʼ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಇದು ನಾಗಾಭರಣ ನಿರ್ದೇಶಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ʼಚಿನ್ನಾರಿ ಮುತ್ತʼ ಚಿತ್ರದ ಮುಂದುವರೆದ ಭಾಗವೇ? ಎಂದು ಪ್ರಶ್ನಿಸಿದರೆ, “ಬಿಲ್ಕುಲ್‌ ಇಲ್ಲ. ನಾನು ನನ್ನ ಸುತ್ತಮುತ್ತಲು ಕಂಡ ಸಂಗತಿಗಳನ್ನು ಚಿತ್ರಕಥೆಯಾಗಿಸಿ, ಅದನ್ನು ಒಂದು ಚೌಕಟ್ಟಿನಲ್ಲಿ ದೃಶ್ಯಗಳ ಮೂಲಕ ಹೇಳಲು ನಡೆಸಿರುವ ಪ್ರಯತ್ನ ಎನ್ನುತ್ತಾರೆ.

ನಿರ್ದೇಶಕರಾಗಿ ಮೆಗಾಫೋನ್‌ ಹಿಡಿಯಲು ನಿಮಗೆ ಕಷ್ಟವಾಗುತ್ತಿದೆಯೇ? ಎಂದು ಕೇಳಿದರೆ ನಾಗಿಣಿ, “ಭರಣ ಕೆಲಸ ಮಾಡುವುದನ್ನು ನಾನು ಕಳೆದ 36 ವರ್ಷಗಳಿಂದ ನೋಡಿಕೊಂಡೇ ಬಂದಿದ್ದೇನೆ. ಅವರ ಜೊತೆಜೊತೆಯಲಿ ಹೆಜ್ಜೆ ಹಾಕಿದ್ದೇನೆ. ಹಾಗಾಗಿ ನಿರ್ದೇಶನ ನನಗೆ ಹೊಸತೆಂದು ನನಗೆ ಅನ್ನಿಸುತ್ತಲೇ ಇಲ್ಲ. ಭರಣ ನಿರ್ದೇಶಿಸುವಾಗ ಅನುಸರಿಸುವ ಶಿಸ್ತು, ಬದ್ಧತೆ ಕಂಡಿದ್ದೇನೆ. ಅವರೊಂದಿಗೆ ಸ್ಟೂಡಿಯೋದಲ್ಲಿ ರೆಕಾರ್ಡಿಂಗ್‌ ಕೆಲಸ ನೋಡಿಕೊಂಡಿದ್ದೇನೆ. ಅವರ ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದೇನೆ. ಒಮ್ಮೊಮ್ಮೆ ಅವರು ಧಾರವಾಹಿಗಳನ್ನು ನಿರ್ದೇಶಿಸುವಾಗ ಅಕಸ್ಮಿಕವಾಗಿ ಗೈರು ಹಾಜರಾದರೆ, ಆ ಕಂತಿಗೆ ಯಾವುದೇ ಚ್ಯುತಿಯಾಗದಂತೆ ಕಾರ್ಯನಿರ್ವಹಿಸಿದ್ದೇನೆ. ಭರಣ ನನ್ನ ಗುರು. ಅವರಿಂದ ಸಾಕಷ್ಟು ಸಂಗತಿಗಳನ್ನು ಕಲಿತಿದ್ದೇನೆ. ಈ ನಡುವೆ ಹಲವಾರು ಸಕ್ಷ್ಯಾ ಚಿತ್ರಗಳನ್ನು ನಿರ್ದೇಶಿಸಿರುವ ನನಗೆ ನಿರ್ದೇಶನ ಹೊಸದೆನ್ನಿಸುತ್ತಿಲ್ಲ. ಇದುವರೆಗೂ ಮಾಡುತ್ತಿರುವ ಸೃಜನಶೀಲ ಕೆಲಸಗಳಿಗಿಂತ ಭಿನ್ನವೆಂದೇನೂ ನನಗನ್ನಿಸುತ್ತಿಲ್ಲ” ಎನ್ನುತ್ತಾರೆ ನಾಗಿಣಿ.

ಇಲ್ಲೊಂದು ವಿಶೇಷ ಸಂಗತಿ ಇದೆ. ನಾಗಾಭರಣ, ನಾಗಿಣಿ ಭರಣರೊಂದಿಗೆ ಅವರ ಮಗ ಪನ್ನಗಾ ಭರಣ ಕೂಡ ಚಲನಚಿತ್ರ ನಿರ್ದೇಶಕ. ಅವರ ಚಿತ್ರಗಳು ಪ್ರೇಕ್ಷಕರ ಮೆಚ್ಚಿಗೆ ಗಳಿಸಿರುವುದೇ ಅಲ್ಲದೆ ಗಲ್ಲಾ ಪೆಟ್ಟಿಗೆಯನ್ನೂ ತುಂಬಿಸಿದೆ.

ನಟನೆಯಿಂದ ನಿರ್ದೇಶನಕ್ಕೆ

ಈಗ ಮಹಿಳಾ ನಿರ್ದೇಶಕಿಯರ ಸಾಲಿಗೆ ಸೇರಲು ಸಜ್ಜಾಗಿರುವ ಮತ್ತೊಬ್ಬ ಹೆಣ್ಣು ಮಗಳು –ಶೃತಿ ಹರಿಹರನ್.‌ ಪಂಚಭಾಷಾ ತಾರೆಯಾಗಿರುವ ಶೃತಿ ಹರಿಹರನ್‌ ಇಂದು ಅತಿ ಬೇಡಿಕೆಯ ನಟಿ. ʼಮೀಟೂʼ ಪ್ರಕರಣದಲ್ಲಿ ಚಿತ್ರರಂಗದ ಬಲಿಷ್ಠರನ್ನು ಎದುರುಹಾಕಿಕೊಳ್ಳುವ ಎದೆಗಾರಿಕೆ ತೋರಿಸಿದ ಶೃತಿ, ಅದಕ್ಕಾಗಿ ಈ ಪುರುಷ ಪ್ರಧಾನ ಜಗತ್ತಿನಲ್ಲಿ ಬೆಲೆ ತೆರಬೇಕಾಗಿ ಬಂದದ್ದು ನಿಜಕ್ಕೂ ದುರಂತ. ಆಗಲೂ ಅವರೊಂದಿಗೆ ಹೆಗಲು ನೀಡಲು ಮುಂದಾದವರು ಕೇವಲ ಬೆರಳೆಣಿಕೆಯಷ್ಟು ಮಹಿಳಾ ನಟಿಯರು, ನಿರ್ದೇಶಕಿಯರು.

2012ರಲ್ಲಿ ಮಲೆಯಾಳಂ ಚಿತ್ರ ಸಿನಿಮಾ ಕಂಪನಿಯ ಮೂಲಕ ಚಿತ್ರರಂಗ ಪ್ರವೇಶಿಸಿದ ಶೃತಿ ಹರಿಹರನ್‌ ಕಳೆದ 12 ವರ್ಷಗಳಲ್ಲಿ ಸುಮಾರು 30 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಶೃತಿ ನಟಿಸಿದ ಪವನ್‌ ಕುಮಾರ್‌ ನಿರ್ದೇಶನದ ʼಲೂಸಿಯಾʼ, ಮನ್ಸೋರೆ ನಿರ್ದೇಶನದ ʼನಾತಿಚರಾಮಿʼ ಹೆಸರು, ಕೀರ್ತಿ ತಂದುಕೊಟ್ಟ ಚಿತ್ರಗಳು. ʼನಾತಿಚರಾಮಿʼ ಚಿತ್ರದ ಅಭಿನಯಕ್ಕೆ ಶೃತಿಗೆ ರಾಷ್ಟ್ರ ಪ್ರಶಸ್ತಿ ಗೌರವ ದಕ್ಕಿದರೆ, ಅವರ ʼಬ್ಯೂಟಿಫುಲ್‌ ಮನಸುಗಳುʼ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭ್ಯವಾಗಿದೆ. ಇದಲ್ಲದೆ ಅವರಿಗೆ ಫಿಲಂ ಫೇರ್‌ ಪ್ರಶಸ್ತಿಗಳು ಕೂಡ ದಕ್ಕಿವೆ. ಅತಿ ಕಡಿಮೆ ಅವಧಿಯಲ್ಲಿ ಇಷ್ಟರ ಮಟ್ಟಿಗೆ ಸಾಧನೆ ಮಾಡಿರುವ ಶೃತಿ ಹರಿಹರನ್‌ ಈಗ ಚಿತ್ರವೊಂದರ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.

ತಮ್ಮ ಚಿತ್ರಕ್ಕಾಗಿ ಲೇಖಕಿ ಎಚ್‌ ಎಸ್‌ ಅಪರ್ಣ ಅವರ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಚಿತ್ರಕಥೆ ರಚನೆಯಲ್ಲಿ ನಿರತರಾಗಿದ್ದಾರೆ. ಆದರೆ ಅವರು ತಮ್ಮ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಸಿದ್ಧರಿಲ್ಲ. “ನನ್ನ ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಣ ಸಂಸ್ಥೆ ನನಗೆ ಕೆಲವೊಂದು ನಿರ್ಬಂಧಗಳನ್ನು ಹಾಕಿದೆ. ಹಾಗಾಗಿ ಸದ್ಯಕ್ಕೆ ಚಿತ್ರದ ಬಗ್ಗೆ ಮಾತನಾಡಲಾರೆ. ದಯವಿಟ್ಟು ಕ್ಷಮಿಸಿ” ಎಂದು ಶೃತಿ ʼದ ಫೆಡರಲ್-ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿದ್ದಾರೆ.

ಆದರೆ ಮಾತು ಮಾತಿನ ನಡುವಿನ ದಿಡ್ಡಿ ಬಾಗಿಲನ್ನು ಒಮ್ಮೆ ತೆರೆದು; “ನಿರ್ದೇಶನದ ಅವಕಾಶ ನಾನು ಹುಡುಕಿಕೊಂಡು ಹೋದದ್ದಲ್ಲ. ಅದು ತಾನಾಗೇ ಬಂದದ್ದು. ಇದು ಒಟ್ಟು ಐದು ಚಿತ್ರಗಳ ಆಂಥಾಲಜಿ ಎಂದು ಹೇಳಬಹುದು. ಐದು ನಿರ್ದೇಶಕರು ಐದು ಕಥೆಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುತ್ತಿದ್ದಾರೆ. ಆ ಪೈಕಿ ನಾನೊಬ್ಬಳು ಅಷ್ಟೆ” ಎಂದು ವಿನಯದಿಂದಲೇ ಹೇಳುತ್ತಾರೆ.

“ನಿರ್ದೇಶನ ಮಾಡುವ ಪ್ರಕ್ರಿಯೆ ನನ್ನಲ್ಲಿ ಒಂದು ಹೊಸ ಶಕ್ತಿ ಸಂಚಲನ ಉಂಟುಮಾಡಿದೆ. ನನ್ನ ಸೃಜನಶೀಲ ಶಕ್ತಿಯನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ನಾನು ನಿರ್ದೇಶನಕ್ಕೆ ಇಳಿಯುತ್ತಿದ್ದೇನೆ. ನನಗೆ ಗೊತ್ತಿದ್ದದ್ದು ಅಭಿನಯ ಮಾತ್ರ. ಈಗ ಹೊಸ ಲೋಕದೊಳಗೆ ವಿಹರಿಸುತ್ತಿರುವ ಅನುಭವವಾಗುತ್ತಿದೆ” ಎನ್ನುತ್ತಾರೆ ಶೃತಿ ಹರಿಹರನ್.‌

ತಾವು ಚಿತ್ರಿಸುತ್ತಿರುವ ಕಥೆಯ ಬಗ್ಗೆ ಶೃತಿ ಹರಿಹರನ್‌ ಗೆ ಹೆಮ್ಮೆ ಇರುವುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. “ಇದೊಂದು ಮಧ್ಯವಯಸ್ಕ ಹೆಣ್ಣೊಬ್ಬಳ ಕಥೆ. ಸುಮಾರು ಐವತ್ತರ ಪ್ರಾಯದ ಈ ಹೆಣ್ಣುಮಗಳು ಕೋವಿಡ್‌ ಮಹಾಮಾರಿ ಅಪ್ಪಳಿಸಿ, ಎಲ್ಲರನ್ನೂ ಗೃಹಬಂಧನದಲ್ಲಿ ಇರಿಸಿದಾಗ ತನಗೆ ಬೇಕಾದ ಕಾನೂನುಗಳನ್ನು ತಾನೇ ರೂಪಿಸಿಕೊಂಡು ,ಸಿದ್ಧ ಸೂತ್ರದಂಥ ಕಾನೂನುಗಳನ್ನು ಕಾನೂನುಗಳ ಉಲ್ಲಂಘನೆಯಾಗದಂತೆ ನಿರ್ವಹಿಸಿದ ಘಟನೆಗಳ ಹಿನ್ನೆಲೆಯಲ್ಲಿ ಈ ಕಥೆ ದೃಶ್ಯರೂಪ ಪಡೆದುಕೊಳ್ಳಲಿದೆ. ಇದಕ್ಕಿಂತ ಹೆಚ್ಚಿನ ವಿವರಗಳನ್ನು ನಾನು ನೀಡಲಾರೆ” ಎಂದು ಶೃತಿ ನುಣುಚಿಕೊಳ್ಳುತ್ತಾರೆ. ಅವರು ನುಣುಚಿಕೊಳ್ಳುವುದು ಇಂದಿನ ಸಂದರ್ಭದ ಅನಿವಾರ್ಯ ಕೂಡ ಎಂಬುದನ್ನೂ ನಾವು ಒಪ್ಪಿಕೊಳ್ಳಲೇ ಬೇಕಿದೆ.

ಈ ಮೂರು ಮಹಿಳಾ ನಿರ್ದೇಶಕಿಯರ ಆಗಮನದಿಂದ ಕನ್ನಡ ಚಿತ್ರರಂಗ ತನ್ನ ತೊಂಭತ್ತರ ದಶಕದ ಹರೆಯದಲ್ಲಿ ಮತ್ತಷ್ಟು ಶ್ರೀಮಂತವಾಗುವ ಸಾಧ್ಯತೆಗಳಿವೆ. ಹಾಗಾಗಲೆಂದೇ ಈ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ʼದ ಫೆಡರಲ್-ಕರ್ನಾಟಕʼದ ಆಶಯ ಕೂಡ.

Tags:    

Similar News