Rashmika Mandanna Birthday| ‘ನ್ಯಾಷನಲ್ ಕ್ರಷ್’ ರಶ್ಮಿಕಾ ಮಂದಣ್ಣಗೆ ಇಂದು ಹುಟ್ಟುಬ್ಬದ ಸಂಭ್ರಮ
ಶನಿವಾರ ( ಎಪ್ರಿಲ್ 5) ರಶ್ಮಿಕಾ ಮಂದಣ್ಣ ತಮ್ಮ 29 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 9 ವರ್ಷಗಳ ವೃತ್ತಿಜೀವನದಲ್ಲಿ ರಶ್ಮಿಕಾ ಮಂದಣ್ಣ ದಕ್ಷಿಣ ಮತ್ತು ಬಾಲಿವುಡ್‌ನಲ್ಲಿ 20 ಸಿನಿಮಾಗಳನ್ನು ನೀಡಿದ್ದಾರೆ.;
ನಟಿ ರಶ್ಮಿಕಾ ಮಂದಣ್ಣ
ಕರ್ನಾಟಕದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಇಂದು 29ನೇ ಹುಟ್ಟುಹಬ್ಬದ ಸಂಭ್ರಮ. ಕನ್ನಡದ ಕಿರಿಕ್‌ಪಾರ್ಟಿ ಸಿನಿಮಾದಿಂದ ನಟನೆಗೆ ಪದಾರ್ಪಣೆ ಮಾಡಿದ್ದ ರಶ್ಮಿಕಾ ಮಂದಣ್ಣ ಜೀವನದಲ್ಲಿ ಮುಂದೆ ನಡೆದಿದ್ದು ಎಲ್ಲಾ ಇತಿಹಾಸ. ಒಂದರ ಮೇಲೆ ಒಂದರಂತೆ ಹಿಟ್ ಸಿನಿಮಾವನ್ನು ನೀಡಿದ ಹೆಗ್ಗಳಿಕೆ ರಶ್ಮಿಕಾಗೆ ಇದೆ.
2024ರಿಂದ ಇಲ್ಲಿಯವರೆಗೆ ರಶ್ಮಿಕಾ ಮಂದಣ್ಣ ಅತಿದೊಡ್ಡ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ ನಾಯಕಿ ಎಂಬ ಬಿರುದು ಧರಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ-2' ಚಿತ್ರವು ಇತರ ಎಲ್ಲಾ ಚಿತ್ರಗಳನ್ನು ಸೋಲಿಸಿ ಅತಿದೊಡ್ಡ ಸೂಪರ್‌ಹಿಟ್ ಆಗಿತ್ತು. ಈ ವರ್ಷದ ಅತಿ ದೊಡ್ಡ ಸೂಪರ್‌ಹಿಟ್ ಚಿತ್ರ 'ಛಾವಾ'ದಲ್ಲಿ ರಶ್ಮಿಕಾ ಮಂದಣ್ಣ ಅವರ ಅದೃಷ್ಟ ಮೋಡಿ ಮಾಡಿದೆ.
ಶನಿವಾರ ( ಎಪ್ರಿಲ್ 5) ರಶ್ಮಿಕಾ ಮಂದಣ್ಣ ತಮ್ಮ 29 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 9 ವರ್ಷಗಳ ವೃತ್ತಿಜೀವನದಲ್ಲಿ ರಶ್ಮಿಕಾ ಮಂದಣ್ಣ ದಕ್ಷಿಣ ಮತ್ತು ಬಾಲಿವುಡ್‌ನಲ್ಲಿ 20 ಸಿನಿಮಾಗಳನ್ನು ನೀಡಿದ್ದಾರೆ. ವಿಶೇಷವೆಂದರೆ ರಶ್ಮಿಕಾ ಅವರ 20 ಚಿತ್ರಗಳಲ್ಲಿ 16 ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯಲ್ಲಿ ಯಶಸ್ವಿಯಾಗಿವೆ.
ಇಂದು ರಶ್ಮಿಕಾ ದಕ್ಷಿಣ ಹಾಗೂ ಬಾಲಿವುಡ್‌ನ ಸೂಪರ್‌ಸ್ಟಾರ್ ನಾಯಕಿಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ,ಬಾಲಿವುಡ್ ತಾರೆಯರು ಹಾಗೂ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯ ಕೋರುತ್ತಿದ್ದಾರೆ.
ಮೊದಲ ಚಿತ್ರದಿಂದಲೇ ಸೂಪರ್ ಹಿಟ್ ಆಗಿದ್ದ ರಶ್ಮಿಕಾ ಮಂದಣ್ಣ
1996ರಲ್ಲಿ ಎಪ್ರಿಲ್ 5 ರಂದು ಜನಿಸಿದ ರಶ್ಮಿಕಾ ಮಂದಣ್ಣ 2016 ರಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ರಶ್ಮಿಕಾ ಅವರ ಚೊಚ್ಚಲ ಚಿತ್ರ 'ಕಿರಿಕ್ ಪಾರ್ಟಿ' ಬಿಡುಗಡೆಯಾದ ತಕ್ಷಣ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಯಿತು. ಮೊದಲ ಚಿತ್ರದಲ್ಲೇ ಹಿಟ್ ನಾಯಕಿ ಎನಿಸಿಕೊಂಡ ರಶ್ಮಿಕಾ ಮಂದಣ್ಣ, ಸತತ 5 ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಕೆಲವೇ ನಟಿಯರಲ್ಲಿ ಒಬ್ಬರಾದರು. ಕಿರಿಕ್ ಪಾರ್ಟಿ ಬಳಿಕ ರಶ್ಮಿಕಾ ಅಂಜನಿಪುತ್ರಂ, ಚಮಕ್, ಚಲೋ ಮತ್ತು ಗೀತಾ ಗೋವಿಂದಂ ಚಿತ್ರಗಳಲ್ಲಿ ನಟಿಸಿದರು. ರಶ್ಮಿಕಾ ಅವರ ಸತತ ಐದು ಚಿತ್ರಗಳು ಗಳಿಕೆಯ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದವು.
ಸಿನಿ ವೃತ್ತಿಜೀವನ
2018 ರಲ್ಲಿ ರಶ್ಮಿಕಾ ಮಂದಣ್ಣ 'ಚಲೋ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ಅವರು 'ಗೀತ ಗೋವಿಂದಂ' ಚಿತ್ರದಲ್ಲಿ ಕೆಲಸ ಮಾಡಿದರು. ಆ ಚಿತ್ರ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತು ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಇದಾದ ನಂತರ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರವು ರಶ್ಮಿಕಾ ಅವರ ಚಲನಚಿತ್ರ ವೃತ್ತಿಜೀವನಕ್ಕೆ ಉತ್ತಮ ಉತ್ತೇಜನ ನೀಡಿತು. ಈ ಸಿನಿಮಾ ಬಳಿಕ ರಶ್ಮಿಕಾ ದಕ್ಷಿಣದಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆದರು.
ರಶ್ಮಿಕಾ ಮಂದಣ್ಣ 'ಗುಡ್ ಬೈ' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ 'ಮಿಷನ್ ಮಜ್ನು' ಚಿತ್ರದಲ್ಲಿ ಕಾಣಿಸಿಕೊಂಡರು. ಅದೇ ಸಮಯದಲ್ಲಿ, 2023 ರಲ್ಲಿ ಬಿಡುಗಡೆಯಾದ 'ಅನಿಮಲ್' ಚಿತ್ರದಲ್ಲಿ, ನಟಿಯ ಪಾತ್ರವು ಹೆಚ್ಚು ಮೆಚ್ಚುಗೆ ಪಡೆಯಿತು. ತಮ್ಮ 9 ವರ್ಷಗಳ ಚಲನಚಿತ್ರ ವೃತ್ತಿಜೀವನದಲ್ಲಿ, ನಟಿ ರಶ್ಮಿಕಾ ಮಂದಣ್ಣ ಅವರು ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಈ ವರ್ಷ ಬಿಡುಗಡೆಯಾದ 'ಛಾವ' ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಕೂಡ ಸಾಕಷ್ಟು ಪ್ರಶಂಸೆ ಪಡೆದಿದ್ದಾರೆ.
ರಕ್ಷಿತ್ ಶೆಟ್ಟಿಯೊಂದಿಗೆ ಪ್ರೀತಿ ಮತ್ತು ನಿಶ್ಚಿತಾರ್ಥ
ರಶ್ಮಿಕಾ ಮಂದಣ್ಣ 2014 ರಲ್ಲಿ 'ಟೈಮ್ಸ್ ಫ್ರೆಶ್ ಫೇಸ್' ಪ್ರಶಸ್ತಿಯನ್ನು ಗೆದ್ದಿದ್ದರು. ಇದಾದ ಬಳಿಕ ರಶ್ಮಿಕಾ ಹಲವಾರು ಸಿನಿಮಾಗಳಿಗೆ ಆಡಿಷನ್ ಕೊಟ್ಟಿದ್ದರು. 2015 ರಲ್ಲಿ ರಶ್ಮಿಕಾಗೆ ರಿಷಬ್ ಶೆಟ್ಟಿ ಅವರ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಚಿತ್ರದಲ್ಲಿ ರಶ್ಮಿಕಾ ತಮ್ಮ ತೆರೆಯ ಮೇಲಿನ ನಾಯಕ ರಕ್ಷಿತ್ ಶೆಟ್ಟಿಯನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಸುಮಾರು 2 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಇಷ್ಟೇ ಅಲ್ಲ, ರಶ್ಮಿಕಾ 2017 ರಲ್ಲಿ ರಕ್ಷಿತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಇವರಿಬ್ಬರ ಪ್ರೀತಿ ಹೆಚ್ಚು ಕಾಲ ಉಳಿಯಲಿಲ್ಲ. ನಿಶ್ಚಿತಾರ್ಥ ಮುರಿದುಬಿತ್ತು. ಇಬ್ಬರೂ ಬೇರೆ ಬೇರೆಯಾದರು.
ಟ್ರೋಲ್‌ಗಳಿಗೆ ತಲೆ ಕೆಡಿಸಲೇ ಇಲ್ಲಾ ನ್ಯಾಶನ್‌ಲ್ ಕ್ರಶ್
ಸೆಪ್ಟೆಂಬರ್ 2018 ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದರು. ಕೆಲವು ವರದಿಗಳ ಪ್ರಕಾರ ರಶ್ಮಿಕಾ ತಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದ್ದು ಸಹ ನಿಶ್ಚಿತಾರ್ಥ ಮುರಿದು ಬೀಳು ಕಾರಣವಾಗಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ಇದೇ ಕಾರಣಕ್ಕಾಗಿ ರಶ್ಮಿಕಾ ಸಾಕಷ್ಟು ಟ್ರೋಲ್‌ಗೆ ಒಳಪಡಬೇಕಾಯಿತು. ಆದರೆ ಧೈರ್ಯ ಕಳೆದುಕೊಳ್ಳದ ರಶ್ಮಿಕಾ ತನ್ನ ಕೆಲಸದ ಮೇಲೆ ಗಮನಹರಿಸಿದರು. ಇಂದು ಆಕೆ ವೃತ್ತಿ ಜೀವನದ ಉತ್ತುಂಗಕ್ಕೆ ಏರಿದ್ದಾರೆ.
ವಿಜಯ್ ದೇವರಕೊಂಡ ಜೊತೆ ಸಂಬಂಧ?
ರಕ್ಷಿತ್ ಶೆಟ್ಟಿಯೊಂದಿಗೆ ದೂರವಾದ ಬಳಿಕ ರಶ್ಮಿಕಾ ಅವರ ಹೆಸರು ಅವರ ಗೀತಾ ಗೋವಿಂದಂ ಮತ್ತು 'ಡಿಯರ್ ಕಾಮ್ರೇಡ್' ಸಹನಟ ವಿಜಯ್ ದೇವರಕೊಂಡ ಅವರೊಂದಿಗೆ ಕೇಳಿಬಂದಿತ್ತು. ಈ ಜೋಡಿಯ ಆನ್-ಸ್ಕ್ರೀನ್ ಕೆಮಿಸ್ಟ್ರಿ ಮತ್ತು ಆಫ್-ಸ್ಕ್ರೀನ್ ಸ್ನೇಹವು ವದಂತಿಗಳಿಗೆ ಉತ್ತೇಜನ ನೀಡಿತು. ಗೋವಾದಲ್ಲಿ ಹೊಸ ವರ್ಷದ ಆಚರಣೆಯ ಸಮಯದಲ್ಲಿ ಅಥವಾ ಕುಟುಂಬ ಭೋಜನದ ಸಮಯದಲ್ಲಿ ಇಬ್ಬರೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಇತ್ತೀಚೆಗೆ ವಿಜಯ್ ಸಂದರ್ಶನವೊಂದರಲ್ಲಿ ತಾನು ಒಂಟಿಯಲ್ಲ ಎಂದು ಒಪ್ಪಿಕೊಂಡರು. ಇದಾದ ಬಳಿಕ ರಶ್ಮಿಕಾ ಅವರೊಂದಿಗಿನ ಸಂಬಂಧದ ಬಗ್ಗೆ ಚರ್ಚೆಗಳು ತೀವ್ರಗೊಂಡವು. ಆದರೆ ಈ ಬಗ್ಗೆಇಬ್ಬರೂ ಅಧಿಕೃತವಾಗಿ ದೃಢಪಡಿಸಿಲ್ಲ.