ಕೃತಕ ಬುದ್ಧಿಮತ್ತೆಯಿಂದ ಎಸ್ ಪಿಬಿ ಧ್ವನಿ ಮರುಸೃಷ್ಟಿ: ನಿರ್ಮಾಪಕರಿಗೆ ನೊಟೀಸ್
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿಯನ್ನು ಕೃತಕ ಬುದ್ಧಿಮತ್ತೆ ಬಳಸಿ ಅನುಚಿತವಾಗಿ ಮರುಸೃಷ್ಟಿಸಿದ್ದಕ್ಕಾಗಿ ಎಸ್ ಪಿ ಚರಣ್ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ದಿವಂಗತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿಯನ್ನು ಕೃತಕ ಬುದ್ಧಿಮತ್ತೆ ಬಳಸಿ ಅನುಚಿತವಾಗಿ ಮರುಸೃಷ್ಟಿಸಿದ್ದಕ್ಕಾಗಿ ಪುತ್ರ ಎಸ್ ಪಿ ಚರಣ್ ' ಕೀಡ ಕೋಲಾ ' ತೆಲುಗು ಸಿನಿಮಾ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಎಸ್ ಪಿಬಿ ಅವರ ಮರಣಾನಂತರ ಅವರ ಧ್ವನಿಯನ್ನು ತಂತ್ರಜ್ಞಾನವನ್ನು ಬಳಸಿ ಮರುಸೃಷ್ಟಿಸಿರುವುದನ್ನು ನಾವು ಇಷ್ಟಪಡುತ್ತೇವೆ. ಆದರೆ ಅದೇ ತಂತ್ರಜ್ಞಾನವನ್ನು ನಮ್ಮ ಅರಿವಿಲ್ಲದೆ, ಒಪ್ಪಿಗೆಯಿಲ್ಲದೆ ಬಳಸಿದರೆ ಕುಟುಂಬಕ್ಕೆ ನಿರಾಶೆಯುಂಟಾಗುತ್ತದೆ. ಹಾಗಾಗಿ ಚಿತ್ರದ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕ ವಿವೇಕ್ ಸಾಗರ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎಂದು ಚರಣ್ ಹೇಳಿದ್ದಾರೆ.
ನವೆಂಬರ್ 28, 2023 ರಂದು ಪ್ರಕಟವಾದ "ಪರ್ಮಿಟ್ ರೂಮ್" ಎಂಬ YouTube ಚಾನಲ್ ಮತ್ತು Spotify ಪೇಜ್ನ ಸಂದರ್ಶನವೊಂದರಲ್ಲಿ SPB ಅವರ ಧ್ವನಿಯನ್ನು ಮರುಸೃಷ್ಟಿಸಲು AI ಅನ್ನು ವಿವೇಕ್ ಸಾಗರ್ ಬಳಸಿದ್ದು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಆದರೆ ಎರಡು ಕಾರಣಗಳಿಂದಾಗಿ ಕುಟುಂಬ ಆಘಾತಕ್ಕೊಳಗಾಗಿದೆ.
ಕುಟುಂಬದವರ ಒಪ್ಪಿಗೆ ಅಥವಾ ಅನುಮತಿಯನ್ನು ಪಡೆಯಲಾಗಿಲ್ಲ ಮತ್ತು ಎರಡನೆಯದಾಗಿ, ಮನರಂಜನಾ ಉದ್ಯಮದಲ್ಲಿ AI ತಂತ್ರಜ್ಞಾನವನ್ನು ಬಳಸುವ ಪ್ರವೃತ್ತಿ ಮುಂದುವರಿದರೆ ಇದು ಪ್ರಸ್ತುತ ಮತ್ತು ಭವಿಷ್ಯದ ಗಾಯಕರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಅವರ ಧ್ವನಿ ಅವರ ಏಕೈಕ ಆಸ್ತಿಯಾಗಿದೆ ಎಂದು ಚರಣ್ ತಿಳಿಸಿದ್ದಾರೆ.