‘ಕಿರಿಕ್ ಪಾರ್ಟಿ’ಗಿಂತ ಮೊದಲು ಹಲವು ಆಡಿಷನ್‌ನಲ್ಲಿ ರಿಜೆಕ್ಟ್‌ ಆಗಿದ್ದ ರಶ್ಮಿಕಾ

ಸುಮಾರು 20-25 ಆಡಿಷನ್ ಕೊಟ್ಟಿದ್ದೆ. ಎಲ್ಲದರಲ್ಲೂ ರಿಜೆಕ್ಟ್ ಆಗಿದ್ದೆ. ನಿನ್ನ ಮುಖ ನಟಿಯಾಗಲು ಲಾಯಕ್ಕಿಲ್ಲ ಎಂದೇ ಹೇಳುತ್ತಿದ್ದರು ಎಂದು ಸ್ವತಃ ರಶ್ಮಿಕಾ ಅವರೇ ಹೇಳಿಕೊಂಡಿದ್ದಾರೆ

Update: 2024-08-13 10:06 GMT
ರಶ್ಮಿಕಾ ಮಂದಣ್ಣ
Click the Play button to listen to article

ನಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿಯಾಗಿ ಯಶಸ್ಸು ಕಂಡಿದ್ದಾರೆ. ʼಭಾರತದ ಕ್ರಶ್ʼ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಕನ್ನಡದ ʼಕಿರಿಕ್ ಪಾರ್ಟಿʼ ಸಿನಿಮಾದ ಮೂಲಕ ತಮ್ಮ ಸಿನಿ ಪಯಣವನ್ನು ಆರಂಭಿಸಿದ ನಟಿ ಇದೀಗ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ  ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿವೆ. ಆದರೆ ಅವರ ಯಶಸ್ಸಿನ ಹಿಂದೆ ಒಂದು ಹೋರಾಟ ಇದೆ. ಆ ಬಗ್ಗೆ ರಶ್ಮಿಕಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಅನೇಕರು ರಶ್ಮಿಕಾ ಅವರಿಗೆ ಸುಲಭದಲ್ಲಿ ‘ಕಿರಿಕ್ ಪಾರ್ಟಿ’ಯಲ್ಲಿ ಅವಕಾಶ ಸಿಕ್ಕಿತು ಎಂದುಕೊಂಡಿದ್ದಾರೆ. ಆದರೆ ನಟಿ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನ 20 ರಿಂದ 25 ಆಡಿಷನ್ ಕೊಟ್ಟಿದ್ದರಂತೆ. ಈ ಬಗ್ಗೆ ರಶ್ಮಿಕಾ ಮಂದಣ್ಣ ಮಾತನಾಡಿ, "2014ರಲ್ಲಿ ನಾನು ಫ್ರೆಶ್ ಫೇಸ್ ಕಾಂಟೆಸ್ಟ್‌ನಲ್ಲಿ ಭಾಗವಹಿಸಿದ ಬಳಿಕ ಹಲವು ಸಿನಿಮಾ ಹಾಗೂ ವೆಬ್ ಸೀರೀಸ್‌ಗಳಿಗೆ ಆಡಿಷನ್ ಕೊಟ್ಟಿದ್ದೆ. ನನಗೆ ಇನ್ನು ನೆನಪಿದೆ; ಸಾಕಷ್ಟು ಬಾರಿ ರಿಜೆಕ್ಟ್ ಆಗಿದ್ದೆ. ಅದನ್ನು ಸಹಿಸಲು ಆಗುತ್ತಿರಲಿಲ್ಲ. ಸುಮಾರು 20-25 ಆಡಿಷನ್ ಕೊಟ್ಟಿದ್ದೆ. ಎಲ್ಲದರಲ್ಲೂ ರಿಜೆಕ್ಟ್ ಆಗಿದ್ದೆ. ನಿನ್ನ ಮುಖ ನಟಿಯಾಗಲು ಲಾಯಕ್ಕಿಲ್ಲ ಎಂದೇ ಹೇಳುತ್ತಿದ್ದರು. ಮನೆಗೆ ಬಂದು ಸಾಕಷ್ಟು ಅಳುತ್ತಿದ್ದೆ" ಎಂದಿದ್ಧಾರೆ.

"ಕೊನೆಯದಾಗಿ ನಾನು 'ಗೆಳೆಯರೇ ಗೆಳೆತಿಯರೇ' ಎನ್ನುವ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದೆ. ಆ ಚಿತ್ರಕ್ಕಾಗಿ 2 ತಿಂಗಳ ಕಾಲ ತರಬೇತಿ ನೀಡಲಾಯಿತು. ಆದರೆ ಆ ಸಿನಿಮಾ ನಿಂತೇ ಹೋಯಿತು" ಎಂದು ರಶ್ಮಿಕಾ ಮಂದಣ್ಣ ನೆನಪಿಸಿಕೊಂಡಿದ್ದರು. ಆ ಬಳಿಕವೇ ಆಕೆ ರಿಷಬ್ ಶೆಟ್ಟಿ ಕಣ್ಣಿಗೆ ಬಿದ್ದು 'ಕಿರಿಕ್ ಪಾರ್ಟಿ' ಚಿತ್ರದ ಸಾನ್ವಿ ಪಾತ್ರಕ್ಕೆ ಆಯ್ಕೆ ಆಗಿದ್ದರು.

ರಶ್ಮಿಕಾ ಮಂದಣ್ಣ ಕಾಲೇಜಿನಲ್ಲಿದ್ದಾಗಲೇ ಟೈಮ್ಸ್ ಫ್ರೆಶ್ ಫೇಸ್ ಕಾಂಟೆಸ್ಟ್‌ನಲ್ಲಿ ಭಾಗಿ ಆಗಿ ಮೆಚ್ಚುಗೆ ಪಡೆದುಕೊಂಡಿದ್ದರು. ಅದೇ ಫೋಟೊ ನೋಡಿ ರಿಷಬ್ ಶೆಟ್ಟಿ ಆಕೆಯನ್ನು 'ಕಿರಿಕ್ ಪಾರ್ಟಿ' ಆಡಿಷನ್‌ಗೆ ಕರೆದಿದ್ದರು. ಇದೀಗ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಡಿಸೆಂಬರ್ 6ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಲಿದೆ. ವಿಕ್ಕಿ ಕೌಶಲ್ ನಟನೆಯ ‘ಛವಾ’ ಸಿನಿಮಾ ಕೂಡ ಅದೇ ದಿನ ರಿಲೀಸ್ ಆಗುವ ಸಾಧ್ಯತೆ ಇದೆ. ಸಲ್ಮಾನ್ ಖಾನ್ ನಟನೆಯ ‘ಸಿಖಂದರ್’ ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ.

'ಕಿರಿಕ್ ಪಾರ್ಟಿ' ಬಳಿಕ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್, ದರ್ಶನ್ ಜೊತೆಗೂ ತೆರೆ ಹಂಚಿಕೊಂಡರು. ಬಳಿಕ 'ಚಲೋ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದರು. ಆ ಸಿನಿಮಾ ಓಕೆ ಓಕೆ ಎನಿಸಿಕೊಂಡರೂ ಬಳಿಕ ಬಂದ 'ಗೀತಾ ಗೋವಿಂದಂ' ಸಿನಿಮಾ ಈಕೆಯ ನಸೀಬು ಬದಲಿಸಿತು. ವಿಜಯ್ ದೇವರಕೊಂಡ ಜೋಡಿಯಾಗಿ ನಟಿಸಿದ 'ಗೀತಾ ಗೋವಿಂದಂ' ಸಿನಿಮಾ ಹಿಟ್ ಆಗಿತ್ತು. 'ಪುಷ್ಪ' ಚಿತ್ರದ ಶ್ರೀವಲ್ಲಿ ಪಾತ್ರ ರಶ್ಮಿಕಾ ಮಂದಣ್ಣಗೆ ಮತ್ತೆ ದೊಡ್ಡ ಬ್ರೇಕ್ ಕೊಟ್ಟಿತ್ತು. 

'ಮಿಷನ್ ಮಜ್ನು' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದರು. ಅಮಿತಾಬ್ ಬಚ್ಚನ್ ಮಗಳಾಗಿ 'ಗುಡ್‌ಬೈ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಬಳಿಕ ರಣವೀರ್‌ ಸಿಂಗ್‌ ಅವರೊಂದಿಗೆ ʼಅನಿಮಲ್‌ʼ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದು, ಈ ಸಿನಿಮಾ ರಶ್ಮಿಕಾ ಅವರಿಗೆ ಬಾಲಿವುಡ್‌ನಲ್ಲಿ ದೊಡ್ಡ ಬ್ರೇಕ್‌ ನೀಡಿತು.

ಕೇವಲ ಸಿನಿಮಾಗಳಿಂದ ಮಾತ್ರವಲ್ಲದೆ; ಒಂದಷ್ಟು ವಿವಾದಗಳಿಂದಲೂ ರಶ್ಮಿಕಾ  ಸುದ್ದಿಯಾಗುತ್ತಾ ಹೋದರು. ಆಕೆ ನೀಡುವ ಹೇಳಿಕೆಗಳಿಗೆ  ಸುಖಾಸುಮ್ಮನೆ ರಶ್ಮಿಕಾ ಟ್ರೋಲ್ ಆಗಿದ್ದೂ ಇದೆ. ಅದಕ್ಕಾಗಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಆ ಬಗ್ಗೆ ಕೂಡ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. 

Tags:    

Similar News